ಬಿ.ಎಚ್.ಎಂ.ಗುರುಶಾಂತ ಶಾಸ್ತ್ರಿ

ಕಂಪ್ಲಿ: ಪಟ್ಟಣದಲ್ಲಿ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಸ್ಥಾಪನೆಗೊಳ್ಳಬೇಕಿದ್ದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಣಯಗೊಂಡು ಹಲವು ತಿಂಗಳು ಕಳೆದರೂ ಕಾಮಗಾರಿ ಆರಂಭವಾಗದಿರುವುದು ತಾಲೂಕಿನ ಜನತೆ ಹಾಗೂ ಯುವಕರಲ್ಲಿ ತೀವ್ರ ನಿರಾಸೆ ಮೂಡಿಸಿದೆ.

ಕಂಪ್ಲಿ, ರಾಯಚೂರು ಗ್ರಾಮೀಣ ಭಾಗದಲ್ಲಿ ಜಿಟಿಟಿಸಿ ಕಾಲೇಜು ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಕೆಕೆಆರ್‌ಡಿಬಿ ಮೈಕ್ರೋ ಅನುದಾನದಡಿ ತಲಾ ₹73.75 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು 2025ರ ಸೆಪ್ಟೆಂಬರ್ 4ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಆದರೆ, ನಿರ್ಣಯದ ನಂತರವೂ ಕಾಮಗಾರಿ ಆರಂಭವಾಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಜಿಟಿಟಿಸಿ ಕಾಲೇಜು ಸ್ಥಾಪನೆಯಾಗುವುದರಿಂದ ಈ ಭಾಗದ ಯುವಕರಿಗೆ ಉತ್ತಮ ತಾಂತ್ರಿಕ ತರಬೇತಿ ಹಾಗೂ ಉದ್ಯೋಗಾವಕಾಶಗಳ ದಾರಿ ತೆರೆಯಲಿದೆ ಎಂಬ ನಿರೀಕ್ಷೆ ಮೂಡಿತ್ತು. ನಾಲ್ಕು ವರ್ಷದ ಪ್ರಮುಖ ಕೋರ್ಸ್‌ಗಳೊಂದಿಗೆ ಈ ಕಾಲೇಜು ಕಾರ್ಯ ನಿರ್ವಹಿಸಲಿದ್ದು, ಮೊದಲ ಮೂರು ವರ್ಷ ತಾಂತ್ರಿಕ ತರಬೇತಿ ಹಾಗೂ ಒಂದು ವರ್ಷ ಕೈಗಾರಿಕಾ ಸಂಸ್ಥೆಗಳಲ್ಲಿ ಇಂಪ್ಲಾಂಟ್ ಟ್ರೈನಿಯಾಗಿ ಕಾರ್ಯ ನಿರ್ವಹಿಸುವ ಅವಕಾಶ ಕಲ್ಪಿಸಲಾಗುತ್ತದೆ. ತರಬೇತಿ ಪೂರ್ಣಗೊಂಡ ಬಳಿಕ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ.

ಇದರ ಜೊತೆಗೆ 2ರಿಂದ 6 ತಿಂಗಳ ಅವಧಿಯ ಶಾರ್ಟ್ ಟರ್ಮ್ ಕೋರ್ಸ್‌ಗಳೂ ಇರಲಿದ್ದು, ಐಟಿಐ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ಪದವೀಧರರು ಈ ತರಬೇತಿಗೆ ಸೇರ್ಪಡೆಯಾಗಬಹುದಾಗಿದೆ. ಮತ್ತೊಂದು ವಿಶೇಷವಾಗಿ ಒಂದು ವರ್ಷದ “ಟೂಲ್ ರೂಮ್ ಮಿಶಿನಿಷ್ಟ್ ಸರ್ಟಿಫಿಕೇಟ್ ಪ್ರೋಗ್ರಾಮ್” ಕೂಡ ನಡೆಸಲಾಗುತ್ತದೆ. ಈ ತರಬೇತಿಗಳ ಮೂಲಕ ಯುವಕರಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಸ್ವ ಉದ್ಯೋಗದ ಮನೋಭಾವ ಬೆಳೆಸುವ ಉದ್ದೇಶ ಹೊಂದಲಾಗಿದೆ.


