ಶಾಲಾ ಫಲಿತಾಂಶ ಹೆಚ್ಚಳಕ್ಕೆ ಆಡಳಿತಾಧಿಕಾರಿ ಸಲಹೆ: ಕೆ.ಪಿ.ಮಧುಸೂಧನ್

| Published : Jul 21 2024, 01:17 AM IST

ಶಾಲಾ ಫಲಿತಾಂಶ ಹೆಚ್ಚಳಕ್ಕೆ ಆಡಳಿತಾಧಿಕಾರಿ ಸಲಹೆ: ಕೆ.ಪಿ.ಮಧುಸೂಧನ್
Share this Article
  • FB
  • TW
  • Linkdin
  • Email

ಸಾರಾಂಶ

ಮಧುಸೂಧನ್, ಶಿಕ್ಷಣ ಇಲಾಖೆ ಫಲಿತಾಂಶ ಕುಂಠಿತಗೊಂಡಿರುವ ಬಗ್ಗೆ ಪ್ರಸ್ತಾಪಿಸಿ, ಶೇ.20ರಷ್ಟು ಫಲಿತಾಂಶ ಕಡಿಮೆಯಾಗಿದ್ದು, ಪ್ರಸಕ್ತ ವರ್ಷದಲ್ಲಿ ಫಲಿತಾಂಶ ಉತ್ತಮಗೊಳ್ಳಲು ಏನು ಕ್ರಮಗಳನ್ನು ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ನಗರದ ಸಾಮರ್ಥ್ಯ ಸೌಧದಲ್ಲಿ ತಾಲೂಕು ಪಂಚಾಯ್ತಿ ಆಡಳಿತಾಧಿಕಾರಿ ಕೆ.ಪಿ.ಮಧುಸೂಧನ್ ಅಧ್ಯಕ್ಷತೆಯಲ್ಲಿ 2024-25ನೇ ಸಾಲಿನ ತಾಲೂಕು ಪಂಚಾಯ್ತಿ ಒಂದನೇ ಸಾಮಾನ್ಯ ಸಭೆ ನಡೆಯಿತು.

ಆಡಳಿತಾಧಿಕಾರಿ ಮಧುಸೂಧನ್, ಶಿಕ್ಷಣ ಇಲಾಖೆ ಫಲಿತಾಂಶ ಕುಂಠಿತಗೊಂಡಿರುವ ಬಗ್ಗೆ ಪ್ರಸ್ತಾಪಿಸಿ, ಶೇ.20ರಷ್ಟು ಫಲಿತಾಂಶ ಕಡಿಮೆಯಾಗಿದ್ದು, ಪ್ರಸಕ್ತ ವರ್ಷದಲ್ಲಿ ಫಲಿತಾಂಶ ಉತ್ತಮಗೊಳ್ಳಲು ಏನು ಕ್ರಮಗಳನ್ನು ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಇವರಿಗೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಂ ತಿಪ್ಪೇಸ್ವಾಮಿ, ಪ್ರತಿ ಮಕ್ಕಳು 50 ಮತ್ತು ಅದಕ್ಕೂ ಹೆಚ್ಚು ಅಂಕ ತೆಗೆಯಲೇಬೇಕೆಂಬ ಉದ್ದೇಶದಿಂದ ತಯಾರಿ ಮಾಡುವ ಪ್ರಯತ್ನ ಶುರು ಮಾಡಿದ್ದೇವೆ. ಫಲಿತಾಂಶದ ಪ್ರಗತಿಗೆ 12 ಅಂಶಗಳ ಕ್ರಿಯಾಯೋಜನೆ ತಯಾರಿಸಿಕೊಂಡಿದ್ದೇವೆ. ಸಾಧಾರಣ ಬುದ್ದಿಶಕ್ತಿ ಮಕ್ಕಳಿಗೂ ಅನುಕೂಲವಾಗಲಿ ಎಂದು ಅಕ್ಟೋಬರ್‌ ತಿಂಗಳಲ್ಲಿ ಕೋಚಿಂಗ್ ನೀಡಲಾಗುವುದು. ಪ್ರಿಪರೇಟರಿ ಫಲಿತಾಂಶದಲ್ಲಿ ಕಡಿಮೆ ಸಾಮರ್ಥ್ಯದ ಮಕ್ಕಳ ಬಗ್ಗೆ ಮತ್ತೆ ಗಮನಹರಿಸಲು ಚಿಂತಿಸಲಾಗಿದೆ.

