ಸಾರಾಂಶ
ಮುಡಾದಲ್ಲಿ ಪತ್ನಿ ಹೆಸರಿನಲ್ಲಿ ಮುಖ್ಯಮಂತ್ರಿ ಬೇರೆ ಜಾಗ ತೆಗೆದುಕೊಂಡಿದ್ದಾರೆ. ಇವಿನ್ನೂ ಅಧಿವೇಶನದಲ್ಲಿ ಚರ್ಚೆಗೆ ಬಂದಿಲ್ಲ. ಇದರ ಮಧ್ಯೆ ಹಿಂದಿನ ಸರ್ಕಾರದ ಹಗರಣಗಳ ಹೊರಗೆ ಬರಲಿವೆ ಎಂದು ಪ್ರತಿಪಕ್ಷವನ್ನು ಹೆದರಿಸುತ್ತಿದ್ದಾರೆ.
ಹುಬ್ಬಳ್ಳಿ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆದಿರುವ ಎಲ್ಲ ಹಗರಣಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಎಸ್‌ಐಟಿ, ನಿವೃತ್ತ ನ್ಯಾಯಾಧೀಶರು ಅಥವಾ ಸಿಬಿಐಗೆ ವಹಿಸುವ ಧೈರ್ಯವಿದೆಯೇ? ಎಂದು ಸಂಸದ ಜಗದೀಶ ಶೆಟ್ಟರ್ ಸವಾಲು ಹಾಕಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮ ಹಗರಣ ಕುರಿತು ಒಂದೊಂದೇ ಮಾಹಿತಿಗಳು ಹೊರಗಡೆ ಬರುತ್ತಿವೆ. ಇಷ್ಟೆಲ್ಲ ಹಗರಣ ನಡೆದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಏನೂ ಅಗಿಯೇ ಇಲ್ಲ ಎನ್ನುತ್ತಿದ್ದರು. ಆದರೆ, ಈಗ ಹಗರಣವಾಗಿರುವುದು ಸತ್ಯ ಎನ್ನುತ್ತಿದ್ದಾರೆ. ಇಂತಹ ಭಂಡತನದ ಹೇಳಿಕೆ ಸರಿಯಲ್ಲ ಎಂದರು.
ಮುಡಾದಲ್ಲಿ ಪತ್ನಿ ಹೆಸರಿನಲ್ಲಿ ಮುಖ್ಯಮಂತ್ರಿ ಬೇರೆ ಜಾಗ ತೆಗೆದುಕೊಂಡಿದ್ದಾರೆ. ಇವಿನ್ನೂ ಅಧಿವೇಶನದಲ್ಲಿ ಚರ್ಚೆಗೆ ಬಂದಿಲ್ಲ. ಇದರ ಮಧ್ಯೆ ಹಿಂದಿನ ಸರ್ಕಾರದ ಹಗರಣಗಳ ಹೊರಗೆ ಬರಲಿವೆ ಎಂದು ಪ್ರತಿಪಕ್ಷವನ್ನು ಹೆದರಿಸುತ್ತಿದ್ದಾರೆ. ಹಿಂದಿನ ಸರ್ಕಾರದಲ್ಲಿ ಹಗರಣ ಆಗಿದ್ದರೆ ನಿಮ್ಮ ಸರ್ಕಾರ ಬಂದು ವರ್ಷವಾಯಿತು. ಈ ವರೆಗೂ ಏಕೆ ತನಿಖೆಗೆ ಒಪ್ಪಿಸಲಿಲ್ಲ ಎಂದು ಪ್ರಶ್ನಿಸಿದರು.ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣ ಹೊರಗಡೆ ತಂದಿದ್ದು ನಾನು. ಆಗ ಕೆಂಪಣ್ಣ ಆಯೋಗದಿಂದ ತನಿಖೆ ಮಾಡಿಸಲಾಯಿತು. ವರದಿ ಕೊಟ್ಟಿದ್ದರೂ ಅದನ್ನು ಸಿದ್ದರಾಮಯ್ಯ ಮುಚ್ಚಿಟ್ಟರು. ವರದಿ ಕೊಟ್ಟ ನಂತರ ಸದನದಲ್ಲಿ ಮಂಡನೆ ಮಾಡಬೇಕು. ಇದಕ್ಕೂ ಮೊದಲೇ ನಾನು ನಿರಪರಾಧಿ ಎಂದು ಹೇಳುತ್ತಿದ್ದಾರೆ. ನೀವು ನಿರಪರಾಧಿ ಆಗಿದ್ದರೆ ಅರ್ಕಾವತಿ ವರದಿ ಮಂಡನೆ ಮಾಡಿ. ನೀವು ಮಾಡದೇ ಇದ್ದರೆ ತಪ್ಪಿತಸ್ಥರು ಎಂದಾಗುತ್ತದೆ. ವಿತಂಡವಾದ ಮಾಡಬಾರದು. ಇವೆಲ್ಲ ಪ್ರಕರಣ ಡೈವರ್ಟ್ ಮಾಡುವ ಸಲುವಾಗಿಯೇ ಸಿದ್ದರಾಮಯ್ಯ ಕನ್ನಡಿಗರಿಗೆ ಮೀಸಲು ವಿಷಯವನ್ನು ಇಂದು ಮುನ್ನೆಲೆಗೆ ಬಿಟ್ಟಿದ್ದಾರೆ ಎಂದು ಹರಿಹಾಯ್ದರು.