ಸಾರಾಂಶ
ಟ್ಯಾಕ್ಸಿ ಚಾಲಕ ಸ್ವಾಮಿ, ಅನುಪಮಾ, ಇತರರಿಂದ ಸುಳ್ಳು ಆರೋಪ । ಐಜಿಪಿ, ಎಸ್ಪಿ ಬಳಿ ದೂರು
ಕನ್ನಡಪ್ರಭ ವಾರ್ತೆ ದಾವಣಗೆರೆನನ್ನ ತೇಜೋವಧೆಗೆ ಪ್ರಯತ್ನಿಸುತ್ತಿರುವ ಟ್ಯಾಕ್ಸಿ ಚಾಲಕನಾದ ಹೊಳಲ್ಕೆರೆ ತಾಲೂಕಿನ ತಾಳ್ಯ ಗ್ರಾಮದ ನಿವಾಸಿ ಸ್ವಾಮಿ, ಆತನ ಸ್ನೇಹಿತೆ ಚಿತ್ರದುರ್ಗದ ಅನುಪಮಾ ಹಾಗೂ ಇತರರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಎಚ್ಚರಿಸಿದ್ದಾರೆ.
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ನಮ್ಮ ಊರಿನವರು ದೂರು ನೀಡಿದ್ದು, ಟ್ಯಾಕ್ಸಿ ಚಾಲಕ ಸ್ವಾಮಿ ಬಳಿಯಿಂದ 93 ಲಕ್ಷ ರು. ನಗದು, ಚಿನ್ನಾಭರಣ ಸೇರಿ ಒಟ್ಟಾರೆ 97 ಲಕ್ಷ ರು. ಪೊಲೀಸರು ಜಪ್ತಿ ಮಾಡಿದ್ದು, ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಉಪ್ಪಾರಪೇಟೆ ಠಾಣೆಯಲ್ಲಿ 7.10.2023ರಲ್ಲಿ ದೂರು ದಾಖಲಾಗಿದೆ. ಈಗ ರಾಜಕೀಯವಾಗಿ ಸಿದ್ದೇಶಪ್ಪನ ಮೇಲೆ ಸ್ವಾಮಿ, ಅನುಪಮ ಮೂಲಕ ಸುಳ್ಳು ಆರೋಪ ಮಾಡಿಸಲಾಗುತ್ತಿದೆ ಎಂದು ದೂರಿದರು.ಉಮೇಶ್ ಮತ್ತು ಸಹಚರರು ಎಂಎಎಸ್‌ಟಿ ಕಂಪನಿ ನಡೆಸುತ್ತಾರೆ. ಉಮೇಶ್ ಹಾಗೂ ಇತರರು ನಮ್ಮ ಕಂಪನಿಯವರಲ್ಲ. ಉಮೇಶರಿಗೂ ನಮ್ಮ ಜಿಎಂ ಗ್ರೂಪ್ಸ್‌ಗೂ ಯಾವುದೇ ಸಂಬಂಧ ಇಲ್ಲ. ಚಾಲಕ ಸ್ವಾಮಿ, ಆತನ ಸ್ನೇಹಿತೆ ಅನುಪಮಾ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಬಂಧಿಸಿ, ₹97 ಲಕ್ಷ ನಗದು, ಚಿನ್ನ ಜಪ್ತಿ ಮಾಡಿದ್ದಾರೆ. ಗುಟ್ಕಾ ಹವಾಲಾ ದುಡ್ಡು ಅಂತಾ ಚಾಲಕ ಸ್ವಾಮಿ ಆರೋಪ ಮಾಡಿದ್ದು, ಜಿಎಂ ಗ್ರೂಪ್ ಯಾವುದೇ ಹವಾಲಾ ದಂಧೆ ಮಾಡುವುದಿಲ್ಲ ಎಂದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನನ್ನ ವಿರುದ್ಧ ಆಧಾರ ರಹಿತವಾಗಿ ಆರೋಪಿಸುತ್ತಿದ್ದಾರೆ. ಇದರ ಹಿಂದೆ ಪಿತೂರಿ ಇದೆ. ನನ್ನ ಮೇಲೆ ಬೇರೆ ಬೇರೆ ತರಹದ ಆರೋಪಗಳನ್ನೂ ಮಾಡಬಹುದು. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನನ್ನ ಜೀವಕ್ಕೂ ನಾಳೆ ಸಂಚಕಾರ ತರಬಹುದು. ನನ್ನ ವಿರುದ್ಧ ಟ್ಯಾಕ್ಸಿ ಚಾಲಕ ಸ್ವಾಮಿ, ಅನುಪಮ ಆರೋಪ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ನವರು ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತೇವೆಂಬ ಹೇಳಿಕೆ ಸಾಕಷ್ಟು ಅನುಮಾನಕ್ಕೂ ಕಾರಣವಾಗಿದೆ ಎಂದರು.ಕಾಣದ ಕೈಗಳ ಪೊಲೀಸರು ಪತ್ತೆ ಹಚ್ಚಲಿ:
ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ ಮಾತನಾಡಿ, ಟ್ಯಾಕ್ಸಿ ಚಾಲಕನ ಮಾತು ಕೇಳಿ ಕಾಂಗ್ರೆಸ್ಸಿನವರು ಪ್ರತಿಭಟನೆಗೆ ಇಳಿಯುತ್ತಿದ್ದಾರೆಂದರೆ ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಾಳಿಗಳಿಗೆ ಕಾಡುತ್ತಿದೆ ಎಂಬುದಕ್ಕೆ ಇದೇ ಪುಷ್ಟಿ ನೀಡುತ್ತದೆ. ಸಂಸದ ಸಿದ್ದೇಶ್ವರ ವಿರುದ್ಧ ಸುಳ್ಳು ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲಿದ್ದು, ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ಕೈಗೊಳ್ಳಬೇಕು. ಈ ಷಡ್ಯಂತ್ರದ ಹಿಂದಿರುವ ಕಾಣದ ಕೈಗಳು ಯಾರಿದ್ದಾರೆಂಬುದು ಬಯಲು ಮಾಡಬೇಕು ಎಂದು ಒತ್ತಾಯಿಸಿದರು.ಹರಿಹರ ಶಾಸಕ ಬಿ.ಪಿ.ಹರೀಶ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ಉಪಾಧ್ಯಕ್ಷ ಶ್ರೀನಿವಾಸ ಟಿ.ದಾಸಕರಿಯಪ್ಪ ಇತರರಿದ್ದರು.
