ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಾಗತಿಕ ಮಟ್ಟದ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಜಾರಿಗೆ ತಂದ ಹಲವು ಯೋಜನೆ ಹಾಗೂ ಅವರ ಆಶಯಗಳ ಪ್ರತಿ ಮನೆಗೂ ತಲುಪಿಸುವ ಜವಾಬ್ದಾರಿಯ ಕಾರ್ಯಕರ್ತರು ಹೊರಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಹೇಳಿದರು.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಪದಾಧಿಕಾರಿಗಳ ವಿಶೇಷ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕೇಂದ್ರ ಸರ್ಕಾರದ ಸಾಧನೆಗಳನ್ನು ಜಿಲ್ಲೆಯ ಪ್ರತಿಯೊಂದು ಬೂತ್‍ಗಳಲ್ಲಿನ ಮತದಾರರಿಗೆ ತಿಳಿಸುವುದರ ಮೂಲಕ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ದರಾಗಬೇಕಿದೆ. ಜಿಲ್ಲೆಯ ಎಲ್ಲಾ ಮಂಡಲಗಳಲ್ಲಿ ಸಭೆ ಮಾಡುವುದರ ಮೂಲಕ ಬೂತ್ ಮಟ್ಟದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡುವ ಕೆಲಸವಾಗಬೇಕು. ಇದರಿಂದ ಪ್ರತಿ ಬೂತ್ ಮತ್ತು ಪ್ರಕೋಷ್ಟಗಳಿದಗೆ ಶಕ್ತಿ ತುಂಬುವ ಕೆಲಸ ಮಾಡಿದಂತಾಗುತ್ತದೆ ಎಂದರು.

ಪಕ್ಷವನ್ನು ಸಂಘಟಿಸುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತರ ಮೇಲಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳು ಬಂದು ಹೋದ ನಂತರ ವಿಧಾನಸಭೆ ಚುನಾವಣೆಗಳು ಎದುರಾಗುತ್ತವೆ. ಇನ್ನೆರೆಡು ವರ್ಷ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಕೆಲಸಕ್ಕೆ ಎಲ್ಲರೂ ಮುಂದಾಬೇಕು. ಜೆಡಿಎಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಕೇಂದ್ರದಲ್ಲಿ ಒಟ್ಟಾಗಿ ಅಧಿಕಾರ ನಡೆಸುತ್ತಿವೆ. ಹಾಗಾಗಿ ರಾಜ್ಯದಲ್ಲಿಯೂ ಸಮ್ಮಿಶ್ರ ಸರ್ಕಾರದ ಸಾಧ್ಯತೆಗಳು ನಿಚ್ಚಳವಾಗಿವೆ. ಕಾರ್ಯಕರ್ತರು ಗಂಭೀರ ಪ್ರಯತ್ನಗಳ ಮಾಡಬೇಕೆಂದು ಕುಮಾರಸ್ವಾಮಿ ಹೇಳಿದರು.

ದಾವಣಗೆರೆ ವಿಭಾಗ ಸಹಾ ಪ್ರಭಾರಿಗಳಾದ ಎ.ಮುರಳಿ ಮಾತನಾಡಿ, ಪಕ್ಷ ಸಂಘಟನಾತ್ಮಕ ವಿಷಯಗಳಲ್ಲಿ ಸದಾ ಎಚ್ಚರದಿಂದಿರುತ್ತದೆ. ಪ್ರತಿ ತಿಂಗಳು ಸಭೆ ಮಾಡುವುದರ ಮೂಲಕ ಪಕ್ಷವನ್ನು ಜಿಲ್ಲೆಯಲ್ಲಿ ಬಲಗೊಳಿಸಲಾಗುತ್ತಿದೆ. ಪ್ರಧಾನ ಮಂತ್ರಿಯವರು ಮನಕೀ ಬಾತ್‍ ಕಾರ್ಯಕ್ರಮ ಪ್ರತಿಯೊಬ್ಬರೂ ಆಲಿಸಬೇಕು. ಇದ್ದಲ್ಲದೆ ಪ್ರತಿಯೊಂದು ಮಂಡಲ ಮತ್ತು ಬೂತ್‍ನಲ್ಲಿಯೂ ಮನ್ ಕೀಬಾತ್ ಕಾರ್ಯಕ್ರಮವನ್ನು ನೋಡುವಂತೆ ಆಗಬೇಕಿದೆ ಎಂದರು.


ವಿಶ್ವ ಪರಿಸರ ದಿನಾಚರಣೆ, ಅಂತರಾಷ್ಟ್ರೀಯ ಯೋಗ ದಿನಾಚರಣೆ, ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರ 12 ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಜನ ಕಲ್ಯಾಣ ಯೋಜನೆಯನ್ನು ಆಚರಿಸಬೇಕಿದೆ. ಪ್ರಗತಿ ಪಥ ಯಾತ್ರೆಯನ್ನು ಮಾಡಬೇಕಿದೆ. ಇದರೊಂದಿಗೆ ದೇಶದ ಸುರಕ್ಷತೆಗಾಗಿ ಎಸ್ ಐಆರ್ ಅವಶ್ಯಕತೆ ಇದೆ. ಕೇಂದ್ರ ಸರ್ಕಾರದ ಸಾಧನೆ, ಜನಪರ ಕಾರ್ಯಕ್ರಮಗಳ ಬಗ್ಗೆ ಪ್ರಗತಿ ಪರ ವೈದ್ಯರು, ಸಾಹಿತಿಗಳು, ವಕೀಲರು, ರೈತರು, ಕಾರ್ಮಿಕರು, ಪತ್ರಕರ್ತರು, ಕಲಾವಿದರ ಜೊತೆ ಮೋದಿ ಸರ್ಕಾರ 12 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸಂವಾದ ಮಾಡಬೇಕಿದೆ ಎಂದು ಮುರಳಿ ತಿಳಿಸಿದರು.

ಜಿಲ್ಲಾಸ್ಥರದ ವಿವಿಧ ಜವಾಬ್ದಾರಿಯುತ ಪ್ರಮುಖರಿಗೆ ಇದೇಸಂದರ್ಭದಲ್ಲಿ ನಿಯುಕ್ತಿ ಪತ್ರ ವಿತರಣೆ ಮಾಡ ಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾಧುರಿ ಗಿರೀಶ್, ಡಾ ಪಿ.ಎಂ ಮಂಜುನಾಥ, ವೆಂಕಟೇಶ್ ಯಾದವ್, ಜಿ.ಹೆಚ್ ಮೋಹನ್‍ಕುಮಾರ್, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿಯಾದ ಭಾರ್ಗವಿ ದ್ರಾವಿಡ ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು, ಮಂಡಲದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.