ನವಲಗುಂದ ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಗಿನ ಜಾವ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಶೀತಗಾಳಿ ಬೀಸುತ್ತಿದ್ದು ರಾತ್ರಿ ಕನಿಷ್ಠ ತಾಪಮಾನಕ್ಕೆ ಕುಸಿಯುತ್ತಿದೆ. ಮಾಗಿ ಚಳಿಗೆ ಶೀತಗಾಳಿ ಸೇರಿರುವುದರಿಂದ ಜನರು ಹೈರಾಣಾಗುತ್ತಿದ್ದಾರೆ.

ಫಕೃದ್ದೀನ್ ಎಂ.ಎನ್.

ನವಲಗುಂದ:

ತಾಲೂಕಿನಲ್ಲಿ ರಾತ್ರಿ ಹಾಗೂ ಬೆಳಗಿನ ಜಾವ ಆವರಿಸಿಕೊಳ್ಳುತ್ತಿರುವ ಚಳಿ ಜನ, ಜಾನುವಾರು ಹಾಗೂ ಬೆಳೆಗಳಿಗೂ ಸಂಕಷ್ಟ ತಂದೊಡ್ಡಿದೆ.

ಪಟ್ಟಣದಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಗಿನ ಜಾವ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಶೀತಗಾಳಿ ಬೀಸುತ್ತಿದ್ದು ರಾತ್ರಿ ಕನಿಷ್ಠ ತಾಪಮಾನಕ್ಕೆ ಕುಸಿಯುತ್ತಿದೆ. ಮಾಗಿ ಚಳಿಗೆ ಶೀತಗಾಳಿ ಸೇರಿರುವುದರಿಂದ ಜನರು ಹೈರಾಣಾಗುತ್ತಿದ್ದಾರೆ.

ಬಿಸಿಲಿಗೆ ದೇಹ ಹೊಂದಿಕೊಂಡಿರುವುದರಿಂದ ಹಾಗೂ ಒಮ್ಮೆಲೆ ವಾತಾವರಣ ತಂಪಾಗಿರುವುದರಿಂದ ಚಳಿಯ ಅನುಭವ ಹೆಚ್ಚಾಗುತ್ತಿದೆ. ಶೀತಗಾಳಿ ಬೀಸುವಾಗ ಇದು ವಾತಾವರಣದಲ್ಲಾಗುವ ಸಹಜ ಪ್ರಕ್ರಿಯೆ ಎಂದು ವೈದ್ಯರು ಹೇಳುತ್ತಾರೆ.

ಇತ್ತೀಚಿಗಿನ ವರ್ಷದಲ್ಲಿ ಇಷ್ಟೊಂದು ಗಾಢವಾದ ಚಳಿಯಂತೂ ನನ್ನ ಅನುಭವಕ್ಕೆ ಬಂದಿಲ್ಲ. ಮಧ್ಯಾಹ್ನ 12ರ ಹೊತ್ತಿಗೂ ಚಳಿ ಇರುತ್ತದೆ. ಗಡಗಡ ನಡುಗುವ ಚಳಿಯಲ್ಲಿಯೇ ಮುಖಕ್ಕೆ, ತಲೆಗೆ, ಕೈಗೆ ಹಾಗೂ ಕಾಲಿಗೆ ರಕ್ಷಣೆ ಮಾಡಿಕೊಂಡು ನಗರ ಸ್ವಚ್ಛತೆಗೆ ಹೋಗುತ್ತೇನೆ ಎಂದು ಪೌರ ಕಾರ್ಮಿಕ ಮಹಿಳೆಯೊಬ್ಬಳು ತಿಳಿಸಿದ್ದಾರೆ.

ಇನ್ನು ಶೀತದಿಂದ ಬೆಳೆ ರಕ್ಷಿಸಲು ಸಂಜೆಯ ಲಘುವಾಗಿ ಆಗಾಗ ನೀರು ಹಾಯಿಸಬೇಕು ಎಂದು ಬೆಳವಟಗಿ ಕೃಷಿ ಸಂಶೋಧನಾ ಕೇಂದ್ರದ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಎಳೆಯ ಹಣ್ಣಿನ ಗಿಡಗಳನ್ನು ಒಣ ಹುಲ್ಲಿನ ಅಥವಾ ಪಾಲಿಥಿನ್ ಹಾಳೆ, ಗೋಣಿ ಚೀಲಗಳಿಂದ ರಕ್ಷಿಸಬೇಕು. ಹೂವು ಮತ್ತು ಕಾಯಿ ಉದುರುವುದನ್ನು ತಡೆಯಲು 0.25 ಮಿ.ಲೀ ನ್ಯಾಪ್ತಲಿನ್ ಎಸಿಟಿಕ್ ಎಸಿಡ್ (ಪ್ಲಾನೊಫಿಕ್ಸ್) ಮತ್ತು ಶೇ. 1ರಷ್ಟು 19:19:19 (10 ಗ್ರಾಂ. ಪ್ರತಿ ಲೀಟರ್ ನೀರಿಗೆ) ಬೆರಸಿ ಸಿಂಪಡಿಸಬೇಕು ಎಂದು ಹೇಳಿದ್ದಾರೆ.

