ಬ್ಯಾಡಗಿ: ರೈತರು ಸಮಗ್ರವಾಗಿ ಸಮತೋಲಿತ ರಸಗೊಬ್ಬರಗಳ ಬಳಕೆ ಮಾಡುವ ಮೂಲಕಭೂಮಿಯಲ್ಲಿ ನೀರಿನ ತೇವಾಂಶ ಹಾಗೂ ಮಣ್ಣಿನಲ್ಲಿ ಸತ್ವವನ್ನು ಉಳಿಸಿಕೊಳ್ಳದೇ ಹೋದರೇ ದೀರ್ಘಕಾಲ ಬಾಳಿಕೆ ಬರುವಂತಹ ಕೃಷಿಭೂಮಿ ಏನೊಂದು ಬೆಳೆಯದೇ ಕೆಲವೇ ವರ್ಷಗಳಲ್ಲಿ ಬರಡು ಭೂಮಿಯಾಗಿ ಪರಿವರ್ತನೆಗೊಳ್ಳಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಎಚ್ಚರಿಸಿದರು.
ತಾಲೂಕಿನ ಬನ್ನಿಹಟ್ಟಿ ಗ್ರಾಪಂ.ನಲ್ಲಿ ಗುರುವಾರ ಆಯೋಜಿಸಿದ್ದ ಧರ್ತಿ ಮಾತಾ ಬಚಾವೋ ಸಮಿತಿ (ಭೂಮಿ ತಾಯಿ ರಕ್ಷಣೆ ಕಣ್ಗಾವಲು ಸಮಿತಿ) ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೃಷಿಯಲ್ಲಿ ರಾಸಾಯನಿಕ ಗೊಬ್ಬರದ ಬಳಕೆ ಹೆಚ್ಚುತ್ತಿದ್ದು ರಾಸಾಯನಿಕ ಗೊಬ್ಬರಕ್ಕೆ ಹೆಚ್ಚು ಹಣ ವ್ಯಯಿಸುತ್ತಿರುವುದು ಅದಕ್ಕಾಗಿ ರೈತರು ಸಮಗ್ರವಾಗಿ ಸಮತೋಲಿತ ರಸ ಗೊಬ್ಬರಗಳ ಬಳಕೆ ಮಾಡಬೇಕಾಗಿದೆ. ಇದರಿಂದ ಮಾತ್ರ ನಿರೀಕ್ಷಿತ ಹಾಗೂ ಉದ್ದೇಶಿತ ಕೃಷಿ ಲಾಭದಾಯಕವಾಗಲು ಸಾಧ್ಯ ಎಂದರು.ಹೊಸ ಮಾರ್ಗ ಸೂಚಿ: ಪ್ರಸಕ್ತ ಹಂಗಾಮಿನ (2026-27) ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ಯೂರಿಯಾ ಬಳಕೆ ನಿಯಂತ್ರಿಸಲು ಕೃಷಿ ಇಲಾಖೆ ಹೊಸ ಮಾರ್ಗಸೂಚಿ ಜಾರಿಗೊಳಿಸಿದ್ದು ಅದರಂತೆ ಪ್ರತಿ ಎಕರೆಗೆ ಪ್ರತಿ ತಿಂಗಳಿಗೆ ಕೇವಲ ಒಂದು ಚೀಲ ಯೂರಿಯಾ ಮಾತ್ರ ವಿತರಿಸಲಾಗುವುದು. ಕೆ-ಕಿಸಾನ್ ತಂತ್ರಾಂಶದಡಿ ಗೊಬ್ಬರ ಪಡೆಯಲು ರೈತರು ಅಧಾರ್ ಹಾಗೂ ಪಹಣಿಯನ್ನು ಎಫ್‌ಐಡಿ (FID) ಗೆ ಜೋಡಣೆ ಮಾಡಿರುವುದು ಕಡ್ಡಾಯವಾಗಿದ್ದು, ಎಫ್‌ಐಡಿ ಹೊಂದಿರದೇ ಇರುವ ರೈತರು ತಕ್ಷಣ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಹಾಗೂ ಕೃಷಿ ಪರಿಕರ ಮಾರಾಟಗಾರರು ಆಧಾರ್ ಪರಿಶೀಲನೆಯಿಲ್ಲದೆ ಗೊಬ್ಬರ ನೀಡಬಾರದು ಹಾಗೂ ರೈತರಿಗೆ ಬಿಲ್ ನೀಡುವುದು ಕಡ್ಡಾಯವಾಗಿದೆ ಜೊತೆಗೆ ಅಂಗಡಿಗಳಲ್ಲಿ ದಾಸ್ತಾನು ಹಾಗೂ ಪರವಾನಗಿ ವಿವರಗಳನ್ನು ಸ್ಪಷ್ಟವಾಗಿ ಪ್ರದರ್ಶಿಸುವಂತೆ ಸಲಹೆ ನೀಡಿದರು.
