ಉಡುಪಿ: ನೂರಾರು ವಾಕ್ಯಗಳಲ್ಲಿ ಹೇಳಬಹುದಾದುದನ್ನು ಒಂದು ಚಿಕ್ಕ ಚಿತ್ರದಲ್ಲಿ ಹೇಳಬಹುದು. ಭಾವಾಭಿವ್ಯಕ್ತಿಗೆ ರೇಖೆಗಳು, ಚಿತ್ರಗಳು ಅತ್ಯುತ್ತಮ ಮಾಧ್ಯಮ. ಸ್ಪರ್ಧೆಯಲ್ಲಿ ಭಾಗವಹಿಸುವುದು ಕೂಡ ಬಹುಮಾನ ಪಡೆಯುವಷ್ಟೇ ಮುಖ್ಯ ಸಂಗತಿ. ಪೋಷಕರು ಮಕ್ಕಳಿಗೆ ಇಂತಹ ಅವಕಾಶ ದೊರಕಿದಾಗ ಅದರಿಂದ ವಂಚಿತರನ್ನಾಗಿ ಮಾಡಬಾರದು ಎಂದು ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹೇಳಿದರು.
ಉಡುಪಿ ಕನ್ನರ್ಪಾಡಿಯ ಎಂ. ಗಂಗಾಧರ ರಾವ್ -ಸರಸ್ವತಿ ಜಿ. ರಾವ್ ತಮ್ಮ ಮಗಳು ಕುಮಾರಿ ಪಾವನಿಯ ಹುಟ್ಟು ಹಬ್ಬದ ಪ್ರಯುಕ್ತ ಯಕ್ಷಗಾನ ಕಲಾರಂಗದ ಐವೈಸಿ ಸಭಾ ಭವನದಲ್ಲಿ ಆಯೋಜಿಸಿದ್ದ ‘ಚಿಣ್ಣರ ಬಣ್ಣದ ಹಬ್ಬ’ದ ಅಂಗವಾಗಿ ನಡೆಸಿದ ಚಿತ್ರಕಲಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿದರು.ಈ ಸಮಾರಂಭದಲ್ಲಿ ಅಭ್ಯಾಗತರಾಗಿದ್ದ ಕಲಾರಂಗದ ಪ್ರಮುಖರಾದ ಕೆ. ಗಣೇಶ ರಾವ್, ಯು.ಎಸ್. ರಾಜಗೋಪಾಲ ಆಚಾರ್ಯ, ಪ್ರೊ. ಕೆ. ಸದಾಶಿವ ರಾವ್ ಕನ್ನಡ ಮಾಧ್ಯಮ ಕಲಿಕೆಯ ಮಹತ್ವ, ಚಿತ್ರಕಲೆಯು ಬೆಳೆಯುವ ಮಕ್ಕಳಲ್ಲಿ ಬೆಳೆಸುವ ಗುಣಗಳು, ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಪೋಷಕರ ಪಾತ್ರದ ಕುರಿತು ಮಾತನಾಡಿದರು. ಕೆ. ಸದಾಶಿವ ಭಟ್, ಕೆ. ಬಾಲಕೃಷ್ಣ, ಎಂ. ಕಾರ್ತಿಕ ರಾವ್, ಡಾ. ನಿಶ್ಚಿತಾ ಕೆ. ರಾವ್ ಉಪಸ್ಥಿತರಿದ್ದರು. ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯ ಕಲಾವಿದ ಯು. ರಮೇಶ ರಾವ್, ಗಾಯತ್ರಿ ನಾಯಕ್, ಎ. ನಟರಾಜ ಉಪಾಧ್ಯಾಯ ಭಾಗವಹಿಸಿದ್ದರು.
ಇದೇ ಸಂದರ್ಭ ಉಡುಪಿಯ ಲೋಕಾಯುಕ್ತ ಪೋಲೀಸ್ ಇನ್ ಸ್ಪೆಕ್ಟರ್ ಮಂಜುನಾಥ ಶಂಕರಹಳ್ಳಿ ಅವರು ‘ಸೈಬರ್ ಅಪರಾಧಗಳು’ ಹಾಗೂ ಮನೋರೋಗತಜ್ಞ ಲೇಖಕ ಡಾ. ವಿರೂಪಾಕ್ಷ ದೇವರಮನೆಯವರು ‘ಪಾಲಕತ್ವ’ ಎಂಬ ವಿಷಯ ಕುರಿತು ತಿಳಿವಳಿಕೆ ನೀಡಿದರು.ಸಂಸ್ಥೆಯ ಅಧ್ಯಕ್ಷ, ಕಾರ್‍ಯಕ್ರಮದ ಪ್ರಾಯೋಜಕ ಎಂ. ಗಂಗಾಧರ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಸ್ವತಿ ಜಿ. ರಾವ್ ಸ್ಪರ್ಧಾ ವಿಜೇತರ ಹೆಸರು ವಾಚಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಮುರಲಿ ಕಡೆಕಾರ್ ನಿರೂಪಿಸಿದರು.