ಸಾರಾಂಶ
ಕನ್ನಡಪ್ರಭ ವಾರ್ತೆ ಗಜೇಂದ್ರಗಡ
ಮಕ್ಕಳಿಗೆ ಸಂವಿಧಾನಬದ್ಧವಾದ ಹಕ್ಕುಗಳನ್ನು ತಲುಪಿಸುವುದು ಪ್ರತಿಯೊಬ್ಬರ ಮೂಲಭೂತ ಕರ್ತವ್ಯವಾದಾಗ ಮಾತ್ರ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಿಸಲು ಸಾಧ್ಯ ಎಂದು ಪ್ರಾಚಾರ್ಯ ಸಂಗಮೇಶ ಬಾಗೂರ ಹೇಳಿದರು.ಪಟ್ಟಣದ ರೋಣ ರಸ್ತೆಯ ಜಗದ್ಗುರು ತೋಂಟದಾರ್ಯ ಪಿಯು ಕಾಲೇಜಿನಲ್ಲಿ ಬುಧವಾರ ನಡೆದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.ಬಾಲ್ಯದಲ್ಲಿ ಕಡ್ಡಾಯ ಶಿಕ್ಷಣ ಜತೆಗೆ ಮಗುವಿನ ಹಕ್ಕುಗಳನ್ನು ಒದಗಿಸುವುದು ಸಮುದಾಯದ ಕರ್ತವ್ಯವಾಗಿದೆ. ಸರ್ಕಾರವು ಬಾಲ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಅವುಗಳ ಬಗ್ಗೆ ಮತ್ತಷ್ಟು ಜಾಗೃತಿ ಅವಶ್ಯಕವಾಗಿದೆ ಎಂದು ಹೇಳಿದರು.ಪ್ರಸ್ತುತ ದಿನಮಾನದಲ್ಲಿ ಕ್ಷಣಾರ್ಧದಲ್ಲಿ ಒಂದು ಸುದ್ದಿಯು ದೇಶ ಹಾಗೂ ವಿದೇಶಗಳಿಗೆ ತಲುಪುವ ವೇಗವನ್ನು ಹೊಂದಿದೆ. ಆದರೆ ಕೆಲವು ಸುದ್ದಿಗಳು ಹಾಗೂ ಮಾಹಿತಿಯು ನಿರೀಕ್ಷಿತ ಪ್ರಮಾಣದಲ್ಲಿ ಪ್ರಸಾರವಾಗುವುದಿಲ್ಲ. ಅದಕ್ಕೆ ನಾನಾ ಕಾರಣಗಳಿದ್ದು, ಅದರಲ್ಲಿ ಸಮುದಾಯದ ಭಾಗಿತ್ವದ ನಿರ್ಲಕ್ಷ್ಯವೂ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಹೀಗಾಗಿ ನಮ್ಮ ಸುತ್ತಲಿನ ಪ್ರದೇಶಗಳಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ಸಂಖ್ಯೆ ಕ್ಷೀಣವಾಗುವ ಲಕ್ಷಣಗಳು ಕಾಣುತ್ತಿಲ್ಲ. ಇಂತಹ ಸಾಮಾಜಿಕ ಪಿಡುಗಿಗೆ ಸಮುದಾಯದ ಸಹಭಾಗಿತ್ವವಾದರೆ ಮಾತ್ರ ಬಾಲಕಾರ್ಮಿಕರನ್ನು ರಕ್ಷಿಸಲು ಸಾಧ್ಯವಿದೆ ಎಂದರು.
ಈ ವೇಳೆ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ನಾನು ವಾಸಿಸುವ ಸುತ್ತ ಮುತ್ತಲಿನ ಪ್ರದೇಶ ಹಾಗೂ ನಾನು ಕೆಲಸ ಮಾಡುವ ಸ್ಥಳದಲ್ಲಿ ಯಾವುದೇ ಬಾಲ ಕಾರ್ಮಿಕರು ಕಂಡು ಬಂದಲ್ಲಿ ನೇಮಿಸಿಕೊಂಡ ಮಾಲೀಕರು ಹಾಗೂ ಪೋಷಕರಿಗೆ ತಿಳಿವಳಿಕೆ ಹೇಳಿ ಮಗುವನ್ನು ಶಾಲೆಗೆ ಸೇರಿಸುತ್ತೇನೆ. ಬಾಲಕಾರ್ಮಿಕ ಹಾಗೂ ಕಿಶೋರಕಾರ್ಮಿಕ ತಯಾರಿಸಿಲ್ಪಟ್ಟ ಯಾವುದೇ ವಸ್ತುಗಳನ್ನು ಉಪಯೋಗಿಸುವುದಿಲ್ಲ ಮತ್ತು ಸೇವೆಯನ್ನು ಪಡೆಯುವುದಿಲ್ಲ ಎಂದು ಪ್ರತಿಜ್ಞೆ ಸ್ವೀಕರಿಸಿದರು.ಉಪನ್ಯಾಸಕರಾದ ಹುತ್ತಪ್ಪ ಮಾರನಬಾರಸಿ, ಶ್ರುತಿ ನಡಕಟ್ಟಿನ, ಮಾಧುರಿ ನಾಡಗೇರ, ಆನಂದ ಜೂಚನಿ, ಸಿದ್ದರಾಮೇಶ ಕರಬಾಶೆಟ್ಟರ, ಫಾತಿಮಾ ವಣಗೇರಿ ಇದ್ದರು.