ಎಫ್ಐಆರ್ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಿಜಿಎಂ ಸಂಸ್ಥೆಯು ವರ್ಷಕ್ಕೆ 50 ಕೋಟಿ ರು. ತೆರಿಗೆ ಕಟ್ಟಿ, ವ್ಯಾಪಾರ ಮಾಡುತ್ತೇವೆ. ನಾನು 5ನೇ ಬಾರಿಗೆ ಸಂಸದನಾಗುವುದು ತಪ್ಪಿಸಲು ಹವಾಲದ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಈಗಾಗಲೇ ವಕೀಲರು, ಹಿತೈಷಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಚಾಲಕ ಸ್ವಾಮಿ, ಅನುಪಮಾ ವಿರುದ್ಧ ಎಫ್ಐಆರ್ ದಾಖಲಿಸಿ, ಎಸ್ಪಿ, ಐಜಿಪಿ ಸೂಕ್ತ ಕ್ರಮ ಕೈಗೊಳ್ಳಲು ಹೇಳಿರುವೆ.
ಡಾ.ಜಿ.ಎಂ.ಸಿದ್ದೇಶ್ವರ, ಸಂಸದ.................
ಆಧಾರ ರಹಿತ ಆರೋಪ, ತೇಜೋವಧೆ, ಪಿತೂರಿ ಕೆಲಸವಷ್ಟೇಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ನನ್ನನ್ನು ಸೋಲಿಸಲು ಇಲ್ಲಸಲ್ಲದ ಆರೋಪ, ತೇಜೋವಧೆ, ಪಿತೂರಿ ಮಾಡುವ ಕೆಲಸ ನಡೆದಿದೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಆರೋಪಿಸಿದ್ದಾರೆ.
ನನ್ನ ಹಾಗೂ ನನ್ನ ಕುಟುಂಬ, ನಮ್ಮ ಗ್ರೂಪ್ ವಿರುದ್ಧ ಹವಾಲಾ ಹಣ ಸಾಗಾಣಿಕೆ ಇತರೆ ಆಧಾರ ರಹಿತ ಆರೋಪ ಮಾಡುತ್ತಿದ್ದು, ಸತತ 4 ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ಸಿದ್ದೇಶಪ್ಪನನನ್ನು ಹೇಗಾದರೂ ಮಾಡಿ, ಸೋಲಿಸಬೇಕೆಂದು ಆಧಾರ ರಹಿತ ಆರೋಪದ ಹುನ್ನಾರ ನಡೆಸಿದ್ದಾರೆ ಎಂದರು.ಲೋಕಸಭೆ ಚುನಾವಣೆ ವೇಳೆ ಇಂತಹ ಆರೋಪ ಮಾಡುತ್ತಿರುವುದರ ಹಿಂದೆ ಕಾಣದ ಕೈಗಳಿರುವ ಅನುಮಾನವಿದೆ. ತಾಳ್ಯ ಗ್ರಾಮದ ಸ್ವಾಮಿ ಘಟನೆ ನಡೆದು 3 ತಿಂಗಳಾಗಿದ್ದು, ಈಗ ಆಧಾರ ರಹಿತ ಆರೋಪ ನೋಡಿದರೆ ನಿಜಕ್ಕೂ ಭಯ ಕಾಡುತ್ತಿದೆ. ಜೀವ ಬೆದರಿಕೆಯೂ ಇದೆ. ಹಾಗಾಗಿ ಮುಂದೇನು ಮಾಡಬೇಕೆಂಬ ಬಗ್ಗೆ ಪಕ್ಷದ ಹಿರಿಯರು, ಮುಖಂಡರು, ಎಲ್ಲರೊಡನೆ ಚರ್ಚಿಸುತ್ತೇನೆ ಎಂದು ಹೇಳಿದರು.