ಅತಿಸಾರ ನಿಯಂತ್ರಣ ಜಾಗೃತಿ ಮೂಡಿಸಿ

| Published : Nov 17 2023, 06:45 PM IST

ಸಾರಾಂಶ

ರಾಮನಗರ: ಜಿಲ್ಲೆಯಲ್ಲಿ ನ.28ರವರೆಗೆ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ ನಡೆಯಲ್ಲಿದ್ದು, ಎಲ್ಲಾ ಮನೆಮನೆಗೂ ಭೇಟಿ ನೀಡಿ ಅತಿಸಾರ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಸೂಚನೆ ನೀಡಿದರು.

ರಾಮನಗರ: ಜಿಲ್ಲೆಯಲ್ಲಿ ನ.28ರವರೆಗೆ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ ನಡೆಯಲ್ಲಿದ್ದು, ಎಲ್ಲಾ ಮನೆಮನೆಗೂ ಭೇಟಿ ನೀಡಿ ಅತಿಸಾರ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ೦ ರಿಂದ 5 ವರ್ಷದ ಮಕ್ಕಳಿರುವ ಮನೆಗಳಿಗೆ ಒಆರ್‌ಎಸ್ ಪ್ಯಾಕ್ ವಿತರಿಸಬೇಕು. ಸಮೀಕ್ಷೆ ವೇಳೆಯಲ್ಲಿ ಅತಿಸಾರ ಪ್ರಕರಣಗಳು ಕಂಡು ಬಂದಲ್ಲಿ ಒಆರ್‌ಎಸ್ ಜೊತೆಗೆ ಜ಼ಿಂಕ್ ಮಾತ್ರೆಯನ್ನು ಉಚಿತವಾಗಿ ವಿತರಿಸುವಂತೆ ತಿಳಿಸಿದರು.

ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಂತರ ಇಲಾಖಾ ಸಮನ್ವಯ ಬಹಳ ಮುಖ್ಯವಾಗಿದ್ದು, ಅತಿಸಾರ ಭೇದಿಯಿಂದ ಉಂಟಾಗುವ ಸಾವಿನ ಪ್ರಮಾಣವನ್ನು ಶೂನ್ಯಕ್ಕೆ ತರಲು ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು. ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನದಡಿ 5 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ ಲಸಿಕೆಯನ್ನು ಈಗಾಗಲೇ 3 ಸುತ್ತಿನಲ್ಲಿ ನೀಡಲಾಗಿದೆ ಎಂದರು.

ಲಸಿಕಾ ಕಾರ್ಯಕ್ರಮದಡಿ ವೇಳಾಪಟ್ಟಿಯಂತೆ ಎಲ್ಲಾ ಅರ್ಹ ಮಕ್ಕಳಿಗೆ ಕಾಲಕಾಲಕ್ಕೆ ಲಸಿಕೆಗಳನ್ನು ನೀಡುತ್ತಿರುವ ಬಗ್ಗೆ ಚರ್ಚಿಸಿದರು. ಲಸಿಕಾ ಕಾರ್ಯಕ್ರಮದ ಗುರಿ ಸಾಧಿಸುವಂತೆ ತಿಳಿಸಿದರು. ಡಿಸೆಂಬರ್ ಅಂತ್ಯದೊಳಗೆ ಅರ್ಹ ಮಕ್ಕಳಿಗೆ ಎಂ.ಆರ್ ಲಸಿಕೆಯನ್ನು ಹಾಕಿ ದಢಾರ ಮತ್ತು ರುಬೆಲ್ಲಾ ನಿರ್ಮೂಲನೆಗೊಳಿಸಲು ಕ್ರಮವಹಿಸಬೇಕು ಎಂದು ಹೇಳಿದರು.

ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕದ ವತಿಯಿಂದ ಎಚ್‌ಐವಿ ನಿಯಂತ್ರಣ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಎಚ್‌ಐವಿ ನಿಯಂತ್ರಣ ಕ್ರಮಗಳ ಕುರಿತು ಸಂಕಲಕ ಕಿರು ಹೊತ್ತಿಗೆಯನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿ, ಈ ಕುರಿತು ನಿರಂತರವಾಗಿ ಜಾಗೃತಿ ಮೂಡಿಸಿ, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಎಚ್‌ಐವಿ ಸೋಂಕಿತರಿಗೆ ತಲುಪಿಸಿ ಎಂದು ತಿಳಿಸಿದರು.

ತಾಯಿ ಮತ್ತು ಮಕ್ಕಳ ಮರಣಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲಿಸಿ, ಜಿಲ್ಲೆಯಲ್ಲಿ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಅಗತ್ಯ ಕ್ರಮ ವಹಿಸಿ. ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರಿ, ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ವೈದ್ಯಕೀಯ ತ್ಯಾಜ್ಯ ನಿರ್ವಹಣೆಯನ್ನು ಸರಿಯಾಗಿ ವಿಲೇವಾರಿ ಮಾಡಲು ಸಂಬಂಧಿಸಿದ ತ್ಯಾಜ್ಯ ನಿರ್ವಹಣಾ ಕಂಪನಿಯವರಿಗೆ ತಿಳಿಸಿದರು. ಈ ಕುರಿತು ಸಂಬಂಧಿಸಿದ ವೈದ್ಯಾಧಿಕಾರಿಗಳು ಪರಿಶೀಲಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಪದ್ಮಾ, ಆರ್.ಸಿ.ಎಚ್ ಅಧಿಕಾರಿ ಡಾ. ರಾಜು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವೈದ್ಯಾಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.ಪೊಟೋ೧೬ಸಿಪಿಟಿ೫: ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೆಂದ್ರನ್ ಕಿರು ಹೊತ್ತುಗೆಯನ್ನು ಬಿಡುಗಡೆಗೊಳಿಸಿದರು.