ಬೆಳ್ತಂಗಡಿ: ಕಳೆದ ಕೆಲವು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಕಲ್ಮಂಜ ಗ್ರಾಮದ ದಲಿತ ಸಮುದಾಯದ ಚೋಮು ನಲಿಕೆ ಎಂಬವರ ಮನೆಯ ಹಿಂಬದಿ ಗೋಡೆ ಸಂಪೂರ್ಣವಾಗಿ ಧರಾಶಾಹಿಯಾಗಿತ್ತು. ಮೇಲ್ಛಾವಣಿಗೂ ಹಾನಿಯಾಗಿತ್ತು.

ಈ ನಡುವೆ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಶಾಸಕ ಹರೀಶ್ ಪೂಂಜಾ ಅವರು ಚೋಮು ನಲಿಕೆ ಅವರ ಮನೆಗೂ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿ ತಾನೇ ಮುಂದೆ ನಿಂತು ಮನೆಯ ಸಂಪೂರ್ಣ ದುರಸ್ತಿಗೊಳಿಸಿ ವಾಸ ಯೋಗ್ಯ ಹೊಸ ಮನೆಯಂತೆ ನಿರ್ಮಿಸಿ ಕೊಡಲಾಗಿದ್ದು, ಚೋಮು ಅಜ್ಜಿಯ ಮುಖದಲ್ಲಿ ಸಂತಸ ಮೂಡುವಂತೆ ಮಾಡಿದ್ದಾರೆ.

ಚೋಮು ನಲಿಕೆ ಮನೆಗೆ ಆ. 3ರಂದು ಭೇಟಿ ನೀಡಿದ ಶಾಸಕರು, ಮನೆಯ ಪರಿಸ್ಥಿತಿ ಕಂಡು ಮರುಗಿದ್ದರು. ತಕ್ಷಣ ಸ್ಥಳೀಯ ಯುವಕರನ್ನು ಕರೆಸಿ, ಈ ಮನೆಯನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಿ ಅದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ತಾನೇ ಭರಿಸುತ್ತೇನೆ ಎಂದಿದ್ದರು. ಶಾಸಕರು ಮಾನವೀಯ ಸೇವೆಗೆ ಜೊತೆಯಾದ ಕಲ್ಮಂಜ ಬಿಜೆಪಿ ಗ್ರಾಮ ಸಮಿತಿ ಯುವಕರು ಆ. 9ರಂದು ಶ್ರಮದಾನ ಮೂಲಕ ಸುಸಜ್ಜಿತವಾದ ಮನೆ ನಿರ್ಮಿಸಿಕೊಟ್ಟರು. ಕಬ್ಬಿಣದ ರಾಡ್ ಬಳಸಿ, ಉತ್ತಮ ಶೀಟ್ ಅಳವಡಿಸಿ, ಮನೆಗೆ ಬಣ್ಣ ಬಳಿದು ಮನೆಯ ಸುತ್ತಮುತ್ತ ಜೆಸಿಬಿ ಮೂಲಕ ಸ್ವಚ್ಛಗೊಳಿಸಿದ್ದಾರೆ. ಅಲ್ಲದೆ ಮನೆಯೊಳಗೂ ಸ್ವಚ್ಛಗೊಳಿಸಿ, ಚೋಮು ಅಜ್ಜಿಗೆ ವಾಸ ಯೋಗ್ಯ ಮನೆಯನ್ನಾಗಿ ಪರಿವರ್ತಿಸಿದ್ದಾರೆ.ಕಲ್ಮಂಜ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ನಡೆದ ಈ ಮನೆ ನಿರ್ಮಾಣ ಕಾರ್ಯದಲ್ಲಿ ಸಮಾಜ ಸೇವಕ ಬಾಲಕೃಷ್ಣ ನೈಮಿಷ ಮಾಣಿಂಜೆ, ನೋಣಯ್ಯ ಗೌಡ, ಗಣೇಶ್ ಬಂಗೇರ ಮುಂಡಾಜೆ, ಶ್ರೀನಿವಾಸ್ ರಾವ್, ಪ್ರವೀಣ್ ಕರಿಯನೆಲ, ಕಲ್ಮಂಜ ಬೂತ್ ಅಧಕ್ಷರಾದ ಅನಿಲ್ ಕುಮಾರ್ ಮದಿಮಲ್ ಕಟ್ಟೆ, ಕಾರ್ಯದರ್ಶಿ ಗುರುರಾಜ್ ಕರಿಯನೆಲ, ಸಂದೀಪ್ ಪರಾರಿಮಜಲು, ಧನಂಜಯ ಮದಿಮಲ್ ಕಟ್ಟೆ, ಮೋಹನ್ ಮೂಡಾಯಿಬೆಟ್ಟು, ಜಗದೀಶ್ ಸತ್ಯನಪಲ್ಕೆ, ಪುರಕ್ಷಿತ್ ಬನದಬೈಲು, ಭರತೇಶ್ ಮದಿಮಲ್ ಕಟ್ಟೆ, ದೀಕ್ಷಿತ್ ಬನದಬೈಲು, ಹರೀಶ್ ಕಟ್ಟದಬೈಲು, ಶೃತೇಶ್ ಸತ್ಯನಪಲ್ಕೆ, ಜನಿತ್ ಸೋಮಂತ್ತಡ್ಕ, ಮುರಳಿ ಮೂಡಾಯಿಬೆಟ್ಟು, ಸಾಂತಪ್ಪ ಮದಿಮಲ್ ಕಟ್ಟೆ ಹಾಗೂ ಮತ್ತಿತ್ತರರು ಶ್ರಮದಾನದಲ್ಲಿ ಭಾಗವಹಿಸಿದ್ದರು.