ಅಗತ್ಯಕ್ಕಿಂತ ಹೆಚ್ಚು ದಾಸ್ತಾನು ಮಾಡದಿರಿ: ತಾಲೂಕಿಗೆ 6500 ಮೆ.ಟನ್ ಯೂರಿಯಾ, 2500 ಮೆ.ಟನ್ ಡಿ.ಎ.ಪಿ, 3500 ಮೆ.ಟನ್ ಕಾಂಪ್ಲೆಕ್ಸ್ ರಸಗೊಬ್ಬರಗಳ ಬೇಡಿಕೆ ಇದ್ದು, ಸರ್ಕಾರದಿಂದ ಬೇಡಿಕೆಗೆ ಅನುಸಾರ ರಸಗೊಬ್ಬರ ಸಂಗ್ರಹ ಮಾಡುವುದರಿಂದ ಕೃತಕ ಅಭಾವದ ವದಂತಿಗಳಿಗೆ ಒಳಗಾಗಿ ಅಗತ್ಯಕ್ಕಿಂತ ಹೆಚ್ಚು ರಸಗೊಬ್ಬರ ಸಂಗ್ರಹಿಸಬಾರದು ಎಂದು ಮನವಿ ಮಾಡಲಾಗಿದೆ. ರೈತರು ಒಂದೇ ಸಂಸ್ಥೆ ಅಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೆ, ಯೂರಿಯಾ ರಸ ಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಹಾಗೂ ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಡಿ.ಎ.ಪಿ, ಗಂಧಕ ಒದಗಿಸುವ 20:20:0:13 ಹಾಗೂ ಪೊಟ್ಯಾಸಿಯಂ ಒದಗಿಸುವ ಇತರೆ ಸಂಯುಕ್ತ ರಸಗೊಬ್ಬರಗಳಾದ 10:26:26, 15:15:15, 17:17:17, 19:19:19, 12:32:16 ರಸಗೊಬ್ಬರಗಳನ್ನು ಸಮತೋಲಿತವಾಗಿ ಬಳಸಬಹುದಾಗಿದೆ ಎಂದರು.ಬೇರೆಡೆಗೆ ಸಾಗಿಸದಿರಿ: ರಾಸಾಯನಿಕ ಗೊಬ್ಬರವನ್ನು ವಿಶೇಷವಾಗಿ ತಾಲೂಕಿನ ಗಡಿಯುದ್ದಕ್ಕೂ ಅಕ್ರಮವಾಗಿ ವರ್ಗಾಯಿಸುವ ವಿಷಯದ ಬಗ್ಗೆ ತಳಮಟ್ಟದಲ್ಲಿ ಕಣ್ಗಾವಲು ಮತ್ತು ಕ್ರಮಗಳ ಅಗತ್ಯವಿದೆ, ಈ ಸವಾಲುಗಳನ್ನು ಎದುರಿಸಲು ಎಲ್ಲಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ಧರ್ತಿ ಮಾತಾ ಬಚಾವೋ ಸಮಿತಿ (ಭೂಮಿ ತಾಯಿ ರಕ್ಷಣೆ ಕಣ್ಗಾವಲು ಸಮಿತಿ) ರಚಿಸಲಾಗಿದೆ. ಗಡಿಯಾಚೆಗಿನ ರಸಗೊಬ್ಬರ ಸಾಗಣಿಕೆ ಅಥವಾ ಅನಧಿಕೃತ ರಸಗೊಬ್ಬರ ಮಾರಾಟ ಚಟುವಟಿಕೆಗಳು ಕಂಡು ಬಂದರೆ ಸಮಿತಿಯು ಗ್ರಾಮ ಪಂಚಾಯತಿ ಅಥವಾ ತಾಲೂಕು ಮಟ್ಟದ ಕಚೇರಿಗೆ ತಿಳಿಸುವಂತಗೆ ಸೂಚಿಸಿದರು. ಸಭೆಯಲ್ಲಿ ಕೃಷಿ ಅಧಿಕಾರಿ ನಾಗರಾಜ ಬನ್ನಿಹಟ್ಟಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿದ್ಯಾವತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ವಾಹಕ ಅಧಿಕಾರಿ ಸುಭಾಷ್ ದ್ಯಾಮನಗೌಡರ, ಕೃಷಿ ಇಲಾಖೆ ಆತ್ಮ ಸಿಬ್ಬಂದಿ ಗುಡ್ಡಪ್ಪ ಅರಳಿಕಟ್ಟಿ, ಕೃಷಿ ಸಖಿ ಲಕ್ಷ್ಮಿ ಕೆರೆಕರ ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು.