ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಮಾಯಸಂದ್ರ ಹೋಬಳಿ ಮಣೆಚೆಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿತ್ತಲ ಕೊಪ್ಪ - ಕಣಕೂರು ಗ್ರಾಮದ ಮಧ್ಯೆ ಹರಿಯುವ ಶಿಂಷಾ ಹಳ್ಳಕ್ಕೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ಸುಮಾರು 125 ಲಕ್ಷ ರು.ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಚೆಕ್ ಡ್ಯಾಂ ಕಾಮಗಾರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಭೂಮಿ ಪೂಜೆ ನೆರವೇರಿಸಿದರು.ಈ ವೇಳೆ ಮಾತನಾಡಿದ ಅವರು, ಈ ಭಾಗದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿದೆ. ಇದು ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿತ್ತು. ಇಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡುವುದರಿಂದ ಈ ಭಾಗದ ಸುತ್ತಮುತ್ತಲ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚುವ ಮೂಲಕ ನೀರಿನ ಸಮಸ್ಯೆ ಕಡಿಮೆಯಾಗಲಿದೆ. ಚೆಕ್ ಡ್ಯಾಂ ನಿರ್ಮಾಣ ಮಾಡುವ ಮೂಲಕ ಸುತ್ತಮುತ್ತಲ ಗ್ರಾಮದ ರೈತರ ಸರ್ವತೋಮುಖ ಅಭಿವೃದ್ದಿಗೆ ಒತ್ತು ನೀಡಲಾಗುತ್ತಿದೆ. ಎಂಜಿನಿಯರ್ ಗಳು ಮತ್ತು ಗುತ್ತಿಗೆದಾರರು ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ನಿರ್ವಹಿಸಬೇಕು. ಗ್ರಾಮಸ್ಥರೂ ಸಹ ಗುಣಮಟ್ಟದ ಕಾಮಗಾರಿಗೆ ನಿಗಾ ವಹಿಸಬೇಕೆಂದರು. ಈ ಸಂದರ್ಭದಲ್ಲಿ ಮುಖಂಡರಾದ ರಾಜೀವ್ ಕೃಷ್ಣಪ್ಪ, ಗುಡ್ಡೇನಹಳ್ಳಿ ಬಸವರಾಜು, ಮಕುಂದ, ಶಂಕರೇಗೌಡ, ಹಿತ್ತಲಕೊಪ್ಪ ಪ್ರಕಾಶ್, ಭೈತರಹೊಸಳ್ಳಿ ಬಿ.ವಿ.ರಾಮಚಂದ್ರು, ಗ್ರಾಮದ ಮುಖಂಡರಾದ ಕಣಕೂರು ಹುಚ್ಚೇಗೌಡ, ಕೆ.ಎಲ್.ತಿಮ್ಮಪ್ಪ, ಟಿ.ಲೆಕ್ಕೇಗೌಡ, ಕೆ.ವಿ.ತಿಮ್ಮೇಗೌಡ, ಕೆ.ಎಲ್.ರಾಜಣ್ಣ, ಟಿ.ವೆಂಕಟೇಶ್, ಕೆ.ಶ್ರೀನಿವಾಸ್, ಕೆ.ಎಲ್.ಕುಮಾರ್, ಕೆ.ಎನ್.ರಮೇಶ್, ಕೆ.ಎಂ.ಮುದ್ದಣ್ಣ, ವಿನಯ್ ಕುಮಾರ್, ಇಂಜಿನಿಯರ್ ಮಧುಸೂದನ್, ಗುತ್ತಿಗೆದಾರ ಹೆಬ್ಬೂರು ತಿಮ್ಮಪ್ಪಗೌಡ ಸೇರಿದಂತೆ ಇತರರು ಇದ್ದರು.