‘ಕೊರಗಜ್ಜ’ ಸಿನಿಮಾ ತಂಡ ಹರಕೆ ಕೋಲದಲ್ಲಿ ಭಾಗಿ

| Published : Jan 15 2024, 01:47 AM IST

ಸಾರಾಂಶ

ಉಳ್ಳಾಲದ ಕಲ್ಲಾಪು ಬುರ್ದುಗೋಳಿ ಶ್ರೀ ಗುಳಿಗ ಕೊರಗಜ್ಜ ಉದ್ಭವಶಿಲೆ ಆದಿಸ್ಥಳಕ್ಕೆ ಕ್ಷೇತ್ರಕ್ಕೆ ‘ಕೊರಗಜ್ಜ’ ಸಿನಿಮಾದ ಯಶಸ್ಸಿಗೆ ಚಿತ್ರತಂಡವು ಹರಕೆಯ ಕೋಲದಲ್ಲಿ ಭಾಗವಹಿಸಿತು. ನಟಿಯರಾದ ಶ್ರುತಿ, ಭವ್ಯಾ ಕೋಲ ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಕಲ್ಲಾಪು ಬುರ್ದುಗೋಳಿ ಶ್ರೀ ಗುಳಿಗ ಕೊರಗಜ್ಜ ಉದ್ಭವಶಿಲೆ ಆದಿಸ್ಥಳಕ್ಕೆ ಕ್ಷೇತ್ರಕ್ಕೆ ‘ಕೊರಗಜ್ಜ’ ಸಿನಿಮಾದ ಯಶಸ್ಸಿಗೆ ಚಿತ್ರತಂಡವು ಹರಕೆಯ ಕೋಲದಲ್ಲಿ ಭಾಗವಹಿಸಿತು. ಈ ಸಂದರ್ಭ ಹಿರಿಯ ಸ್ಯಾಂಡಲ್ ವುಡ್ ನಟಿಯರಾದ ಶೃತಿ ಮತ್ತು ಭವ್ಯ ಕೂಡಾ ಭಾಗಿಯಾಗಿ ಅಜ್ಜನ ಕೋಲ ವೀಕ್ಷಿಸಿದರು.

ನಟಿ ಭವ್ಯ ಮಾತನಾಡಿ, ಕಳೆದ ಹುಟ್ಟುಹಬ್ಬದ ಸಂದರ್ಭದಲ್ಲೂ ಕ್ಷೇತ್ರಕ್ಕೆ ಭೇಟಿ ನೀಡಿರುವೆ. ಈ ಬಾರಿಯೂ ದೈವ ಇಚ್ಛೆಯಂತೆ ಅದೇ ದಿನ ಭೇಟಿ ನೀಡಿದ್ದೇನೆ. ಕೊರಗಜ್ಜನ ಆಶೀರ್ವಾದ ಮತ್ತು ಪವಾಡದಿಂದ ಇದು ಸಾಧ್ಯವಾಗಿದೆ, ಕೊರಗಜ್ಜ ಚಿತ್ರದಲ್ಲಿ ಪಂಜಂದಾಯ ಪಾತ್ರ ನಿರ್ವಹಿಸಿರುವೆ ಎಂದರು.

ನಟಿ ಶೃತಿ ಮಾತನಾಡಿ , ಹಣ ಇದ್ದವರು ಸಿನೆಮಾ ಮಾಡಲು ಸಾಧ್ಯವಿಲ್ಲ. ದೇವರ ಅನುಗ್ರಹದಿಂದಷ್ಟೇ ಕೊರಗಜ್ಜ ಸಿನಿಮಾ ಮಾಡಿರುವುದು ಅನುಭವದಿಂದ ಕಂಡುಬಂದ ಸತ್ಯ. ಚಿತ್ರದ ಶೂಟಿಂಗ್ ಉದ್ದಕ್ಕೂ ಒಳ್ಳೆ ವಿಚಾರಗಳೇ ತುಂಬಿರುವುದು ದೈವದ ಅನುಗ್ರಹ ಎಂದರು.

ನಿರ್ದೇಶಕ ಸುಧಿರ್ ರಾಜ್ ಅತ್ತಾವರ ಮಾತನಾಡಿ , ತುಳುನಾಡಿನ ದೈವಾರಾಧನೆಯ ವೇಷಭೂಷಣಗಳು ಉತ್ತರ ಸೈಬೀರಿಯಾದ ಷಮನಿಸಂನಲ್ಲೂ ಇದೆ. ಚಿತ್ರದ ಶೂಟಿಂಗ್ ಸಂದರ್ಭ ತೊಂದರೆಗಳಾಗದಂತೆ ಗುಳಿಗ, ಕಲ್ಲುರ್ಟಿಗೆ ಗುಡಿ ಕಟ್ಟಿಯೇ ಮುಂದುವರಿದಿದ್ದೇವೆ. ವಿದ್ಯೆ ತಿಳಿದವರಲ್ಲಿ ಕೇಳಿಕೊಂಡು ಶೂಟಿಂಗ್ ನಡೆಸಲಾಗಿದೆ. ಮಾರ್ಚ್ ಕೊನೆಗೆ ಚಿತ್ರ ತೆರೆಕಾಣಲಿದೆ.

