ಮುನಿರಾಬಾದ್ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಹುಲಿಗಿ ಕ್ರಾಸ್‌ ಸಮೀಪ ಮೇಲ್ಸೇತುವೆ (ಫ್ಲೈಒವರ್‌) ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

ಎಸ್. ನಾರಾಯಣ

ಮುನಿರಾಬಾದ್: ಇಲ್ಲಿನ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಹುಲಿಗಿ ಕ್ರಾಸ್‌ ಸಮೀಪ ಮೇಲ್ಸೇತುವೆ (ಫ್ಲೈ ಓವರ್‌) ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಎರಡು ಮೇಲ್ಸೇತುವೆ ಕಾಮಗಾರಿ ಆರಂಭಿಸಲಾಗಿತ್ತು. ಒಂದು ಹಿಟ್ನಾಳ ಕ್ರಾಸ್ ಸಮೀಪ, ಇನ್ನೊಂದು ಹುಲಿಗೆ ಕ್ರಾಸ್ ಸಮೀಪ. ಎರಡೂ ಕಾಮಗಾರಿ ಗುತ್ತಿಗೆಯನ್ನು ಒಬ್ಬರೇ ನಿರ್ವಹಿಸುತ್ತಿದ್ದಾರೆ. ಹಿಟ್ನಾಳ್ ಕ್ರಾಸ್ ಬಳಿ ಫ್ಲೈಒವರ್ ಕಾಮಗಾರಿ ಮುಕ್ತಾಯಗೊಂಡಿದೆ. ಆದರೆ ಹುಲಿಗಿ ಕ್ರಾಸ್ ಸಮೀಪ ಇನ್ನೂ ನಡೆಯುತ್ತಿದೆ.

ಹಿಟ್ನಾಳ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ 63 ಹಾಗೂ 50 ಒಂದಾಗುತ್ತವೆ. ಹೊಸಪೇಟೆಯ ಕಣವಿ ವೀರಭದ್ರ ಸ್ವಾಮಿ ದೇವಸ್ಥಾನದ ವರೆಗೆ ಸುಮಾರು 20 ಕಿಮೀ ವರೆಗೆ ಒಂದಾಗಿ ಸಾಗುತ್ತದೆ. ಹಿಟ್ನಾಳ್ ಕ್ರಾಸ್‌ನಿಂದ ಹಿಡಿದು ಹೊಸಪೇಟೆ ಕಣಿವೆ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಪ್ರತಿನಿತ್ಯ 15,000ಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ಈ ಭಾಗದಲ್ಲಿ ವಾಹನ ಸಂಚಾರ ದಟ್ಟಣೆ ಅತ್ಯಧಿಕವಾಗಿದೆ.

ರಾಷ್ಟ್ರೀಯ ಹೆದ್ದಾರಿ 50ರ ಹಾಗೂ 63ರ ಪಕ್ಕದಲ್ಲಿರುವ ಹುಲಿಗಿ ಕ್ರಾಸ್‌ ದೇಶದ ಅತ್ಯಧಿಕ ಅಪಘಾತ ಸಂಭವಿಸುವ ವಲಯ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಿಸಿದೆ. ಈ ಕ್ರಾಸಿನಲ್ಲಿ ಕಳೆದ ಒಂದು ದಶಕದಲ್ಲಿ ರಸ್ತೆ ಅಪಘಾತದಲ್ಲಿ ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. ಜನರ ಸಾವು ನೋವು ತಪ್ಪಿಸಲು ಕೇಂದ್ರ ಸರ್ಕಾರ ಹುಲಿಗಿ ಕ್ರಾಸ್ ಸಮೀಪ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಿತು. ಕಾಮಗಾರಿಗಾಗಿ ಟೆಂಡರ್ ಕರೆಯಿತು.

ಗುತ್ತಿಗೆದಾರರು ಹಿಟ್ನಾಳ ಕ್ರಾಸ್‌ ಬಳಿ ಸೇತುವೆ ಕಾಮಗಾರಿಯನ್ನು ಕ್ಷಿಪ್ರಗತಿಯಲ್ಲಿ ಮುಗಿಸಿದ್ದಾರೆ. ಹುಲಿಗಿ ಕ್ರಾಸ್ ಮೇಲ್ಸೇತುವೆ ಕಾಮಗಾರಿ ವಿಳಂಬವಾಗಿದೆ. ಇಲ್ಲಿ ಬೆರಳೆಣಿಕೆಯಷ್ಟು ಸಿಬ್ಬಂದಿ ಹಗಲು ವೇಳೆಯಲ್ಲಿ ಮಾತ್ರ ಕಾಮಗಾರಿ ನಡೆಸುತ್ತಿದ್ದಾರೆ. ಹುಲಿಗೆಮ್ಮ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ.

