ಲಕ್ಷ್ಮೇಶ್ವರ: ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕು ಸಂಘದ 2026- 31ನೇ ಅವಧಿಗೆ ನಡೆಯುವ ಚುನಾವಣೆಯ ಪದಾಧಿಕಾರಿಗಳ ಆಯ್ಕೆಯನ್ನು ಒಮ್ಮತದ ಮೂಲಕ ನಡೆಸಲು ತೀರ್ಮಾನಿಸಲಾಗಿದೆ.
ಲಕ್ಷ್ಮೇಶ್ವರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತ್ತು. ಅಲ್ಲದೇ ಶಿಕ್ಷಕರ ಸಂಘಕ್ಕೆ ರಾಜಕೀಯ ಪಕ್ಷಗಳ ರೀತಿ ಚುನಾವಣೆ ಬೇಕೇ ಎನ್ನುವ ಕುರಿತು ಚರ್ಚೆ ವ್ಯಾಪಕವಾಗಿ ನಡೆದಿತ್ತು. ಈ ಕುರಿತು ಕನ್ನಡಪ್ರಭ ಏ. 16ರಂದು "ರಾಜಕಾರಣ ಮೀರಿಸುತ್ತಿರುವ ಲಕ್ಷ್ಮೇಶ್ವರ ತಾಲೂಕು ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಚುನಾವಣೆ'''' ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು.ವರದಿ ಪ್ರಕಟವಾದ ಬೆನ್ನಲ್ಲೆ ಎಚ್ಚೆತ್ತ ತಾಲೂಕಿನ ಶಿಕ್ಷಕರ ಸಂಘದ ಸ್ಪರ್ಧಾಳುಗಳು ಹಾಗೂ ಪದಾಧಿಕಾರಿಗಳು ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ ನಂ. 1ರಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಕಣದಿಂದ ಹಿಂದೆ ಸರಿದು ಒಮ್ಮತದ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸುವ ನಿರ್ಣಯ ಕೈಗೊಂಡಿರುವುದಾಗಿ ಸಂಘದ ಪದಾಧಿಕಾರಿಗಳು ಗುರುವಾರ ಕನ್ನಡಪ್ರಭಕ್ಕೆ ತಿಳಿಸಿದರು.
ಗುರುವಾರ ಬೆಳಗ್ಗೆ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪೂರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜ ಹವಳದ ಹಾಗೂ ಸರ್ವ ಸಂಘಗಳ ಅಧ್ಯಕ್ಷ ಬಿ.ಎಂ. ಕುಂಬಾರ ಅವರ ನೇತೃತ್ವದಲ್ಲಿ ಸಂಘದ ಚುನಾವಣೆಗೆ ಸ್ಪರ್ಧಾಳುಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದರು.ಶಿಕ್ಷಕರು ಸಮಾಜಕ್ಕೆ ಮಾದರಿಯಾಗಬೇಕಾದವರೇ ರಾಜಕಾರಣಿಗಳ ರೀತಿಯಲ್ಲಿ ಚುನಾವಣೆ ಮಾಡುವುದರಿಂದ ಮನಸ್ತಾಪ ಉಂಟಾಗುತ್ತವೆ. ಇದು ಮಕ್ಕಳ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎನ್ನುವ ಅಭಿಪ್ರಾಯ ಎಲ್ಲ ಸಮಾನ ಮನಸ್ಕ ಶಿಕ್ಷಕರು ವ್ಯಕ್ತಪಡಿಸಿದ ಹಿನ್ನೆಲೆ, ಚುನಾವಣಾ ಕಣದಿಂದ ನಾಲ್ವರು ಶಿಕ್ಷಕರು ಹಿಂದೆ ಸರಿದು ಕಣದಲ್ಲಿ ಉಳಿದ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸುವ ನಿರ್ಣಯ ತೆಗೆದುಕೊಂಡರು. ತಾಲೂಕಿನ ಶಿಕ್ಷಕರ ಸಂಘದ ಚುನಾವಣೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುವ ಭರವಸೆ ನೀಡಿದರು. ವಸತಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಗದಗ: ಧಾರವಾಡ ಶಹರದ ಸಪ್ತಾಪುರ ರಸ್ತೆಯಲ್ಲಿರುವ ಮಿಲಿಟರಿ ಬಾಲಕಿಯರ ವಸತಿನಿಲಯದಲ್ಲಿ 2026- 27ನೇ ಶೈಕ್ಷಣಿಕ ವರ್ಷಕ್ಕಾಗಿ ಧಾರವಾಡ, ಗದಗ, ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಗಳ ಗ್ರಾಮಾಂತರ ಪ್ರದೇಶ ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿರುವ ಯುದ್ಧದಲ್ಲಿ ಮಡಿದ ಯೋಧರ ಮತ್ತು ಮಾಜಿ ಸೈನಿಕರ ಹೆಣ್ಣುಮಕ್ಕಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ 5ನೇ ತರಗತಿಯಿಂದ ಪಿಯುಸಿ- 2ರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಉದಯ ಹಾಸ್ಟೆಲ್ ಸರ್ಕಲ್ ಸೈನಿಕ ವಿಶ್ರಾಂತಿ ಗೃಹ ಆವರಣ, ಧಾರವಾಡ ದೂ. 0836-2440176 ಇವರನ್ನು ಸಂಪರ್ಕಿಸಿ ಅರ್ಜಿಗಳನ್ನು ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಮೇ 5ರೊಳಗಾಗಿ ಸಲ್ಲಿಸಬಹುದು.