ತಾಲೂಕಿಗೊಂದು ತಂಬಾಕು ಮುಕ್ತ ಗ್ರಾಮ ಘೋಷಿಸಿ

| Published : Nov 17 2023, 06:45 PM IST

ತಾಲೂಕಿಗೊಂದು ತಂಬಾಕು ಮುಕ್ತ ಗ್ರಾಮ ಘೋಷಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ನವೆಂಬರ್ ತಿಂಗಳಾಂತ್ಯದೊಳಗೆ ಎಲ್ಲ ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳು ತಂಬಾಕು ಮುಕ್ತ ಪ್ರದೇಶವೆಂದು ಘೋಷಣೆಯಾಗಬೇಕು. ಕನಿಷ್ಠ ಪ್ರತಿ ತಾಲೂಕಿನ ಒಂದು ಗ್ರಾಮವನ್ನು “ತಂಬಾಕು ಮುಕ್ತ ಗ್ರಾಮ” ಎಂದು ಘೋಷಣೆಯಾಗಬೇಕು. ಎಲ್ಲೆಡೆ ನಾಮಫಲಕ ಅಳವಡಿಕೆ ಪೂರ್ಣಗೊಳ್ಳಬೇಕು. ಜಿಲ್ಲಾಧಿಕಾರಿಗಳ ಕಚೇರಿಯಿಂದಲೇ ಈ ಕೆಲಸ ಆರಂಭಿಸಬೇಕು ಎಂದು ರಾಷ್ಟ್ರೀಯ ತಂಬಾಕು ನಿಯಂತ್ರಣ ನೋಡಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ನವೆಂಬರ್ ತಿಂಗಳಾಂತ್ಯದೊಳಗೆ ಎಲ್ಲ ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳು ತಂಬಾಕು ಮುಕ್ತ ಪ್ರದೇಶವೆಂದು ಘೋಷಣೆಯಾಗಬೇಕು. ಕನಿಷ್ಠ ಪ್ರತಿ ತಾಲೂಕಿನ ಒಂದು ಗ್ರಾಮವನ್ನು “ತಂಬಾಕು ಮುಕ್ತ ಗ್ರಾಮ” ಎಂದು ಘೋಷಣೆಯಾಗಬೇಕು. ಎಲ್ಲೆಡೆ ನಾಮಫಲಕ ಅಳವಡಿಕೆ ಪೂರ್ಣಗೊಳ್ಳಬೇಕು. ಜಿಲ್ಲಾಧಿಕಾರಿಗಳ ಕಚೇರಿಯಿಂದಲೇ ಈ ಕೆಲಸ ಆರಂಭಿಸಬೇಕು ಎಂದು ರಾಷ್ಟ್ರೀಯ ತಂಬಾಕು ನಿಯಂತ್ರಣ ನೋಡಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ತಂಬಾಕು ನಿಯಂತ್ರಣ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಂಬಾಕು ಮುಕ್ತ ಶಾಲಾ-ಕಾಲೇಜು ಘೋಷಣೆ ಕಾರ್ಯಕ್ರಮ ಅನುಷ್ಠಾನದಲ್ಲಿ ನಿಧಾನ ಧೋರಣೆ ತೋರುತ್ತಿರುವ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ಕಾಲಮಿತಿಯೊಳಗೆ ಈ ಕೆಲಸ ಪೂರ್ಣಗೊಳಿಸಿ. ತಮ್ಮ ಕೆಳಹಂತದ ಅಧಿಕಾರಿಗಳಿಗೆ ಸರಿಯಾಗಿ ಮಾರ್ಗದರ್ಶನ ನೀಡಿ ತ್ವರಿತಗತಿಯಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.

ತಹಸೀಲ್ದಾರ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರವೇ ಎಲ್ಲ ಶಾಲಾ-ಕಾಲೇಜುಗಳನ್ನು 9 ಅಂಶಗಳ ಟಿಒಎಫ್‌ಇಐ ಮಾರ್ಗಸೂಚಿ ಅನ್ವಯ ತಂಬಾಕು ಮುಕ್ತ ಶೈಕ್ಷಣಿಕ ವಲಯ ಎಂದು ಘೋಷಿಸಿ ನಾಮಫಲಕ ಅಳವಡಿಸಬೇಕು ಎಂದು ಪದವಿ ಪೂರ್ವ ಹಾಗೂ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ತಾಲೂಕಾ ಆರೋಗ್ಯಾಧಿಕಾರಿಗಳು ಹಾಗೂ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಧಿಕಾರಿಗಳು ತಮ್ಮ ತಮ್ಮ ಕರ್ತವ್ಯವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಬೇಕು. ತಂಬಾಕು ನಿಯಂತ್ರಣ ನಿಟ್ಟಿನಲ್ಲಿ ತನಿಖಾ ದಾಳಿಯಲ್ಲಿ ಸಮಿತಿಯ ಎಲ್ಲದರೂ ಕಡ್ಡಾಯವಾಗಿ ಭಾಗವಹಿಸಬೇಕು, ಸಭೆಗಳಲ್ಲಿ ದಾಳಿಯ ನಿಖರವಾದ ಮಾಹಿತಿಯೊಂದಿಗೆ ಹಾಜರಾಗಬೇಕು, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ತಂಬಾಕು ಸೇವೆಯ ದುಷ್ಪರಿಣಾಮಗಳ ಕುರಿತು ಜಿಲ್ಲೆಯಲ್ಲಿ ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ತಂಬಾಕು ನಿಯಂತ್ರಣ ಕಾಯ್ದೆ ಪರಿಣಾಮಕಾರಿ ಕಾರ್ಯರೂಪಕ್ಕೆ ತನ್ನಿ ಎಂದು ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಡಾ. ಸಂತೋಷ ದಡ್ಡಿ ಮಾತನಾಡಿ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 102 ತಂಬಾಕು ತನಿಖಾ ದಾಳಿ ನಡೆಸಿ, 646 ಪ್ರಕರಣ ದಾಖಲಿಸಲಾಗಿದೆ ಹಾಗೂ ₹55,350 ದಂಡದ ಮೊತ್ತ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜಿಲ್ಲೆಯ 1892 ಶಾಲೆಗಳ ಪೈಕಿ 1860 ಶಾಲೆಗಳನ್ನು ಹಾಗೂ 126 ಕಾಲೇಜುಗಳ ಪೈಕಿ 78 ಕಾಲೇಜುಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳೆಂದು ಘೋಷಿಸಲಾಗಿದೆ. ತಂಬಾಕು ಸೇವನೆ ದುಷ್ಪರಿಣಾಮಗಳ ಕುರಿತು ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಶಾಲೆಗಳಲ್ಲಿ ಆರೋಗ್ಯ ಜಾಗೃತಿ, ಸಮುದಾಯ ಗುಂಪು ಚರ್ಚೆ, ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. 818 ತಂಬಾಕು ವ್ಯಸನಿಗಳಿಗೆ ಆಪ್ತ ಸಮಾಲೋಚನೆ ಮೂಲಕ ತಿಳುವಳಿಕೆ ಹಾಗೂ ಚಿಕಿತ್ಸೆ ಕೊಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ.ಆರ್. ಹಾವನೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಡಾ. ನಿಲೇಶ, ಡಾ. ಜಗದೀಶ, ಡಾ. ಪ್ರಭಾಕರ, ವಿವಿಧ ತಾಲೂಕಾ ಆರೋಗ್ಯಾಧಿಕಾರಿಗಳು, ಇತರ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.