ಸಂವಿಧಾನ ವಿರೋಧಿ ಬಿಜೆಪಿಯನ್ನು ಸೋಲಿಸಿ; ದಲಿತ ಸಂಘಟನೆಗಳ ಮುಖಂಡರ ಕರೆ

| Published : Apr 25 2024, 01:02 AM IST / Updated: Apr 25 2024, 01:03 AM IST

ಸಂವಿಧಾನ ವಿರೋಧಿ ಬಿಜೆಪಿಯನ್ನು ಸೋಲಿಸಿ; ದಲಿತ ಸಂಘಟನೆಗಳ ಮುಖಂಡರ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಮೋದಿ ಸರಕಾರದ ೧೦ ವರ್ಷಗಳ ಆಡಳಿತದಲ್ಲಿ ದಲಿತರ ಸ್ಥಿತಿ ಚಿಂತಾಜನಕವಾಗಿದೆ. ಬಿಜೆಪಿಗೆ ದಲಿತರು,ಅಲ್ಪಸಂಖ್ಯಾತರು,ಹಿಂದುಳಿದ ವರ್ಗದವರೆಂದರೆ ದ್ವೇಷ. ಈಗಾಗಲೇ ಧರ್ಮಾಧಾರಿತ ಎಂಬ ನೆಪ ಮಾಡಿ ಅಲ್ಪಸಂಖ್ಯಾತರಿಗೆ ನೀಡುತ್ತಿದ್ದ ಶೇ 4 ಮೀಸಲಾತಿಯನ್ನು ರದ್ದು ಪಡಿಸಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ಪರೋಕ್ಷವಾಗಿ ಸಂವಿಧಾನ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಾ ಪದೇ ಪದೇ ಸಂವಿಧಾನ ಬದಲಾಯಿಸುವ ಮಾತಗಳನ್ನಾಡುತ್ತಿರುವ ಬಿಜೆಪಿ ಪಕ್ಷವನ್ನು ಸೋಲಿಸಲು ಎಲ್ಲಾ ದಲಿತರು, ಪ್ರಗತಿಪರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ದಲಿತಪರ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ದಲಿತ ಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಉರ್ಡಿಗೆರೆ ಕೆಂಪರಾಜು, ಇಂದು ನಾವೆಲ್ಲರೂ ಒಂದೆಡೆ ಸೇರಿ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ದೊರೆತ್ತಿದ್ದರೆ ಅದು ಸಂವಿಧಾನದಿಂದ. ಇಂತಹ ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂದು ಪದೇ ಪದೇ ಬಿಜೆಪಿ ಸಂಸದರು ಮಾತನಾಡುತ್ತಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ದಲಿತರು, ಪ್ರಗತಿಪರರು, ರೈತರು, ಕಾರ್ಮಿಕರಿಗೆ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಸಂವಿಧಾನವೊಂದು ಪ್ರಬಲವಾದ ಆಸ್ತ್ರ. ಹಾಗಾಗಿ ಸಂವಿಧಾನದ ಉಳಿವಿಗಾಗಿ ನಾವೆಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರನ್ನು ಬೆಂಬಲಿಸಲು ತೀರ್ಮಾನಿಸಿದ್ದೇವೆ ಎಂದರು.

ಸ್ವಾಭಿಮಾನಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಬಂಡೆಕುಮಾರ್ ಮಾತನಾಡಿ, ಮೋದಿ ಸರಕಾರದ ೧೦ ವರ್ಷಗಳ ಆಡಳಿತದಲ್ಲಿ ದಲಿತರ ಸ್ಥಿತಿ ಚಿಂತಾಜನಕವಾಗಿದೆ. ಬಿಜೆಪಿಗೆ ದಲಿತರು,ಅಲ್ಪಸಂಖ್ಯಾತರು,ಹಿಂದುಳಿದ ವರ್ಗದವರೆಂದರೆ ದ್ವೇಷ. ಈಗಾಗಲೇ ಧರ್ಮಾಧಾರಿತ ಎಂಬ ನೆಪ ಮಾಡಿ ಅಲ್ಪಸಂಖ್ಯಾತರಿಗೆ ನೀಡುತ್ತಿದ್ದ ಶೇ 4 ಮೀಸಲಾತಿಯನ್ನು ರದ್ದು ಪಡಿಸಿದೆ. ಅವರ ಮುಂದಿನ ಟಾರ್ಗೆಟ್ ದಲಿತರು. ಹಾಗಾಗಿ ದಲಿತರ ಪಾಲಿಗೆ ಈ ಚುನಾವಣೆ ಮಾಡು, ಇಲ್ಲವೇ ಮಡಿ ಚುನಾವಣೆಯಾಗಿದೆ, ದಲಿತರು ವಿವೇಚನೆಯಿಂದ ಮತ ಚಲಾಯಿಸದಿದ್ದರೆ ಮುಂದೊಂದು ದಿನ ದೊಡ್ಡ ಸಂಕಷ್ಟ ಎದುರಿಸಬೇಕಾಗುತ್ತಿದೆ, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷ ಬಡವರಿಗಾಗಿ ಹಲವು ಕಾರ್ಯಕ್ರಮಗಳನ್ನು ತಂದಿದ್ದು, ಅದರಲ್ಲಿ ಅನ್ನಭಾಗ್ಯವೂ ಒಂದು. ಪಡಿತರ ಅಕ್ಕಿಯಿಂದ ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿವೆ, ರಾಜ್ಯದ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಅನ್ನಭಾಗ್ಯದ ಯೋಜನೆಗೆ ಅಗತ್ಯವಿರುವ ಅಕ್ಕಿಯನ್ನು ನೀಡದೆ ಬಡವರನ್ನು ನಿರ್ಲಕ್ಷಿಸಿದ್ದು ಬಿಜೆಪಿ. ಬಡವರಿಗಾಗಿ ಒಂದು ಕೆ.ಜಿ.ಅಕ್ಕಿಗೆ 32 ರು. ಕೊಡಲು ಒಪ್ಪದ ಕೇಂದ್ರದ ಬಿಜೆಪಿ ಸರಕಾರ ಬಡವರ ಹೊಟ್ಟೆಯ ಮೇಲೆ ಹೊಡೆದಿದೆ. ಹಾಲಿ ಸಂಸದ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡದೆ ಮೋಸ ಮಾಡಿದ್ದು ಬಿಜೆಪಿ. ಹಾಗಾಗಿ ಎಲ್ಲಾ ಮಾದಿಗ ಮತದಾರರು ಬಿಜೆಪಿಗೆ ವಿರುದ್ಧ ಮತ ಚಲಾಯಿಸುವಂತೆ ಬಂಡೆಕುಮಾರ್ ಮನವಿ ಮಾಡಿದರು.

ಮಂದ ಕೃಷ್ಣ ಮಾದಿಗ ನಮ್ಮ ನಾಯಕರು, ಆದರೆ ಅವರು ಯಾವ ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಒಳಮೀಸಲಾತಿ ವರ್ಗೀಕರಣ ಹೋರಾಟವನ್ನು ನ್ಯಾಯಾಲಯದಲ್ಲಿ ಕೇಸು ಇರುವ ನೆಪ ಮಾಡಿ, ನೇಪಥ್ಯಕ್ಕೆ ಸರಿಸಲಾಗಿದೆ. ದಲಿತರಿಗೆ ಬಿಜೆಪಿಯಿಂದ ಘೋರ ಅನ್ಯಾಯವಾಗಿದೆ. ಈ ಎಲ್ಲಾ ಅಂಶಗಳ ಆಧಾರದ ಮೇಲೆ ಬಿಜೆಪಿಯನ್ನು ಸೋಲಿಸುವುದು ದಲಿತರ ಗುರಿಯಾಗಿದ್ದು, ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಕೋರಲಾಗುತ್ತಿದೆ ಎಂದರು.

ಸಭೆಯಲ್ಲಿ ದಲಿತಪರ ಸಂಘಟನೆಗಳ ಮುಖಂಡರಾದ ಹಬ್ಬತ್ತನಹಳ್ಳಿ ಶ್ರೀನಿವಾಸ್, ರಂಜನ್, ಲಕ್ಷ್ಮೀದೇವಮ್ಮ, ಬೆಳ್ಳಾವಿ ನಾಗಣ್ಣ, ಗೂಳೂರು ರಾಜಣ್ಣ, ನರಸಿಂಹಮೂರ್ತಿ, ರಂಗಣ್ಣ, ರಾಮಮೂರ್ತಿ, ಗೋವಿಂದರಾಜು, ರಂಗನಾಥ್ ಹೊಳಕಲ್ಲು ಮತ್ತಿತರರು ಉಪಸ್ಥಿತರಿದ್ದರು.