ಜಾನುವಾರು ಮಾಲಿಕರಿಗೆ ಸಲಹೆ:

ರಾತ್ರಿ ತಾಪಮಾನ ಇಳಿಕೆಯಾಗುತ್ತಿರುವ ಕಾರಣ ಜಾನುವಾರುಗಳನ್ನು ಬೆಚ್ಚಗಿನ ಕೊಟ್ಟಿಗೆಯಲ್ಲಿ ಕಟ್ಟಬೇಕು. ದನಗಳಿಗೆ ಕಾಲುಬಾಯಿ ರೋಗ ಬರುವ ಸಾಧ್ಯತೆ ಇರುವುದರಿಂದ ಚುಚ್ಚುಮದ್ದು ಹಾಕಿಸಬೇಕು. ಒಣ ಮೇವನ್ನು ಬಿಸಿಲಲ್ಲಿ ಒಣಗಿಸಿ ಚೀಲದಲ್ಲಿ ತುಂಬಿಡಬೇಕು. ಬೆಳಗಿನ ವೇಳೆಯಲ್ಲಿ ದನ ಮೇಯಲು ಬಿಡಬಾರದು ಎಂದು ಪಶು ವೈದ್ಯರು ಸಲಹೆ ನೀಡಿದ್ದಾರೆ. ಕೋಳಿ ಸಾಕಾಣಿಕೆದಾರರು ವಿದ್ಯುತ್ ಬಲ್ಬ್‌ ಬಳಸಿ ಉಷ್ಣಾಂಶದ ಸ್ಥಿರತೆ ಕಾಪಾಡಲು ಪ್ರಯತ್ನಿಸಬೇಕು ಎಂದು ಪಶು ಆಸ್ಪತ್ರೆಯ ಮುಖ್ಯಪಶು ವೈದ್ಯಾಧಿಕಾರಿ ಮನೋಹರ ದ್ಯಾಬೇರಿ ತಿಳಿಸಿದ್ದಾರೆ.ಹೃದಯ ಸಮಸ್ಯೆ ಇರುವವರು ಬೆಚ್ಚಗಿನ ಧಿರಿಸು ಧರಿಸುವುದು, ಹೆಚ್ಚು ನೀರು ಕುಡಿಯುವುದು ಒಳ್ಳೆಯದು. ಚಳಿಯೆಂದು ನೀರು ಕಡಿಮೆ ಕುಡಿದರೆ, ತೇವಾಂಶ ಕಡಿಮೆಯಾಗಿ ಚರ್ಮ ಶುಷ್ಕವಾಗಿ, ಬಿರುಕು ಬಿಡುತ್ತದೆ. ಮನುಷ್ಯನ ರಕ್ತನಾಳ ಸಂಕುಚಿತಗೊಳ್ಳುತ್ತವೆ. ಎದೆನೋವು, ಹೃದಯಾಘಾತದ ಸಂಭವ ಹೆಚ್ಚು. ಹೀಗಾಗಿ ಚಳಿಯಲ್ಲಿ ವಾಕಿಂಗ್‌ ಮಾಡಬಾರದು.

ಡಾ. ಮಹೇಶ ಹಿರೇಮಠ, ಖಾಸಗಿ ವೈದ್ಯ

ಪ್ರತಿದಿನ ಬೆಳಗ್ಗೆ 6 ಗಂಟೆಗೆ ವಾಯುವಿಹಾರಕ್ಕೆ ಹೋಗುತ್ತಿದ್ದೆ. ಕಳೆದ ಒಂದು ವಾರದಿಂದ ಪಟ್ಟಣದಲ್ಲಿ ಮೈಕೊರೆಯುವ ಚಳಿ ಹೆಚ್ಚಾಗಿದೆ. ಬೆಳಗಿನ ಜಾವ ಮನೆಯಿಂದ ಹೊರಬರಲು ಭಯವುಂಟಾಗಿದೆ. ಹೆಚ್ಚಿನ ಪ್ರಮಾಣದ ಚಳಿ ಸಹಿಸಲು ಸಾಧ್ಯವಾಗದ ಕಾರಣ ನಾಲ್ಕೈದು ದಿನಗಳಿಂದ ವಾಯುವಿಹಾರ ಬಿಟ್ಟಿದ್ದೇನೆ.

ಬಸವರಾಜ ಬಸೆಗೋನ್ನವರ, ವಾಯುವಿಹಾರಿ