ಸಾರಾಂಶ
ಉಚ್ಚಂಗೆಮ್ಮದೇವಿಯನ್ನು ಮೆರವಣಿಗೆ ಮೂಲಕ ಕೋಟೆಯಲ್ಲಿರುವ ಬನ್ನಿ ಮಂಟಪಕ್ಕೆ ಕರೆ ತಂದರು.
ಹರಪನಹಳ್ಳಿ: ಅಂಬುಛೇದನ ವಿಶೇಷ ಕಾರ್ಯಕ್ರಮದ ಮೂಲಕ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಇತಿಹಾಸ ಪ್ರಸಿದ್ಧ ಉಚ್ಚಂಗೆಮ್ಮ ದೇವಾಲಯದಲ್ಲಿ ನವರಾತ್ರಿಯ ದಸರಾ ಉತ್ಸವಕ್ಕೆ ಗುರುವಾರ ಸಂಜೆ ತೆರೆ ಬಿದ್ದಿತು.
ಹಿಂದೆ ಶುಂಭ, ನಿಶುಂಭ, ಮಹಿಷಾಸುರ ಎಂಬ ರಾಕ್ಷಕರ ಕಿರುಕುಳ ಜಾಸ್ತಿಯಾದಾಗ ದೇವತೆಗಳೆಲ್ಲ ಆಗಮಿಸಿ ಉಚ್ಚಂಗೆಮ್ಮದೇವಿಯ ಬಳಿ ಈ ರಾಕ್ಷಸರ ಕಿರುಕುಳದ ಬಗ್ಗೆ ಹೇಳಿದಾಗ ದೇವಿ ಆ ರಾಕ್ಷಸರನ್ನು ಸಂಹಾರ ಮಾಡಿದ ವಿಜಯ ದಶಮಿ ದಿನದಂದು ಅಂಬು ಛೇದನ (ಬಿಲ್ಲಿನಿಂದ ಬನ್ನಿ ಮರಕ್ಕೆ ಬಾಣ ಹೊಡೆಯುವುದು) ಎಂಬ ಕಾರ್ಯಕ್ರಮ ಅನಾದಿ ಕಾಲದಿಂದಲೂ ನಡೆಸುತ್ತಾ ಬರಲಾಗಿದೆ ಎಂದು ಹಿರಿಯ ಭಕ್ತರು ತಿಳಿಸುತ್ತಾರೆ.ನವರಾತ್ರಿ 9 ದಿನಗಳ ಕಾಲ ದೇವಿಗೆ ಪ್ರತಿದಿನ ಒಂದೊಂದು ರೀತಿ ವಿಶೇಷ ಪೂಜೆ ಸಲ್ಲಿಸಿ ಅಂತಿಮ ದಿನವಾದ ಗುರುವಾರ ದೇವಸ್ಥಾನದಿಂದ ರಾಜಬೀದಿಯಲ್ಲಿ ಉಚ್ಚಂಗೆಮ್ಮದೇವಿಯನ್ನು ಮೆರವಣಿಗೆ ಮೂಲಕ ಕೋಟೆಯಲ್ಲಿರುವ ಬನ್ನಿ ಮಂಟಪಕ್ಕೆ ಕರೆ ತಂದರು.
ಬನ್ನಿಮಂಟಪದ ಬಳಿ ಉಚ್ಚಂಗಿದುರ್ಗ, ಯು.ಕಲ್ಲಹಳ್ಳಿ,ಚಟ್ನಿಹಳ್ಳಿ, ಯು.ಬೇವಿನಹಳ್ಳಿ, ಹಿರೇಮೇಗಳಗೇರಿ ಸೇರಿದಂತೆ ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಜಮಾಯಿಸಿರುತ್ತಾರೆ, ಅರ್ಚಕ ಹಾಲಪ್ಪ ಬಿಲ್ಲಿನಿಂದ ಬಣವನ್ನು ಬನ್ನಿಮರಕ್ಕೆ ಬಿಟ್ಟರು. ಆಗ ಭಕ್ತರು ಬನ್ನಿ ಗಿಡದಿಂದ ಬನ್ನಿ ಕಿತ್ತು ದೇವರಿಗೆ ಹಾಕಿ ಬೇಡಿಕೊಂಡರು. ನಂತರ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡರು.ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ, ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿ, ಅರ್ಚಕರು, ಸಾವಿರಾರು ಭಕ್ತರು ಉಪಸ್ಥಿತರಿದ್ದರು.
ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಕೋಟೆಯಲ್ಲಿರುವ ಬನ್ನಿ ಮಂಟಪದ ಬನ್ನಿಮರಕ್ಕೆ ಅರ್ಚಕ ಮಂಜಪ್ಪ ಬಾಣ ಬಿಡುತ್ತಿರುವುದು.