ಪ್ಯಾನ್ ಇಂಡಿಯಾ ರೀತಿಯಲ್ಲಿ ಸಿನೆಮಾ ತಯಾರಾಗುತ್ತಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂ, ಕನ್ನಡ ಹಾಗೂ ತುಳು ಭಾಷೆಯಲ್ಲಿಯೂ ಚಿತ್ರ ತೆರೆಕಾಣಲಿದೆ.

ದೈವೀಶಕ್ತಿಯೇ ಇನ್ನೊಂದು ಮಟ್ಟಕ್ಕೆ ಸಿನೆಮಾವನ್ನು ಕೊಂಡೊಯ್ಯುವ ಧೈರ್ಯವಿದೆ. ತಾಂತ್ರಿಕವಾಗಿ ಪುಷ್ಪದಂತಹ ದೊಡ್ಡ ಸಿನಿಮಾ ನಿರ್ವಹಿಸಿದ ಬಿಪಿನ್ ದೇವ್ ಸೌಂಡ್ ಡಿಸೈನ್ ಮಾಡುತ್ತಿದ್ದು, ಮಲಯಾಳಂ ನ ಬಹುದೊಡ್ಡ ಎಡಿಟರ್ ಗೀತ್ ಜೋಷಿ ಎಡಿಟಿಂಗ್ ತಂಡದ ನೇತೃತ್ವ ವಹಿಸಿದ್ದಾರೆ. ಒ.ಬಿ ಸುಂದರ್ ಸಂಗೀತ ನಿರ್ದೇಶನ ಹಾಗೂ ಹಿನ್ನೆಲೆ ಸಂಗೀತವನ್ನು ನೀಡುತ್ತಿದ್ದಾರೆ. ಕೊಚ್ಚಿ, ಮುಂಬೈನಲ್ಲಿ ಪೋಸ್ಟ್ ಪ್ರಾಡಕ್ಷನ್ ನಡೆಯುತ್ತಿದೆ. ಸಿನೆಮಾದ ಕುತೂಹಲವನ್ನು ದೊಡ್ಡ ಸಾಧಕರು ಪ್ರಶ್ನಿಸುತ್ತಿದ್ದಾರೆ.

ತ್ರಿವಿಕ್ರಮ್ ಸಪಲ್ಯ ಅನ್ನುವ ನಿರ್ಮಾಪಕರಿಂದಾಗಿ ಐದು ಕ್ಯಾಮರಾ ಬಳಸಿ ಶೂಟಿಂಗ್ ನಡೆಸಲು ಸಾಧ್ಯವಾಗಿದೆ. ಭರತ್ ಕೊರಗತನಿಯ ಪಾತ್ರ ನಿರ್ವಹಿಸುತ್ತಿದ್ದು, ಕೃತಿಕಾ ಅನ್ನುವ ಅದ್ಭುತ ಪ್ರತಿಭೆ ಕೊರಗಜ್ಜನ ತಾಯಿ ಕೊರಪೊಳು ಪಾತ್ರ ಮಾಡುತ್ತಿದ್ದಾರೆ. ಚಿತ್ರಕ್ಕೆ `ಕೊರಗಜ್ಜ’ ಎಂದು ಹೆಸರಿಡಲಾಗಿದ್ದು, ಕೊರ್ರೆ ಕೊಡ್ತಾರ್ ಕೊರಗ ತನಿಯ ಅನ್ನುವುದು ಕೊರಗ ಭಾಷೆಯಲ್ಲಿ ಟ್ಯಾಗ್ ಲೈನ್ ನೀಡಲಾಗಿದೆ ಎಂದರು.

ನಿರ್ಮಾಪಕ ತ್ರಿವಿಕ್ರಮ ಸಪಲ್ಯ , ವಿದ್ಯಾಧರ್ ಶೆಟ್ಟಿ ಸಹ ನಿರ್ಮಾಪಕ , ನಟಿ ಭವ್ಯ ಪುತ್ರಿ ಅದಿತಿ, ನಟಿ ಶ್ರುತಿ ಮಗಳು ಗೌರಿ, ನಾಯಕ ನಟ ಭರತ್ ಸೂರ್ಯ, ನಾಯಕ ನಟಿ ರಿತಿಕ, ಬಾಲ ನಟರುಗಳಾದ ಸುಧಾ, ನವನೀತ, ಶ್ರೀಹರಿ, ಬುರ್ದುಗೋಳಿ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ್ ನಾಯಕ್ , ಉಪಾಧ್ಯಕ್ಷ ದೇವದಾಸ್ ಗಟ್ಟಿ ಕಾಯಂಗಳ, ಬಿಜೆಪಿ ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ವಕೀಲ ಗಂಗಾಧರ್ ಉಳ್ಳಾಲ್, ಪುರುಷೋತ್ತಮ್ ಕಲ್ಲಾಪು ಇದ್ದರು.