ಪೋಷಕರನ್ನು ಶಾಲೆಗಳಿಗೆ ಕರೆಸಿ ಮಕ್ಕಳ ಪ್ರಗತಿ ಬಗ್ಗೆ ಚರ್ಚಿಸಲಾಗುವುದು. ಪುಸ್ತಕಗಳು ಬಂದಿದ್ದು, ಯಾವುದೇ ಕೊರತೆಯಿಲ್ಲ. ಶೂ, ಸಾಕ್ಸ್ ಹಣ ಬಂದಿದ್ದು, ಎಸ್‌ಡಿಎಂಸಿ ಖಾತೆಗೆ ಹಾಕಲಾಗಿದೆ. ಶೌಚಾಲಯ ನಿರ್ಮಾಣಕ್ಕೆ ಜಾಗ ಮತ್ತು ಬಜೆಟ್ ಸಮಸ್ಯೆ ಇಲ್ಲದಿದ್ದರೂ ಸಹ ಕಾಮಗಾರಿ ಕುಂಠಿತಗೊಂಡಿವೆ. ಕೆಲವು ಕಡೆ ಮಹಿಳಾ ಶಿಕ್ಷಕಿಯರು ಶಾಲೆಯಲ್ಲಿ ಶೌಚಾಲಯ ಇಲ್ಲದೆ ಶಾಲೆ ಪಕ್ಕದ ಮನೆಗಳ ಶೌಚಾಲಯ ಬಳಸುವಂತಾಗಿದೆ. ಬೆನಕನಹಳ್ಳಿಯಲ್ಲಿ ಶೌಚಾಲಯ ಕೇಳಿ ವರ್ಷವಾಗಿದೆ. ಈ ಬಾರಿ ಫಲಿತಾಂಶ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿನೇಶ್, ಹಾಸ್ಟೆಲ್ ವಾರ್ಡನ್‌ಗಳ ಕೊರತೆ ಇದೆ ಎಂದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಮಾಹಿತಿ ನೀಡಿ, ಜೂ.10ರಿಂದ ಸಂತೃಪ್ತ ಮಳೆ ಆಗಿಲ್ಲ. ಈಗ ಶೇಂಗಾ ಬಿತ್ತನೆ ಸಮಯ. ಭೂಮಿ ಹದ ಮಾಡಿ ಬೀಜ ಇಟ್ಟುಕೊಂಡು ರೈತರು ಕಾಯುತ್ತಿದ್ದಾರೆ. ನಮ್ಮಲ್ಲಿ ಬೀಜದ ಕೊರತೆ ಇಲ್ಲ ಎಂದರು. ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೆ ಲೋಕೇಶ್, ಹನಿ ನೀರಾವರಿಗೆ ಅರ್ಜಿ ಪಡೆಯಲಾಗುತ್ತಿದೆ. ಜೇನು ಕೃಷಿಗೆ ಆದ್ಯತೆ ನೀಡಿ ಈಗಾಗಲೇ ರೈತರಿಗೆ ಜೇನು ಪೆಟ್ಟಿಗೆ ವಿತರಣೆ ಮಾಡಲಾಗಿದೆ. ತಾಲೂಕಿನಲ್ಲಿ ಇತ್ತೀಚೆಗೆ ದಾಳಿಂಬೆ ಬೆಳೆ ಜಾಸ್ತಿ ಆಗುತ್ತಿದೆ ಎಂದರು.

ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಸ್ಲಂ ಭಾಷ ಮಾಹಿತಿ ನೀಡಿ ತಾಲೂಕಿನಲ್ಲಿ 236 ಆರ್‌ಓ ಪ್ಲಾಂಟ್ ಇದ್ದು, 220 ಪ್ಲಾಂಟ್ ಕಾರ್ಯರೂಪದಲ್ಲಿವೆ. ಸುಮಾರು 5 ವರ್ಷದ ಹಿಂದಿನ ಹಳೆಯವು ಇವೆ. ಅವುಗಳು ಸಹ ಇನ್ನೊಂದಷ್ಟು ವರ್ಷ ಕಾರ್ಯ ನಿರ್ವಹಿಸಲಿವೆ. ಜೆಜೆಎಂ ಕಾಮಗಾರಿ ಪ್ರಗತಿಯಲ್ಲಿದ್ದು ಈಗಾಗಲೇ ಕೆಲವು ಕಡೆ ಕಾರ್ಯರೂಪಕ್ಕೆ ಬಂದಿವೆ ಎಂದರು.

ಆಡಳಿತಾಧಿಕಾರಿ ಮಧುಸೂಧನ್ ಮಾತನಾಡಿ, ಹಾಸ್ಟೆಲ್‌ಗಳಲ್ಲಿ ಗುಣಮಟ್ಟದ ಆಹಾರ ನೀಡಬೇಕು. ಮಕ್ಕಳ ಫಲಿತಾಂಶದ ಬಗ್ಗೆ ಇನ್ನಷ್ಟು ಜವಾಬ್ದಾರಿ ತೆಗೆದುಕೊಂಡು ಪ್ರಸಕ್ತ ವರ್ಷ ಮಕ್ಕಳ ಶಿಕ್ಷಣ ಮಟ್ಟ ಸುಧಾರಿಸಲು ಅಗತ್ಯ ಕ್ರಮ ಕೈಗೊಳ್ಳಿ. ರೈತರ ಯೋಜನೆಗಳನ್ನು ಅರ್ಹರಿಗೆ ತಲುಪಿಸಿ. ರೈತರನ್ನು ಯಾವುದೇ ಕಾರಣಕ್ಕೂ ಅಲೆಸಬೇಡಿ. ನಿರ್ಮಾಣ ಹಂತದ ಅಂಗನವಾಡಿ ಕಟ್ಟಡ ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ಇಒ ಸತೀಶ್ ಕುಮಾರ್, ಪಶು ವೈದ್ಯಾಧಿಕಾರಿ ಮಹಮ್ಮದ್ ಹುಸೇನ್,ಮೀನುಗಾರಿಕೆ ಇಲಾಖೆ ಮಂಜುನಾಥ್, ರೇಷ್ಮೆ ಇಲಾಖೆ ಈಶ್ವರಪ್ಪ, ಆಹಾರ ಇಲಾಖೆ ತಿಪ್ಪೇಸ್ವಾಮಿ, ಕಾರ್ಮಿಕ ನಿರೀಕ್ಷಕ ಅಲ್ಲಾಭಕ್ಷ್, ಆನಂದ್ ಇದ್ದರು.