ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಎಂಥಾ ನೋವಿದ್ದರೂ, ಅನಿರ್ವಚನೀಯ ಆನಂದದ ಕಡೆಗೆ ಕೊಂಡೊಯ್ಯುವ ಶಕ್ತಿ ಸುಗಮ ಸಂಗೀತಕ್ಕಿದೆ ಎಂದು ಗಾಯಕ ನಗರ ಶ್ರೀನಿವಾಸ ಉಡುಪ ಹೇಳಿದರು.ಕರ್ನಾಟಕ ಸುಗಮ ಸಂಗೀತ ಪರಿಷತ್ತು ನಗರದ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ 19ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನ ಗೀತೋತ್ಸವ - 2025ದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕನ್ನಡ ಕವಿಶ್ರೇಷ್ಠರ ಕವನಗಳನ್ನು ಹಾಡಿ, ಜನ ಮಾನಸಕ್ಕೆ ತಲುಪಿಸುವ ಒಂದು ವಿಶಿಷ್ಟ ಶೈಲಿಯನ್ನು ಭಾವಗೀತೆ ಅಥವಾ ಲಘು ಸಂಗೀತ ಎಂದು ಕರೆಯಲಾಯಿತು. ಈ ಶೈಲಿಯಲ್ಲಿ ಪ್ರಖ್ಯಾತರಾದ ಹಾಗೂ ಆಸಕ್ತರಾದ ಗಾಯಕರನ್ನು 1988ರಲ್ಲಿ ಯವನಿಕಾದಲ್ಲಿ ಸೇರಿಸಿ ಎರಡು ದಿನಗಳ ಒಂದು ಕಮ್ಮಟ ಆಯೋಜಿಸಲಾಯಿತು. ಕವಿಗೀತೆಗಳ ಗಾಯನದ ಪ್ರಕಾರಕ್ಕೆ ಸುಗಮ ಸಂಗೀತ ಎಂದು ಹೆಸರಿಡಲು ಎಲ್ಲಾ ಕಲಾವಿದರು ಒಪ್ಪಿದರು. ಈ ಸುಗಮ ಸಂಗೀತ ಎಂಬ ಹೆಸರನ್ನು ಮೊದಲಿಗೆ ಬಳಸಿದ ಹೆಮ್ಮೆ ಆಕಾಶವಾಣಿಯ ವಿವಿಧ ಭಾರತಿಗೆ ಇದೆ ಎಂದರು.ದೇಶದಲ್ಲಿ ಶಾಸ್ತ್ರೀಯ ಸಂಗೀತವಲ್ಲದೇ, ಜನಪದ ಸಂಗೀತ, ಲಘುಶಾಸ್ತ್ರೀಯ ಸಂಗೀತ, ಲಘು ಸಂಗೀತವೆಂಬ ಪ್ರಕಾರಗಳಿವೆ. ಸುಗಮ ಸಂಗೀತದ ಹೆಸರೇ ಹೇಳುವಂತೆ ಭಾವ ಪ್ರಧಾನವಾದ ಕಾವ್ಯ ಸಂಗೀತ ಎಂದಾಯಿತು. ಇದು ಶ್ರೀ ಸಾಮಾನ್ಯನಿಗೂ ನಿಲುಕುವಂತೆ ಗ್ರಾಹ್ಯ ಹಾಗೂ ರಂಜನೀಯ. 8 ದಶಕಗಳ ಇತಿಹಾಸವಿರುವ ಸುಮಗ ಸಂಗೀತ ಶಾಸ್ತ್ರೀಯ ಸಂಗೀತದ ತಳಹದಿಯ ಮೇಲಿದೆ. ಆದ್ದರಿಂದ ಬೇರೆಯಾಗಿಯೇ ನಿಂತಿದೆ. ಈ ಗಾಯನ ಶೈಲಿ ಅಕಾಶವಾಣಿಯಿಂದ ಲಘು ಸಂಗೀತ, ಭಾವಗೀತೆ ಎಂದು ಕರೆಯಲ್ಪಟ್ಟಿತು ಎಂದು ಸುಗಮ ಸಂಗೀತದ ಇತಿಹಾಸ ವಿವರಿಸಿದರು.
ಸುಗಮ ಸಂಗೀತ ಕ್ಷೇತ್ರಕ್ಕೆ ಐವತ್ತು ವರ್ಷಕ್ಕೂ ಮೀರಿದ ಸುದೀರ್ಘ ಪಯಣ ನನ್ನದು. ಭಜನೆಯಿಂದ ಭಾವಗೀತೆಯತ್ತ ಒಲವು ಮೂಡಲು ಕಾರಣರಾದವರು ನನ್ನ ಬಂಧು ಶಿವಮೊಗ್ಗ ಸುಬ್ಬಣ್ಣ, ಕೆ.ಎಸ್. ನಿಸಾರ್ ಅಹಮದ್, ಮೈಸೂರು ಅನಂತಸ್ವಾಮಿಯವರು. ಅಕಾಶವಾಣಿಯವರು ಭಿತ್ತರಿಸಿದ ಎಂ.ಎಸ್.ಐಎಲ್ ಗೀತೆಗಳು ಅತ್ಯಂತ ಪ್ರಿಯವಾದವು. ಇದು ವಿವಿಧ ಭಾರತಿಯಲ್ಲಿ ಭಾವಗೀತಾ ಗಾಯನದ ಒಂದು ಹೊಸ ಯುಗವನ್ನೇ ಆರಂಭಿಸಿತು. ನಾಡಿನ ಶ್ರೇಷ್ಠ ಸಂಗೀತ ನಿರ್ದೇಶಕರುಗಳ ನಿರ್ದೇಶನದಲ್ಲಿ ಹಾಡಾಗಿ ಕನ್ನಡ ನಾಡಿನ ಮನೆ ಮನಗಳಲನ್ನು ತಲುಪಿದ್ದಾಗಿ ಅವರು ತಿಳಿಸಿದರು.