ಯೋಜನೆ ಜಾರಿಯಲ್ಲಿ ವಿಳಂಬ: ಗ್ಯಾರೆಂಟಿ ಸಭೆಯಲ್ಲಿ ಆಕ್ರೋಶ

| Published : Nov 04 2025, 12:30 AM IST

ಯೋಜನೆ ಜಾರಿಯಲ್ಲಿ ವಿಳಂಬ: ಗ್ಯಾರೆಂಟಿ ಸಭೆಯಲ್ಲಿ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಕಾರಟಗಿ ಪಟ್ಟಣದ ವ್ಯಾಪ್ತಿಯಲ್ಲಿ ೫ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತವಾಯಿತು.

ಕಾರಟಗಿ: ಸರ್ಕಾರಿ ಯೋಜನೆಗಳನ್ನು ಸಕಾಲಕ್ಕೆ ಜಾರಿ ತರಲು ಅಧಿಕಾರಿಗಳು ಮತ್ತು ಅಂಗನವಾಡಿ ಕಾರ್ಯಕರ್ತರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಇದೆ ಪರಿಸ್ಥಿತಿ ಮುಂದುವರಿದರೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸರಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಅರಳಿ ನಾಗರಾಜ ಮತ್ತು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಈಶಪ್ಪ ಎಚ್ಚರಿಕೆ ನೀಡಿದರು.

ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಕಾರಟಗಿ ಪಟ್ಟಣದ ವ್ಯಾಪ್ತಿಯಲ್ಲಿ ೫ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕಾರಟಗಿ ಪಟ್ಟಣದ ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಈ ವರ್ಷ ಮಕ್ಕಳ ಸಂಖ್ಯೆ ಕಡಿಮೆ ಇದೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಆಹಾರ ಪೂರೈಕೆಯಾಗುತ್ತಿದ್ದು, ಪೂರೈಕೆ ಮತ್ತು ಮಕ್ಕಳ ಸಂಖ್ಯೆಗೆ ತಾಳೆಯಾಗುತ್ತಿಲ್ಲ. ಹಾಗಿದ್ದರೆ, ಈ ಬಳಕೆಯಾಗದ ಆಹಾರ ಎಲ್ಲಿಗೆ ಹೋಗುತ್ತದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಈಶಪ್ಪ ಪ್ರಶ್ನಿಸಿದರು.

ಸ್ವತಃ ನನ್ನ ವಾರ್ಡಿನಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಕೇವಲ ಐದಾರು ಮಕ್ಕಳಿದ್ದಾರೆ. ಮಾಹಿತಿ ಪ್ರಕಾರ ಈ ಕೇಂದ್ರಕ್ಕೆ ಆಹಾರ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ. ಪರಿಸ್ಥಿತಿ ಹೀಗಿದ್ದ ಮೇಲೆ ಆಹಾರ ಎಲ್ಲಿಗೆ ಹೋಗುತ್ತದೆ ಎನ್ನುವ ವಿಷಯವನ್ನು ಬಹಿರಂಗ ಪಡಿಸಿ ಎಂದು ಸಿಡಿಪಿಐ ಕಚೇರಿ ಮೇಲ್ವಿಚಾರಕಿ ಸುಕನ್ಯಾ ಅವರನ್ನು ಪ್ರಶ್ನೆ ಮಾಡಿದರು.

ಇದಕ್ಕೆ ಧ್ವನಿಗೂಡಿಸಿ ಗ್ಯಾರೆಂಟಿ ಸಮಿತಿ ಉಪಾಧ್ಯಕ್ಷ ಅರಳಿ ನಾಗರಾಜ, ಕಾರಟಗಿ ಪಟ್ಟಣದಲ್ಲಿ ಕಳೆದ ಎರಡ್ಮೂರು ತಿಂಗಳಿಂದೆ ಸುಮಾರು ೫೦೦ ಕುಟುಂಬಗಳ ಬಿಪಿಎಲ್ ಕಾರ್ಡ್‌ಗಳು ರದ್ದಾಗಿ ಎಪಿಎಲ್ ಪಟ್ಟಿಗೆ ಸೇರ್ಪಡೆಯಾಗಿವೆ. ಬಡವರ ಕಾರ್ಡ್‌ಗಳು ಈ ರೀತಿ ರದ್ದಾದರೆ ಅವರಿಗೆ ಪೂರೈಕೆಯಾಗುವ ಪಡಿತರ ಸಹ ಎಲ್ಲಿಗೆ ಹೋಗುತ್ತದೆ ಎಂದು ಆಹಾರ ಇಲಾಖೆ ಅಧಿಕಾರಿಯನ್ನು ತರಾಟೆ ತೆಗೆದುಕೊಂಡರು.

ರದ್ದಾದ ಕಾರ್ಡ್‌ಗಳನ್ನು ಸರಿಪಡಿಸಲು ೧೫ ದಿನಗಳ ಕಾಲಮಿತಿ ಇರುತ್ತದೆ. ಆದರೆ, ಸಂಬಂಧಿಸಿದ ಇಲಾಖೆಯವರು ಸಾರ್ವಜನಿಕರ ಗಮನಕ್ಕೆ ತಾರದೆ ಯೋಜನೆಗಳ ಆಶಯಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಅನುಮಾನ ಇದ್ದು, ಇದು ಹೀಗೆ ಮುಂದುವರಿದರೆ ಕಠಿಣ ಕ್ರಮ ಗ್ಯಾರೆಂಟಿ ಎಂದು ಎಚ್ಚರಿಸಿದರು.

ಆನ್ ಆ್ಯಂಡ್ ಆಫ್

ಕಾರಟಗಿ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇಲ್ಲಿ ಬೀದಿದೀಪಗಳು ಹಗಲಿನಲ್ಲಿಯೇ ಉರಿಯುತ್ತಿವೆ. ಸರಕಾರದ ಹಣ ವೃಥಾ ಪೋಲಾಗುತ್ತಿದೆ. ಇದಕ್ಕೆ ಹೊಣೆಯಾರು ಎನ್ನುವ ಪ್ರಶ್ನೆ ಸಭೆಯಲ್ಲಿ ಉದ್ಭವವಾಯಿತು. ಈ ಕೂಡಲೇ ಜೆಸ್ಕಾಂ ಅಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿಯೊಂದಿಗೆ ಸಮನ್ವಯ ಸಾಧಿಸಿ ಹಗಲಿನಲ್ಲಿ ಬೀದಿ ದೀಪ ಉರಿಯುವುದನ್ನು ಬಂದ್ ಮಾಡಿ. ಮುಖ್ಯವಾಗಿ ಬೀದಿದೀಪಗಳಿಗೆ ಆನ್ ಅ್ಯಂಡ್ ಆಫ್ ಪದ್ಧತಿ ಅಳವಡಿಸಿ ಎಂದು ಸೂಚಿಸಿದರು.

ಉಚಿತ ಬಸ್ ಪ್ರಯಾಣವೊಂದೇ ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ಸೇವೆಯ ಕೆಲಸವಲ್ಲ. ಮುಖ್ಯವಾಗಿ ಬಸ್‌ ನಿಲ್ದಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಾರಟಗಿ ಬಸ್‌ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಅನುಕೂಲಕ್ಕೆ ಮೂಲ ಸೌಕರ್ಯ ಒದಗಿಸಬೇಕು. ಮುಂದಿನ ಸಭೆಯೊಳಗೆ ನಿಲ್ದಾಣದಲ್ಲಿ ಮೂಲ ಸೌಕರ್ಯ ವ್ಯವಸ್ಥೆ ಆಗಬೇಕು ಎಂದು ಸೂಚಿಸಲಾಯಿತು. ಯುವನಿಧಿ ಯೋಜನೆ ಫಲಾನುಭವಿಗಳ ಸಂಖ್ಯೆ ಹೆಚ್ಚಿಸಲು ಅಧಿಕಾರಿಗಳು ಕಾಲೇಜಿಗಳಿಗೆ ತೆರಳಿ ಯುವ ಸಮೂಹವನ್ನು ಜಾಗೃತಿಗೊಳಿಸಿ ಯೋಜನೆ ಲಾಭ ಪಡೆಯುವಂತೆ ಜಾಗೃತಿ ವಹಿಸಿ ಎಂದು ಹೇಳಿದರು.

ಸಭೆಯಲ್ಲಿ ತಾಪಂ ಇಒ ಲಕ್ಷ್ಮೀದೇವಿ, ಪುರಸಭೆ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ, ಉಪಾಧ್ಯಕ್ಷೆ ಗಂಗಮ್ಮ ಚಲವಾದಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಪಟ್ಟಣದ ಅಂಗನವಾಡಿ ಕಾರ್ಯಕರ್ತರು ಇದ್ದರು.