ಕೈಗಾರಿಕಾ ಕ್ಷೇತ್ರಕ್ಕೆ ಅಗತ್ಯವಾದ ತಾಂತ್ರಿಕ ನಿಪುಣರನ್ನು ಸಿದ್ಧಪಡಿಸುವಲ್ಲಿ ಜಿಟಿಟಿಸಿ ಮಹತ್ವದ ಪಾತ್ರ ವಹಿಸುವುದರಿಂದ ಕಂಪ್ಲಿ ಭಾಗದ ಯುವಕರಿಗೆ ಇದು ವರದಾನವಾಗಲಿದೆ ಎಂಬ ಆಶಾಭಾವನೆ ವ್ಯಕ್ತವಾಗಿತ್ತು. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಕೈಗಾರಿಕಾ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯುವ ಜೊತೆಗೆ ಸ್ವಂತವಾಗಿ ಸಣ್ಣ ಮತ್ತು ಮಧ್ಯಮ ಮಟ್ಟದ ಉದ್ಯಮಗಳನ್ನು ಆರಂಭಿಸಲು ಸಾಧ್ಯವಾಗುತ್ತದೆ. ಇದರಿಂದ ನಿರುದ್ಯೋಗ ಸಮಸ್ಯೆ ಕೂಡ ಸಾಕಷ್ಟು ಮಟ್ಟಿಗೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ಈ ಭಾಗದ ಜನರಲ್ಲಿ ಬೇರೂರಿತ್ತು.

ಆದರೆ ಸಚಿವ ಸಂಪುಟದ ಅನುಮೋದನೆ ದೊರೆತಿದ್ದರೂ ಕಾಲೇಜು ನಿರ್ಮಾಣ ಕಾಮಗಾರಿ ಆರಂಭವಾಗದೇ ಇರುವುದರಿಂದ ಯುವಕರ ಕನಸುಗಳು ಸಾಕಾರವಾಗುವ ದಾರಿ ಇನ್ನೂ ಅಸ್ಪಷ್ಟವಾಗಿಯೇ ಉಳಿದಿದೆ. ಇದರಿಂದಾಗಿ ಸರ್ಕಾರದ ಘೋಷಣೆ ಕೇವಲ ಕಾಗದದ ಮೇಲಿನ ಯೋಜನೆಯಾಗಿ ಉಳಿಯುವ ಭೀತಿ ವ್ಯಕ್ತವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಕಾಲೇಜು ನಿರ್ಮಾಣ ಕಾರ್ಯಕ್ಕೆ ವೇಗ ನೀಡಬೇಕು. ಕಾಮಗಾರಿಯನ್ನು ಶೀಘ್ರ ಆರಂಭಿಸುವ ಮೂಲಕ ಈ ಭಾಗದ ಸಾವಿರಾರು ಯುವಕರಿಗೆ ತರಬೇತಿ ಹಾಗೂ ಉದ್ಯೋಗಾವಕಾಶಗಳ ದಾರಿ ತೆರೆಯಬೇಕು ಎಂಬುದು ಸ್ಥಳೀಯರು ಹಾಗೂ ಯುವ ಸಮುದಾಯದ ಒತ್ತಾಯವಾಗಿದೆ.

ಕಂಪ್ಲಿ ತಾಲೂಕಿನ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಜಿಟಿಟಿಸಿ ಕಾಲೇಜು ಸ್ಥಾಪನೆ ಮಹತ್ವದ ಹೆಜ್ಜೆಯಾಗಿದೆ. ಇದಕ್ಕಾಗಿ ಅರಳಿಹಳ್ಳಿ ತಾಂಡಾ ಪ್ರದೇಶದಲ್ಲಿ ಸುಮಾರು 6 ಎಕರೆ ಭೂಮಿ ಮಂಜೂರಾಗಿದೆ. ಕಾಲೇಜು ಕಟ್ಟಡ ನಿರ್ಮಾಣದ ಸಂಬಂಧ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಲಾಗುತ್ತದೆ ಎನ್ನುತ್ತಾರೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ.