ಎಲ್ಲರೂ ಒಂದೇ ಎಂಬ ಭಾವ ಬಿತ್ತುವ ಕೇಂದ್ರವಾಗಲಿ

| Published : Oct 03 2025, 01:07 AM IST

ಎಲ್ಲರೂ ಒಂದೇ ಎಂಬ ಭಾವ ಬಿತ್ತುವ ಕೇಂದ್ರವಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಆಂಜನೇಯ ಸ್ವಾಮಿದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಮಠದ ಆವರಣದಲ್ಲಿ ಸಮಾವೇಶಗೊಂಡಿತು.

ಕುರುಗೋಡು: ಇಲ್ಲಿಗೆ ಸಮೀಪದ ಸಿದ್ದರಾಂಪುರ ಗ್ರಾಮದ ಶ್ರೀಶೈಲ ಕದಳೀವನ ಸಿದ್ದೇಶ್ವರ ತಾತನವರ ಮಠದಲ್ಲಿ ಶ್ರೀಮಠದ ಪೀಠಿಧಿಪತಿ ಚಿದಾನಂದ ತಾತಾನವರ ನೇತೃತ್ವದಲ್ಲಿ ೨೪ನೇ ವರ್ಷದ ಶರನ್ನವರಾತ್ರಿ ಶ್ರೀದೇವಿ ಪುರಾಣದ ಅಂಗವಾಗಿ ಕದಳೀವನ ಸಿದ್ದೇಶ್ವರ ತಾತನವರ ಮಠದಲ್ಲಿ ದುರ್ಗಾಷ್ಟಮಿ ಅಂಗವಾಗಿ ರಾತ್ರಿ ದೇವಿಯ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಯಿತು.

ಇಲ್ಲಿನ ಆಂಜನೇಯ ಸ್ವಾಮಿದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಮಠದ ಆವರಣದಲ್ಲಿ ಸಮಾವೇಶಗೊಂಡಿತು.

ನಂದಿಧ್ವಜ, ಸಮ್ಮಾಳ, ಡೊಳ್ಳು, ಮೇಳ, ವೀರಗಾಸೆ, ಸುಮಂಗಲೆಯರ ಕಳಸದೊಂದಿಗೆ ಭಾಗವಹಿಸಿದ್ದು ಮೆರವಣಿಗೆಯ ಮೆರಗು ಹೆಚ್ಚಿಸಿತ್ತು. ಸಾವಿರಾರು ಭಕ್ತರು ಭಾಗವಹಿಸಿ ಶ್ರೀದೇವಿ ಉತ್ಸವ ಮೂರ್ತಿ ಮೆರವಣಿಗೆಗೆ ಸಾಕ್ಷಿಯಾದರು.

ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಕೊಟ್ಟೂರು ಸ್ವಾಮಿ ಶಾಖಾ ವಿರಕ್ತ ಮಠದ ನಿರಂಜನಪ್ರಭು ಸ್ವಾಮಿ, ಶ್ರೀಮಠದಲ್ಲಿ ಯಾವುದೇ ಶ್ರೀಮಂತ, ಬಡವ, ಮೇಲು, ಕೀಳಿಲ್ಲ. ಎಲ್ಲರೂ ಒಂದೇ ಎಂಬ ಭಾವ ಬಿತ್ತುವ ಜತೆಗೆ ಕೇಂದ್ರವಾಗಿರಬೇಕು. ಸಿದ್ದರಾಂಪುರದ ಕದಳೀವನ ಶ್ರೀ ಶಿದ್ದೇಶ್ವರ ತಾತನವರ ಸ್ಥಾನವೆಂದರೆ ಅದು ಸಿಂಹಾಸನವಲ್ಲ ಅದೊಂದು ಲೋಕಕಲ್ಯಾಣದ ಕಾರ್ಯ ಎಂದರು.

ಮನವಿಲ್ಲದ ಭಕ್ತಿ ದೇವರಿಗೆ ಅರ್ಪಿತವಾಗುವುದಿಲ್ಲ. ಎಲ್ಲ ಚಿಂತೆಗಳನ್ನು ಮನೆಯಲ್ಲಿ ಬಿಟ್ಟು ಭಕ್ತಿಯಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮನದ ಮಲೀನ ಕಳೆದುಕೊಳ್ಳಿ ಎಂದರು.

ಶ್ರೀಮಠದಲ್ಲಿ ಕಾಲಕಾಲಕ್ಕೆ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಾಡಿನ ಭಕ್ತರ ಒಳಿತಿಗಾಗಿ ಚಿದಾನಂದ ತಾತನವರು ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ದರೂರು ಕೊಟ್ಟೂರುಸ್ವಾಮಿ ಶಾಖಾ ವಿರಕ್ತಮಠದ ಕೊಟ್ಟೂರು ದೇಶಿಕರು ಮಾತನಾಡಿ, ದೇವಿಪುರಾಣದಲ್ಲಿ ಮನುಷ್ಯರಲ್ಲಿನ ಕಾಮ, ಕ್ರೋಧ, ಮೋಹ, ಮಧ, ಮತ್ಸರ, ಸ್ವಾರ್ಥ, ಅನ್ಯಾಯ, ಅಮಾನವೀಯತೆ ಮತ್ತು ಅಹಂಕಾರ ಗುಣಗಳನ್ನು ಹೋಗಲಾಡಿಸಿ ನೈಜಮಾನವನಾಗಿ ಆದರ್ಶ ಜೀವನ ಸಾಗಿಸುವ ದಾರಿ ತೋರಿಸುತ್ತದೆ ಎಂದರು.

ದುರ್ಗಾಷ್ಟಮಿ ಅಂಗವಾಗಿ ಶ್ರೀಮಠದಲ್ಲಿ ಚಂಡಿಕಾ ಹೋಮ, ಹವನ, ವಿಶೇಷ ಪೂಜಾ ವಿಧಿವಿಧಾನಗಳು ಜರುಗಿದವು. ಜಿಲ್ಲೆಯ ಎಲ್ಲ ಭಾಗಗಳಿಂದ ಶ್ರೀಮಠದ ಭಕ್ತಿರು ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾದರು.

ಕದಳೀವನ ಸಿದ್ದೇಶ್ವರ ತಾತನವರ ಶ್ರೀಮಠದ ಕಾಯಕಯೋಗಿ ಚಿದಾನಂದಯ್ಯ ತಾತನವರು ಸಾನ್ನಿಧ್ಯ ವಹಿಸಿದ್ದರು. ಶ್ರೀಶೈಲ ಭಿಕ್ಷಾವರ್ತಿ ಮಠದ ವೀರಭದ್ರ ಶಿವಾಚಾರ್ಯರು ಉಪಸ್ಥಿತರಿದ್ದರು.

ಪುರಾಣ ಪ್ರವಾಚನಕರಾದ ರೇವಣ್ಣ ಸಿದ್ದಯ್ಯ ಸ್ವಾಮಿ, ಪುರಾಣವಾಚಕರಾದ ಎಸ್.ವಿ. ಪ್ರಭುಲಿಂಗನಗೌಡ ಮುಷ್ಟಗಟ್ಟೆ, ಶರಣಪ್ಪ ಬಳ್ಳೊಳ್ಳಿ, ತಬಲವಾದಕ ಕೆ. ಭೀಮೇಶ್, ಕ್ಯಾಷಿಯೋವಾದಕ ಟಿ.ಎಚ್. ಶೇಕ್ಷಾವಲಿ ಹಾಗೂ ತೇಜುಮೂರ್ತಿ, ವೀರೇಶ್ ಕಾರ್ಯಕ್ರಮ ನಿರ್ವಹಿಸಿದರು.ಕುರುಗೋಡು೧

ಕುರುಗೋಡು ಸಮೀಪದ ಸಿದ್ದರಾಂಪುರ ಗ್ರಾಮದ ಶ್ರೀಶೈಲ ಕದಳೀವನ ಸಿದ್ದೇಶ್ವರ ಸ್ವಾಮಿ ಮಠದಲ್ಲಿ ದುರ್ಗಾಷ್ಟಮಿ ಅಂಗವಾಗಿ ಮಂಗಳವಾರ ರಾತ್ರಿ ಚಂಡಿಕಾ ಹೋಮ ಜರುಗಿತು.