ಉಸ್ತುವಾರಿ ಸಚಿವರ ಹೋಗುವ ತಾಲೂಕುಗಳಿಗೆ ಮಾತ್ರ ಹೋಗುವ ಡಿಸಿ ಹಾಗೂ ಜಿಪಂ ಸಿಇಒ ಬೇರೆ ತಾಲೂಕುಗಳತ್ತ ತಿರುಗಿಯೂ ನೋಡುವುದಿಲ್ಲ ಎಂದು ಚಿಕ್ಕನಾಯನಹಳ್ಳಿ ಶಾಸಕ ಸಿ.ಬಿ.ಸುರೇಶ್‌ಬಾಬು ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಉಸ್ತುವಾರಿ ಸಚಿವರ ಹೋಗುವ ತಾಲೂಕುಗಳಿಗೆ ಮಾತ್ರ ಹೋಗುವ ಡಿಸಿ ಹಾಗೂ ಜಿಪಂ ಸಿಇಒ ಬೇರೆ ತಾಲೂಕುಗಳತ್ತ ತಿರುಗಿಯೂ ನೋಡುವುದಿಲ್ಲ ಎಂದು ಚಿಕ್ಕನಾಯನಹಳ್ಳಿ ಶಾಸಕ ಸಿ.ಬಿ.ಸುರೇಶ್‌ಬಾಬು ಆರೋಪಿಸಿದರು.ಪಟ್ಟಣದ ಸರ್ಕಾರಿ ಸ್ವತಂತ್ರಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ ೫ಸಾವಿರ ಮನೆಗಳಿಗೆ ಈಗಾಗಲೇ ಪಟ್ಟಿಸಿದ್ಧಪಡಿಸಿ ಕಳುಹಿಸಿದರೂ ಅದರ ಬಗ್ಗೆ ಕ್ರಮ ಕೈಗೊಳ್ಳುವ ಕೆಲಸ ಮಾಡಿಲ್ಲ. ಸುಸಜ್ಜಿತವಾದ ಎಲ್ಲಾ ವ್ಯವಸ್ಥೆಗಳನ್ನೊಳಗೊಂಡ ಮಾದರಿ ೧೦ಶಾಲೆಗಳನ್ನು ತಾಲೂಕಿನಲ್ಲಿ ತೆರೆಯಲು ಸರ್ಕಾರ ಆದೇಶ ಮಾಡಿದ್ದರೂ ಅದಕ್ಕೆ ಸಂಬಂಧಿಸಿದಂತೆ ಇನ್ನು ಯಾವುದೇ ಕ್ರಮವನ್ನು ಇಲ್ಲಿನ ಡಿಸಿ, ಸಿಇಒ ಮಾಡುತ್ತಿಲ್ಲ. ಕೇವಲ ಮಂತ್ರಿಗಳ ಹಿಂದೆ ಓಡಾಡಿಕೊಂಡು ಇದ್ದಾರೆ. ಗಣಿಬಾಧಿತ ಪ್ರದೇಶಾಭಿವೃದ್ದಿ ಯೋಜನೆಯಲ್ಲಿ ನಮ್ಮ ಕ್ಷೇತ್ರದ ಕೆಲಸಗಳನ್ನು ಮಾಡಬೇಕು. ತಾಲೂಕು ಸರ್ಕಾರಿ ಆಸ್ಪತ್ರೆ ಅಗತ್ಯವಿರುವಂತಹ ಸಿಟಿ ಸ್ಕ್ಯಾನ್ ಸೇರಿದಂತೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಲು ತಿಳಿಸಿದ್ದರೆ ನಮ್ಮ ಹಣವನ್ನು ತೆಗೆದುಕೊಂಡು ಹೋಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಹಾಕಿದ್ದಾರೆ. ಇದು ಯಾರನ್ನು ಮೆಚ್ಚಿಸಲಿಕ್ಕೆ ಎಂಬುದು ತಿಳಿದಿಲ್ಲ. ಇನ್ನಾದರು ನಮ್ಮ ಗಣಿಭಾಗದ ಹಣವನ್ನು ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಬಳಸಬೇಕು ಎಂದರು.
ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕನಸನ್ನು ನನಸು ಮಾಡಲೆಂದೇ ನಮ್ಮ ಎಸ್. ಬಿ.ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಸಿಇಟಿ ಹಾಗೂ ನೀಟ್ ತರಬೇತಿಯನ್ನು ಕಳೆದ ಹಲವಾರು ವರ್ಷಗಳಿಂದ ತರಬೇತಿ ನೀಡುತ್ತಿದ್ದು ಇದರಿಂದ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಿದ್ದು ಅವರ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾರೆ ಟ್ರಸ್ಟ್ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೆ ಸುಲಭವಾಗಿ ಕೈಗೆಟುಕದ ಸಿಇಟಿ ನೀಟ್ ತರಬೇತಿಯನ್ನು ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತಮ ಅಧ್ಯಯನ ಪಠ್ಯ ಪುಸ್ತಕಗಳನ್ನು, ಪೂರಕ ಸಾಮಾಗ್ರಿಗಳನ್ನು ನೀಡುವ ಮೂಲಕ ತರಬೇತಿಯನ್ನು ನೀಡಲಾಗುತ್ತಿದೆ. ಕಳೆದ ಬಾರಿ ೧೮೩ ವಿದ್ಯಾರ್ಥಿಗಳು ತರಬೇತಿಯನ್ನು ಪಡೆದಿದ್ದು ಅದರಲ್ಲಿ ೮೮ ವಿದ್ಯಾರ್ಥಿಗಳು ಸರ್ಕಾರಿ ಹಾಗೂ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟುಗಳನ್ನು ಪಡೆಯುವ ಮೂಲಕ ಅವರ ತಂದೆತಾಯಿಯವರ ಓದಿನ ಹೊರೆಯನ್ನು ಕಡಿಮೆ ಮಾಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ಉಚಿತ ಸಿಇಟಿ ತರಬೇತಿ ಸಮಿತಿಯ ಅಧ್ಯಕ್ಷ ನಿವೃತ್ತ ಶಿಕ್ಷಣಾಧಿಕಾರಿ ನಾಗೇಶ್, ಮಾಜಿ ಪುರಸಭಾಧ್ಯಕ್ಷ ಎಂ.ಎನ .ಸುರೇಶ್, ಸವಿತಾ ಸಮಾಜದ ಅಧ್ಯಕ್ಷ ಶಿವಣ್ಣ, ಈಡಿಗ ಸಮಾಜದ ಸೋಮಣ್ಣ, ಬೌದ್ಧ ಸಮಾಜದ ಮುಖಂಡ ಸಾಕ್ಯಗೌತಮ್ ಸೇರಿದಂತೆ ಇತರರು ಇದ್ದರು.