ಪ್ರತಿನಿತ್ಯ ಟ್ರಾಫಿಕ್ ಜಾಮ್: ಈ ಮಾರ್ಗದಲ್ಲಿ ಪ್ರತಿನಿತ್ಯ ಸಂಚಾರ ದಟ್ಟಣೆ ಉಂಟಾಗುತ್ತಿದೆ. ವಿದ್ಯಾರ್ಥಿಗಳು, ನೌಕರರು ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಅಪಘಾತ ಸಾಧ್ಯತೆಯೂ ಹೆಚ್ಚಿದೆ. ಹಿಂದೆ ಮುನಿರಾಬಾದ್‌ನಿಂದ ಕೊಪ್ಪಳಕ್ಕೆ ಬಸ್‌ನಲ್ಲಿ ಪ್ರಯಾಣಿಸಲು ಕೇವಲ 20 ನಿಮಿಷ ಬೇಕಾಗುತ್ತಿತ್ತು. ಈಗ ಒಂದೂವರೆ ಗಂಟೆ ತಗುಲುತ್ತಿದೆ.

ಸರ್ವೀಸ್‌ ರಸ್ತೆಯಲ್ಲಿ ಭಾರಿ ವಾಹನ ಓಡಾಟ: ಫ್ಲೈಒವರ್ ನಿರ್ಮಾಣದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ವಾಹನಗಳು ಹೆದ್ದಾರಿಯ ಪಕ್ಕದಲ್ಲಿರುವ ಸರ್ವಿಸ್ ರಸ್ತೆಯಲ್ಲಿ ಸಂಚರಿಸುತ್ತವೆ. ಅದರಿಂದ ಸರ್ವಿಸ್ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಅದರ ಡಾಂಬರ್ ಕಿತ್ತುಹೋಗಿ, ಧೂಳುಮಯವಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕಾಮಗಾರಿ ಮುಗಿಯುವುದು ಯಾವಾಗ ಎಂದು ಪ್ರಶ್ನಿಸಿದ್ದಾರೆ.

ಗುತ್ತಿಗೆದಾರರಿಂದ ಮಾನವಹಕ್ಕುಗಳ ಉಲ್ಲಂಘನೆ ಆಗಿದೆ. ಗುತ್ತಿಗೆದಾರರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಮಾನವ ಹಕ್ಕುಗಳ ಆಯೋಗದ ಸದಸ್ಯ ಗಣೇಶ್ ಹೊರತಟ್ನಾಳ್ ಹೇಳಿದರು.ಮೇಲ್ಸೇತುವೆ ಕಾಮಗಾರಿ ಪ್ರಾರಂಭಿಸುವ ಮುನ್ನ ಗುತ್ತಿಗೆದಾರರು ಹೊಸಳ್ಳಿ ಹಾಗೂ ಲಿಂಗಗಾಪುರ ಗ್ರಾಮಸ್ಥರೊಂದಿಗೆ ಚರ್ಚೆ ಮಾಡಿಲ್ಲ. ಇದರ ಪರಿಣಾಮ ದ್ವಿಚಕ್ರ ವಾಹನ ಸವಾರರಿಗೆ ಹುಲಿಗಿ ಕ್ರಾಸ್ ಅಕ್ಷರಶಃ ಮೃತ್ಯುಕೂಪವಾಗಿ ಪರಿಣಮಿಸಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಖಾಜಾ ವಲಿ ಹೊಸಳ್ಳಿ ಹೇಳಿದರು.ಈ ಬಾರಿ ಈ ಪ್ರದೇಶದಲ್ಲಿ ಭಾರಿ ಮಳೆ ಬಂದ ಕಾರಣ ಕಾಮಗಾರಿಗೆ ಹಿನ್ನಡೆಯಾಯಿತು. ಡಿಸೆಂಬರ್ ಅಂತ್ಯದ ವೇಳೆಗೆ ಕಾಮಗಾರಿ ಮುಕ್ತಾಯಗೊಳಿಸಲಾಗುವುದು ಎಂದು ಕಂಪನಿಯ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಹೇಳಿದರು.