ನಾನು ಲೂಸಿ ಟೆಲಿಫಿಲ್ಮ, ವಚನ ಇಂಚರ ಕೃತಿ ಬಿಡುಗಡೆ

| Published : Jan 15 2024, 01:47 AM IST

ಸಾರಾಂಶ

ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಮೀಡಿಯ ಮೈಂಡ್ ಕ್ರಿಯೇಶನ್ಸ ಹಾಗೂ ಅಕ್ಷರತಾಯಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆ ಸಹಕಾರದೊಂದಿಗೆ ಶಿಕ್ಷಕ ಸಾಹಿತಿ ವೈ.ಬಿ. ಕಡಕೋಳ ಕಥೆಯಾಧಾರಿತ ಟೆಲಿಪಿಲ್ಮ ನಾನು ಲೂಸಿ ಹಾಗೂ ವೈ.ಬಿ. ಕಡಕೋಳ ಸಂಪಾದಕತ್ವದ ವಚನ ಇಂಚರ ಕೃತಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಮೀಡಿಯ ಮೈಂಡ್ ಕ್ರಿಯೇಶನ್ಸ ಹಾಗೂ ಅಕ್ಷರತಾಯಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆ ಸಹಕಾರದೊಂದಿಗೆ ಶಿಕ್ಷಕ ಸಾಹಿತಿ ವೈ.ಬಿ. ಕಡಕೋಳ ಕಥೆಯಾಧಾರಿತ ಟೆಲಿಪಿಲ್ಮ ‘ನಾನು ಲೂಸಿ’ ಹಾಗೂ ವೈ.ಬಿ. ಕಡಕೋಳ ಸಂಪಾದಕತ್ವದ ‘ವಚನ ಇಂಚರ’ ಕೃತಿ ಮತ್ತು ‘ಶ್ರಮಿಕ ರತ್ನ’, ‘ಶಿಕ್ಷಕ ರತ್ನ’, ‘ಕಲಾ ರತ್ನ’ ಪ್ರಶಸ್ತಿ ಪ್ರಧಾನ ಸಮಾರಂಭ ಜಂಟಿಯಾಗಿ ನಡೆದವು.

ಕಾರ್ಯಕ್ರಮ ಉದ್ಘಾಟಿಸಿದ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಗುರುವಿನ ಮಹತ್ವವನ್ನು ಅವರ ಶಿಷ್ಯ ಎಲ್.ಐ. ಲಕ್ಕಮ್ಮನವರ ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಅಕ್ಷರತಾಯಿ ಲೂಸಿ ಸಾಲ್ಡಾನಾ ಸಂಘಟನೆ ಹುಟ್ಟು ಹಾಕಿದ್ದಾರೆ. ಶಿಕ್ಷಕ ಸಾಹಿತಿ ವೈ.ಬಿ. ಕಡಕೋಳ ಕೃತಿ ಬಿಡುಗಡೆ ಜೊತೆಗೆ ಟೆಲಿಪಿಲ್ಮ ಗೆ ಕಥೆ ಒದಗಿಸಿದ ಅವರ ಬದುಕಿನ ಪುಟಗಳನ್ನು ನಿರ್ದೇಶಕ ಎಲ್ಲರ ಮನಮುಟ್ಟುವಂತೆ ಚಿತ್ರೀಕರಣ ಮಾಡಿರುವುದು ಸುಂದರವಾಗಿ ಮೂಡಿಬಂದಿದೆ ಎಂದರು.

‘ವಚನ ಇಂಚರ’ ಕೃತಿ ಬಿಡುಗಡೆಗೊಳಿಸಿದ ಹೋರಾಟಗಾರ್ತಿ ಡಾ. ಇಸಾಬೆಲಾ ಝೇವಿಯರ್, ಸಾಲ್ಡಾನಾ ಕ್ರಿಶ್ಚಿಯನ್ ಆದರೂ ಎಲ್ಲ ಧರ್ಮಗಳನ್ನು ತಮ್ಮ ಮೈಮನಗಳಲ್ಲಿ ಅಳವಡಿಸಿಕೊಂಡು ತಮ್ಮ ಬದುಕಿನ ಸಂಕೀರ್ಣತೆಯನ್ನು ಸಮರ್ಥವಾಗಿ ಎದುರಿಸಿ ಓರ್ವ ಆದರ್ಶ ಮಹಿಳೆಯಾಗಿ ನಮ್ಮ ಮುಂದಿದ್ದಾರೆ ಎಂದು ಬಣ್ಣಿಸಿದರು.

ಕಿರುಚಿತ್ರ ಬಿಡುಗಡೆ ಮಾಡಿದ ಪತ್ರಕರ್ತ ಪುಂಡಲೀಕ ಬಾಳೋಜಿ, ತಾವರಕೆರೆ ಗ್ರಾಮದ ಕೂಲಿಕಾರ್ಮಿಕರ 30ಕ್ಕೂ ಅಧಿಕ ಮಕ್ಕಳನ್ನು ಗುರುತಿಸಿ, ಅವರ ವಿದ್ಯಾಭ್ಯಾಸ ಸೇರಿ ಸರ್ವಾಂಗೀಣ ವಿಕಾಸಕ್ಕೆ ₹20 ಲಕ್ಷಕ್ಕೂ ಅಧಿಕ ಹಣವನ್ನು ಶಾಲೆಗೆ ದೇಣಿಗೆ ಪಡೆಯುವಲ್ಲಿ ಯಶಸ್ವಿಯಾಗಿರುವ ಶಿಕ್ಷಕಿ ಡಾ. ಟಿ. ವೀಣಾ ಅವರ ಸಾಧನೆ ಶ್ಲಾಘನೀಯ ಎಂದರು.

ಬಿಇಒ ಉಮೇಶ ಬಮ್ಮಕ್ಕನವರ ಚಲನಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು. ನಗರ ಬಿಇಒ ಅಶೋಕಕುಮಾರ ಸಿಂದಗಿ, ಗ್ರಾಮೀಣ ಬಿಇಒ ರಾಮಕೃಷ್ಣ ಸದಲಗಿ, ಕವಿವ ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ, ಭೀಮಪ್ಪ ಕಾಸಾಯಿ, ಬಿ.ಎನ್. ಬ್ಯಾಳಿ, ದತ್ತಿದಾನಿ ಲೂಸಿ ಸಾಲ್ಡಾನಾ, ಲೇಖಕ ವೈ.ಬಿ. ಕಡಕೋಳ, ಎಲ್.ಐ. ಲಕ್ಕಮ್ಮನವರ, ಶ್ರೀಶೈಲ ಗಡದಿನ್ನಿ, ನಿರ್ಮಾಪಕ ಮಲ್ಲಿಕಾರ್ಜುನ ಚರಂತಿಮಠ, ಛಾಯಾಗ್ರಾಹಕ ಬಸವರಾಜ ಗೋಕಾವಿ ಮತ್ತಿತರರು ಇದ್ದರು.

ಡಾ. ವೀಣಾ ಅವರ ಜೀವನ ಚಿತ್ರಣ ಆಧಾರಿತ ನೂತನ ಟೆಲಿಪಿಲ್ಮ ಪೋಸ್ಟರ್ ಅನಾವರಣಗೊಳಿಸಲಾಯಿತು. ‘ಶ್ರಮಿಕ ರತ್ನ’, ‘ಶಿಕ್ಷಕ ರತ್ನ’, ‘ಕಲಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ರುದ್ರೇಶ ಕುರ್ಲಿ ನಿರೂಪಿಸಿದರು. ಎ.ಎಚ್. ನದಾಫ್ ವಂದಿಸಿದರು.