ಉಚಿತ ಬೇಸಿಗೆ ಶಿಬಿರವನ್ನು ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶೆ

ಕನ್ನಡಪ್ರಭ ವಾರ್ತೆ ಕಾರವಾರ

ವ್ಯಕ್ತಿತ್ವ ವಿಕಸನ, ಕೌಶಲ್ಯ ಅಭಿವೃದ್ಧಿಗೆ ಮಕ್ಕಳಿಗೆ ಪಾಠದ ಜೊತೆಯಲ್ಲಿ ಆಟಗಳು ಪ್ರಮುಖವಾಗಿದ್ದು, ಮಕ್ಕಳಲ್ಲಿ ಅಡಗಿರುವ ಕಲೆ, ಸಂಸ್ಕೃತಿ ಇತರೆ ಬೌದ್ಧಿಕ ಮತ್ತು ಕ್ರಿಯಾಶೀಲ ಚಟುವಟಿಕೆಗಳನ್ನು ವೃದ್ಧಿಸಿಕೊಳ್ಳಲು ಬೇಸಿಗೆ ಶಿಬಿರವು ಸಹಕಾರಿಯಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ. ಹೇಳಿದರು.

ಗುರುವಾರ ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸಮಿತಿ, ಕಾರವಾರ ಇವರ ಸಹಯೋಗದಲ್ಲಿ 2026-27ನೇ ಸಾಲಿನ ಉಚಿತ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ದೇಹಕ್ಕೆ ಒಳ್ಳೆಯ ಆಹಾರ ಎಷ್ಟು ಮುಖ್ಯವೋ ಹಾಗೇ ನಮ್ಮ ಮೆದುಳಿಗೆ ಒಳ್ಳೆಯ ಚಟುವಟಿಕೆ, ಒಳ್ಳೆಯ ನಡೆ-ನುಡಿ ಆಚಾರ ವಿಚಾರಗಳು ಅಷ್ಟೇ ಮುಖ್ಯವಾಗಿದೆ. 15 ದಿನ ನಡೆಯುವ ಈ ಬೇಸಿಗೆ ಶಿಬಿರದಲ್ಲಿ ಚಿತ್ರಕಲೆ, ಕ್ರಾಪ್ಟ್, ನೃತ್ಯ, ಸಂಗೀತ, ಕರಾಟೆ ಸೇರಿದಂತೆ ವಿವಿಧ ಚಟುವಟಿಕೆಗಳ ತರಬೇತಿ ನೀಡಲಿದ್ದು, ಮಕ್ಕಳು ಈ ಶಿಬಿರದ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.


ಜಿಪಂ ಉಪಕಾರ್ಯದರ್ಶಿ ಪ್ರಕಾಶ ಹಾಲಮ್ಮನವರು, ಮಕ್ಕಳು ರಜೆ ಅವಧಿಯಲ್ಲಿ ಮೊಬೈಲ್ ನಿಂದ ದೂರವಿದ್ದು, ರಾಮಾಯಣ ಮಹಾಭಾರತ ಲವಕುಶ ಅಂತಹ ಪೌರಾಣಿಕ ಪುಸ್ತಕಗಳನ್ನು ಅಧ್ಯಯನ ಮಾಡುವುದುರ ಜೊತೆಗೆ ಹಿರಿಯರಿಂದ ಹಳೆಯ ಕಥೆಗಳನ್ನು ಕೇಳಿ ಪ್ರೇರಣೆ ಪಡೆಯಬೇಕು. ಬಿಸಿಲು ಹೆಚ್ಚಾಗಿರುವುದರಿಂದ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು ಎಂದರು.

ಡಿಡಿಪಿಐ ಲತಾ ನಾಯ್ಕ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಕಲೆ ಪ್ರತಿಭೆ ಸೃಜನಾತ್ಮಕ ಚಟುವಟಿಕೆಗಳನ್ನು ಬೇಸಿಗೆ ಶಿಬಿರದ ಮೂಲಕ ಹೊರತರಲು ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಹಾಗೂ ಹಿರಿಯ ಸಹಾಯಕ ನಿರ್ದೇಶಕ ಕುಮಾರ ಎನ್., ತರಬೇತಿ ಶಿಕ್ಷಕರಾದ ತ್ರಿವೇಣಿ ವಡ್ಡರ್, ವಿನೂತ ಅಂಬೆಕರ, ಪೂರ್ಣಿಮಾ ಬಶಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ, ಮಕ್ಕಳು ಪೋಷಕರು ಮತ್ತಿತರರು ಇದ್ದರು.

ಕಲ್ಪನಾ ರಶ್ಮಿ ಕಲಾಲೋಕದ ಅಧ್ಯಕ್ಷ ಬಿ.ಎಂ. ಸೂರ್ಯಪ್ರಕಾಶ ನಿರೂಪಿಸಿ, ವಂದಿಸಿದರು.