ಹೋಳಿ ಬಣ್ಣಗಳಲ್ಲಿ ಮಿಂದೆದ್ದ ದಾವಣಗೆರೆ

| Published : Mar 26 2024, 01:16 AM IST

ಸಾರಾಂಶ

ಹೋಳಿ ಹಬ್ಬದ ಬಣ್ಣದಲ್ಲಿ ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯ ಜನತೆ ಸೋಮವಾರ ಮಿಂದೆದ್ದರು. ಮಕ್ಕಳು, ವಯಸ್ಕರು ಎಂಬ ಬೇಧಭಾವ ಮರೆತು, ಉತ್ಸಾಹದಿಂದ ಬಣ್ಣಗಳೊಂದಿಗೆ ಹೋಳಿ ಆಟ ಆಡಿದರು. ಬೆಳಗ್ಗೆಯಿಂದಲೇ ಮಕ್ಕಳು, ಮಹಿಳೆಯರು, ಯುವಕ- ಯುವತಿಯರು ತಮ್ಮ ಸ್ನೇಹಿತರು, ಬಂಧು, ಬಳಗ, ನೆರೆ ಹೊರೆಯವರೊಂದಿಗೆ ಹೋಳಿ ಸಂಭ್ರಮದಲ್ಲಿ ಭಾಗಿಯಾದರು.

- ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಮತ್ತೆ ಅಂಗಿ ಹರಿದುಕೊಳ್ಳು ವಿಕೃತ ಆಚರಣೆ!

- ಹಣ್ಣು, ಸೊಪ್ಪು, ತರಕಾರಿಯ ಹರ್ಬಲ್ ಹೋಳಿ ಮೂಲಕ ಮಾದರಿ ಮಹಿಳೆಯರು - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಹೋಳಿ ಹಬ್ಬದ ಬಣ್ಣದಲ್ಲಿ ನಗರ ಸೇರಿದಂತೆ ಜಿಲ್ಲೆಯ ಜನತೆ ಸೋಮವಾರ ಮಿಂದೆದ್ದರು. ಮಕ್ಕಳು, ವಯಸ್ಕರು ಎಂಬ ಬೇಧಭಾವ ಮರೆತು, ಉತ್ಸಾಹದಿಂದ ಬಣ್ಣಗಳೊಂದಿಗೆ ಹೋಳಿ ಆಟ ಆಡಿದರು.

ಬೆಳಗ್ಗೆಯಿಂದಲೇ ಮಕ್ಕಳು, ಮಹಿಳೆಯರು, ಯುವಕ- ಯುವತಿಯರು ತಮ್ಮ ಸ್ನೇಹಿತರು, ಬಂಧು, ಬಳಗ, ನೆರೆ ಹೊರೆಯವರೊಂದಿಗೆ ಹೋಳಿ ಸಂಭ್ರಮದಲ್ಲಿ ಭಾಗಿಯಾದರು.

ಮಕ್ಕಳಂತೂ ಸೋಮವಾರದಿಂದಲೇ ಬಣ್ಣಗಳು, ಪಿಚಕಾರಿಗಳು, ವಾಟರ್ ಗನ್‌ಗಳ ಹಿಡಿದು ಆಟದಲ್ಲಿ ತೊಡಗಿದ್ದರು. ಬೆಳಗ್ಗೆ ಏಳುತ್ತಿದ್ದಂತೆ ಅಂಗಳಕ್ಕೆ ಜಿಗಿದು, ಹ್ಯಾಪಿ ಹೋಳಿ ಹ್ಯಾಪಿ ಹೋಳಿ ಅನ್ನುತ್ತಾ ಸ್ನೇಹಿತರು, ಹಿರಿಯರಿಗೆ ಬಣ್ಣ ಎರಚುತ್ತಾ ಸಂಭ್ರಮಿಸಿದರು. ಸೈಕಲ್ ಗಳನ್ನೇರಿ, ಸ್ನೇಹಿತರ ಮನೆಗಳಿಗೆ ಹೋಗಿ ಗುಂಪುಗುಂಪಾಗಿ ಬಣ್ಣ ಎರಚಾಡಿದರು.

ಕಾಲೇಜು ವಿದ್ಯಾರ್ಥಿನಿಯರಂತೂ ಹುಡುಗರಿಗಿಂತ ತಾವೇನೂ ಕಡಿಮೆ ಇಲ್ಲವೆಂಬಂತೆ ದ್ವಿಚಕ್ರ ವಾಹನ, ಕಾರುಗಳಲ್ಲಿ ಸಂಚರಿಸಿ, ಹೋಳಿ ಸಂಭ್ರಮಿಸಿದರು. ಯುವತಿಯರು, ಗೃಹಿಣಿಯರು ಸಹ ಕುಟುಂಬದ ಮಕ್ಕಳು, ನೆರೆ ಹೊರೆಯವರ ಜೊತೆಗೂಡಿ ಹೋಳಿ ಆಡಿದರು. ಡಿಜೆ ಹಾಡುಗಳು, ನಾಸಿಕ್ ಡೋಲ್ ಸದ್ದಿಗೆ ಹೆಜ್ಜೆ ಹಾಕಿದರು.

ಗಮನ ಸೆಳೆದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತ ಸಂಭ್ರಮ:

ಪ್ರತಿ ವರ್ಷದಂತೆ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಈ ಬಾರಿಯೂ ಸಾಮೂಹಿಕ ಹೋಳಿ ಆಚರಣೆಗೆ ಯುವಸಾಗರವೇ ಜಮಾಯಿಸಿತ್ತು. ಯುವತಿಯರು, ಮಹಿಳೆಯರಿಗೆ ಸಮೀಪದಲ್ಲೇ ಹೊಳಿ ಸಂಭ್ರಮಕ್ಕೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿತ್ತು. ಗಂಟೆಗಟ್ಟಲೆ ಡಿಜೆ ಸದ್ದಿಗೆ ಹೋಳಿ ಹಬ್ಬದ ಸಂಭ್ರಮದಲ್ಲಿ ಹೆಜ್ಜೆ ಹಾಕಿದರು. ಕಳೆದ ವರ್ಷಕ್ಕಿಂತ ಈ ಸಲ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗಿತ್ತು. ಸ್ನೇಹಿತ-ಸ್ನೇಹಿತೆಯರ ತಲೆ ಮೇಲೆ ಮೊಟ್ಟೆ, ಟೊಮೆಟೋ ಒಡೆಯುವ ಕೀಟಲೆಗಳೂ ನಡೆದವು.

ಆದರೆ, ಸಹಜವಾಗಿ ಹೋಳಿ ಆಡಬೇಕಿದ್ದ ಯುವಕರಂತೂ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಒಬ್ಬರು ಧರಿಸಿದ್ದ ಅಂಗಿಯನ್ನು ಮತ್ತೊಬ್ಬರು ಹರಿಯುತ್ತ ವಿಕೃತಿ ಮೆರೆದರು. ಈ ನಡೆ ಈ ಸಲವೂ ಪುನರಾವರ್ತನೆಯಾಯಿತು. ಪೊಲೀಸ್ ಇಲಾಖೆ ಯಾವ ಯುವಕರ ಮೈಮೇಲೆ ಅಂಗಿ ಇರುವುದಿಲ್ಲವೋ ಅಂಥವರಿಗೆ ಬೆನ್ನುಹತ್ತಿ ಬಾರಿಸಿದ್ದರೆ, ಮುಂದಿನ ವರ್ಷದಿಂದ ಅಂಗಿ ಹರಿಯುವ ವಿಕೃತ ಆಚರಣೆಯಾದರೂ ನಿಲ್ಲುತ್ತಿತ್ತು ಎಂಬ ಮಾತುಗಳು ಕೆಲ ಹಿರಿಯರಿಂದ ಕೇಳಿಬಂದವು.

ಕೆಲವರು ಕಡೆ ಗೃಹಿಣಿಯರು ತಮ್ಮ ಸ್ನೇಹಿತೆಯರೆಲ್ಲಾ ಸೇರಿಕೊಂಡು, ಹಣ್ಣುಗಳು, ಸೊಪ್ಪು, ತರಕಾರಿಗಳನ್ನು ಬಳಸಿ, ನೈಸರ್ಗಿಕ ಬಣ್ಣ ಆಡುವ ಮೂಲಕ ಅರ್ಥ ಪೂರ್ಣವಾಗಿ ಹೋಳಿ ಆಚರಿಸಿದರು. ಹಣ್ಣು, ತರಕಾರಿ, ಸೊಪ್ಪುಗಳಿಂದ ಹಸಿರು, ಕೇಸರಿ, ಕೆಂಪು ಬಣ್ಣದ ಪೇಸ್ಟ್ ಮಾಡಿಕೊಂಡು, ಹರ್ಬಲ್ ಹೋಳಿ ಆಚರಿಸುವ ಮೂಲಕ ಇತರರಿಗೂ ಪ್ರೇರಣೆಯಾದರು. ಅನೇಕ ಕಡೆ ಇಂತಹ ನೈಸರ್ಗಿಕ ಹೋಳಿ ಆಚರಣೆಯೂ ಇತರರಿಗೂ ಪ್ರೇರಣೆಯಾಗುವಂತೆ ಕಂಡುಬಂದಿತು.

ಹೋಳಿ ಹಿನ್ನೆಲೆ ಒಂದೇ ಬೈಕ್‌ನಲ್ಲಿ 3-4 ಜನ ಸಾಗುವುದು, ಮೈಮೇಲೆ ಪ್ರಜ್ಞೆ ಇಲ್ಲದಂತೆ ಕುಡಿದ ಮತ್ತಿನಲ್ಲಿ ಸದ್ದು ಮಾಡಿಕೊಂಡು ಬೈಕ್ ಚಾಲನೆ ಮಾಡುವುದು, ಅಪರಿಚರಿಗೆ, ಕೆಲಸಕ್ಕೆ ಹೋಗುವವರು, ವಿದ್ಯಾರ್ಥಿಗಳಿರಿಗೆ ಬಣ್ಣ ಎರಚಿ ಓಡಿ ಹೋಗುವುದು, ಕರ್ಕಶ ಸೈಲೆನ್ಸರ್‌ಗಳ ವಾಹನ ಚಲಾಯಿಸುವ ಕಿಡಿಗೇಡಿತನಗಳು ಗೋಚರಿಸಿದವು. ಇಷ್ಟಾದರೂ, ಬಿಗಿ ಪೊಲೀಸ್ ಬಂದೋಬಸ್ತ್‌ ಕಲ್ಪಿಸುವಲ್ಲಿ ಪೊಲೀಸ್‌ ಇಲಾಖೆ ನಿಗಾ ವಹಿಸಿತ್ತು. ಸ್ವತಃ ಎಸ್‌ಪಿ ಉಮಾ ಪ್ರಶಾಂತ ನಗರದ ವಿವಿಧೆಡೆ ಸುತ್ತಾಡಿ, ಹಬ್ಬ ಆಚರಿಸುವವ ಮೇಲೆ ಕಣ್ಣಿಟ್ಟಿದ್ದರು. ಒಟ್ಟಾರೆ ಈ ಬಾರಿಯ ಹೋಳಿಗೆ ಸಂಭ್ರಮದ ತೆರೆಬಿದ್ದಿದೆ.

- - -

-ಃ25ಕೆಡಿವಿಜಿ52ಃ:ದಾವಣಗೆರೆಯ ಎಸ್.ನಿಜಲಿಂಗಪ್ಪ ಬಡಾವಣೆಯ ರಿಂಗ್ ರಸ್ತೆಯಲ್ಲಿ ಪೌರಕಾರ್ಮಿಕರು ತಮ್ಮ ಸ್ವಚ್ಛತಾ ಕರ್ತವ್ಯದ ಜೊತೆಗೆ ಹೋಳಿ ಹಬ್ಬ ಆಚರಿಸಿ ಹೆಜ್ಜೆ ಹಾಕಿದರು.

- - -

-ಃ24ಕೆಡಿವಿಜಿ53, 54ಃ:ದಾವಣಗೆರೆಯ ರಾಂ ಅಂಡ್ ಕೋ ಸರ್ಕಲ್‌ನಲ್ಲಿ ಸೋಮವಾರ ನಡೆದ ಹೋಳಿ ಹಬ್ಬದಲ್ಲಿ ಬಟ್ಟೆಗಳನ್ನು ಹರಿದು ಬೆಸ್ಕಾಂ ತಂತಿಗಳಿಗೆ ಹಾಕಿದ್ದು, ಬೆಸ್ಕಾಂ ಸಿಬ್ಬಂದಿ, ಪಾಲಿಕೆ ಸದಸ್ಯರು ಅವುಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು.

- - -

-ಃ25ಕೆಡಿವಿಜಿ52ಃ:ದಾವಣಗೆರೆಯ ಎಸ್.ನಿಜಲಿಂಗಪ್ಪ ಬಡಾವಣೆಯ ರಿಂಗ್ ರಸ್ತೆಯಲ್ಲಿ ಪೌರಕಾರ್ಮಿಕರು ತಮ್ಮ ಸ್ವಚ್ಛತಾ ಕರ್ತವ್ಯದ ಜೊತೆಗೆ ಹೋಳಿ ಹಬ್ಬ ಆಚರಿಸಿ ಹೆಜ್ಜೆ ಹಾಕಿದರು.

- - -

-ಃ24ಕೆಡಿವಿಜಿ53, 54ಃ:ದಾವಣಗೆರೆಯ ರಾಂ ಅಂಡ್ ಕೋ ಸರ್ಕಲ್‌ನಲ್ಲಿ ಸೋಮವಾರ ನಡೆದ ಹೋಳಿ ಹಬ್ಬದಲ್ಲಿ ಬಟ್ಟೆಗಳನ್ನು ಹರಿದು ಬೆಸ್ಕಾಂ ತಂತಿಗಳಿಗೆ ಹಾಕಿದ್ದು, ಬೆಸ್ಕಾಂ ಸಿಬ್ಬಂದಿ, ಪಾಲಿಕೆ ಸದಸ್ಯರು ಅವುಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು.