ಕನಕಪುರ: ತಾಲೂಕಿನ ಜನರಿಗೆ ನೀಡಿದ ಆಶ್ವಾಸನೆ, ಭರವಸೆಯನ್ನು ಈಡೇರಿಸುವ ಹಾಗೂ ತಾಲೂಕಿನ ಜನರ ಆರೋಗ್ಯ ದೃಷ್ಟಿಯಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕನಸಾದ ವೈದ್ಯಕೀಯ ಕಾಲೇಜು ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿರುವುದಾಗಿ ಬಮೂಲ್ ಅಧ್ಯಕ್ಷ ಡಿ ಕೆ ಸುರೇಶ್ ತಿಳಿಸಿದರು.

ತಾಲೂಕಿನ ಕಸಬಾ ಹೋಬಳಿ ತುಂಗಣಿ ಗೇಟ್ ಬಳಿ ಇರುವ ಹೌಸಿಂಗ್ ಬೋರ್ಡ್ ಬಳಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿನ ಜನರ ದಶಕಗಳ ಕನಸಾಗಿದ್ದ ವೈದ್ಯಕೀಯ ಕಾಲೇಜು ನಿರ್ಮಾಣ ಇದೀಗ ನನಸಾಗುತ್ತಿದೆ. ತಾಲೂಕಿನ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಉಪಮುಖ್ಯಮಂತ್ರಿಗಳ ಕನಸು, ಬಯಕೆ ಹಾಗೂ ಜನತೆಗೆ ನೀಡಿದ ಆಶ್ವಾಸನೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಿದ ಫಲವಾಗಿ ಇಂದು ಮಹತ್ವದ ಕಾರ್ಯ ನಿರ್ವಿಘ್ನವಾಗಿ ನೆರವೇರಲೆಂದು ಭೂಮಿಪೂಜೆ ಮಾಡಿದ್ದೇವೆ ಎಂದು ಹೇಳಿದರು.ಈ ಐತಿಹಾಸಿಕ ಕ್ಷಣದಲ್ಲಿ ಭಾಗಿಯಾಗಲು ತಾಲೂಕಿನ ಎಲ್ಲಾ ಜನರನ್ನು ಆಹ್ವಾನಿಸಿದ್ದು ಅವರೆಲ್ಲರ ಆಶೀರ್ವಾದ ಹಾಗೂ ಸಹಕಾರ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಸಲಹೆ ಹಾಗೂ ಅನುಮತಿಯೊಂದಿಗೆ ಈ ಮಹತ್ವದ ಕಾರ್ಯಕ್ಕೆ ಇಂದು ಸಾಂಕೇತಿಕವಾಗಿ ಚಾಲನೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾದಿಯಾಗಿ ಉಪಮುಖ್ಯಮಂತ್ರಿ, ಸಂಬಂಧ ಪಟ್ಟ ಸಚಿವರು ಹಾಗೂ ಇಲಾಖೆ ಅಧಿಕಾರಿಗಳು ಬರಲಿರುವುದಾಗಿ ತಿಳಿಸಿದರು.

ಸುಮಾರು 550 ಕೋಟಿ ರುಪಾಯಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣವಾಗಲಿದೆ. 300 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಹಾಗೂ ಗಂಡು ಮತ್ತು ಹೆಣ್ಣು ಮಕ್ಕಳ ಪ್ರತ್ಯೇಕ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುತ್ತಿದೆ. ಇದು ಸಾರ್ವಜನಿಕರ ಆರೋಗ್ಯ ರಕ್ಷಣೆ ವಿಷಯದಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ. ತಾಲೂಕಿನ ಜನತೆಯ ಹಿತದೃಷ್ಟಿಯಿಂದ 18 ತಿಂಗಳ ಒಳಗೆ ಸಂಪೂರ್ಣ ಕಾಮಗಾರಿ ಮುಗಿಸಿಕೊಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಎಸ್.ರವಿ, ಸಿಇಒ ಅವಿನಾಶ್, ತಹಸೀಲ್ದಾರ್ ಸಂಜಯ್, ಗುತ್ತಿಗೆದಾರ ಚಂದ್ರು, ಮುಖಂಡರಾದ ನಾರಾಯಣ ಗೌಡ, ರಾಯಸಂದ್ರ ರವಿ, ಕೆ.ಎನ್.ದಿಲೀಪ್, ಪುರುಷೋತ್ತಮ್, ವಿಶ್ವನಾಥ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹರೀಶ್ ಇತರರು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01:


ಕನಕಪುರ ತಾಲೂಕಿನ ರಾಯಸಂದ್ರ ಗ್ರಾಮದ ಹೌಸಿಂಗ್ ಬೋರ್ಡ್ ಬಳಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಬಮೂಲ್ ಅಧ್ಯಕ್ಷ ಡಿ ಕೆ ಸುರೇಶ್ ಭೂಮಿಪೂಜೆ ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯ ಎಸ್. ರವಿ, ಸಿಇಒ ಅವಿನಾಶ್, ತಹಸೀಲ್ದಾರ್ ಸಂಜಯ್ ಇತರರಿದ್ದರು.