ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ ಆ. 15 ರಂದು ನಡೆಯಲಿರುವ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ವಿವಿಧ ಸಂಘಟನೆಗಳ ಪ್ರಮುಖರು ಮತ್ತು ತಾಲೂಕಿನ ಸಾರ್ವಜನಿಕರ ಸಹಕಾರದಿಂದ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಬೇಕು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಭವನದ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ನಡೆದ 79ನೇ ಸ್ವಾತಂತ್ರ್ಯೋತ್ಸವ ಸಮಾರಂಭ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಳೆದ ಬಾರಿಗಿಂತ ಈ ಬಾರಿ ವಿಭಿನ್ನ ಮತ್ತು ವಿಶಿಷ್ಟವಾಗಿ ಕಾರ್ಯಕ್ರಮ ಅಯೋಜನೆ ಮಾಡಬೇಕೆಂದು ತಿಳಿಸಿದರು. ಸ್ವಾತಂತ್ರ್ಯ ದಿನಾಚರಣೆ ಸಂಬಂಧ ಅಧಿಕಾರಿಗಳು ಮತ್ತೊಂದು ಸಭೆ ನಡೆಸಿ ಸಮನ್ವಯತೆಯಿಂದ ಕೆಲಸ ಮಾಡಿ ಎಂದು ಸೂಚನೆ ನೀಡಿದ ಶಾಸಕರು, ನನಗೆ ವರದಿ ನೀಡಿ ಯಾವುದೇ ಸಮಸ್ಯೆಗಳು ಇದ್ದರು, ನನ್ನ ಗಮನಕ್ಕೆ ತರಬೇಕೆಂದು ತಾಕೀತು ಮಾಡಿದರು.ಪ್ರಗತಿಪರ ರೈತರು ಮತ್ತು ನಿವೃತ್ತ ಯೋಧರನ್ನು ಗೌರವಿಸಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಬೇಕೆಂದು ನುಡಿದ ಅವರು ಉತ್ತಮ ಭಾಷಣಕಾರರನ್ನು ಕರೆಸಿ ಸ್ವಾತಂತ್ರ್ಯ ಹೋರಾಟಗಾರರ ಜೀವನ ಮತ್ತು ಸಾಧನೆ ಜೊತೆಗೆ ದೇಶ ಪ್ರೇಮ ತಿಳಿಸುವ ಕೆಲಸ ಮಾಡಬೇಕೆಂದರು.ಕೆ.ಆರ್. ನಗರ ಜೊತೆಗೆ ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿಯೂ ವಿಭಿನ್ನ ವಿಶಿಷ್ಟವಾಗಿ ದಿನಾಚರಣೆ ಆಚರಿಸಲು ಅಲ್ಲಿನ ವಿವಿಧ ಸಂಘಟನೆಗಳ ಪ್ರಮುಖರು ಮತ್ತು ನಾಗರಿಕರ ಸಲಹೆ ಮತ್ತು ಸಹಕಾರವನ್ನು ಪಡೆಯಬೇಕೆಂದು, ನಾನು ಈ ಭಾರಿಸಾಲಿಗ್ರಾಮದಲ್ಲಿ ನಡೆಯುವ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಪ್ರಕಟಿಸಿದರು.ಸಾಲಿಗ್ರಾಮ ತಾಲೂಕು ಕಾಂಗ್ರೆಸ್ ಎಸ್.ಸಿ. ಘಟಕದ ಅಧ್ಯಕ್ಷ ಕಂಠಿ ಕುಮಾರ್, ತಹಸೀಲ್ದಾರ್ ಗಳಾದ ಜೆ. ಸುರೇಂದ್ರ ಮೂರ್ತಿ, ರುಕೀಯ ಬೇಗಂ, ತಾಪಂ ಇಓ ಗಳಾದ ವಿ.ಪಿ. ಕುಲದೀಪ್, ಎ. ರವಿ, ಪುರಸಭೆ ಮುಖ್ಯಾಧಿಕಾರಿ ಬಿ.ವಿ. ವೆಂಕಟೇಶ್, ಬಿಇಓ ಆರ್. ಕೃಷ್ಣಪ್ಪ, ಪುರಸಭಾ ಸದಸ್ಯ ಪ್ರಕಾಶ್, ಮಾಜಿ ಅಧ್ಯಕ್ಷ ನರಸಿಂಹರಾಜು, ಗ್ಯಾರಂಟಿ ಸಮಿತಿ ಅಧ್ಯಕ್ಷ ಉದಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ರಮೇಶ್, ರಾಜ್ಯ ರೈತ ಪರ್ವ ಸಂಘಟನೆ ಗೌರವಾಧ್ಯಕ್ಷ ಜೆ.ಎಂ. ಕುಮಾರ್, ಕಾಯಕ ಸಮಾಜ ಅಧ್ಯಕ್ಷ ತಿಮ್ಮಶೆಟ್ಟಿ, ದಲಿತ ಮುಖಂಡ ಚಂದ್ರು, ಕಾಂಗ್ರೆಸ್ ಮುಖಂಡ ಶ್ರೀನಿವಾಸ್, ಕಂಠಿಕುಮಾರ್ ಇದ್ದರು.