ಕನ್ನಡಪ್ರಭ ವಾರ್ತೆ ಬೈಲಹೊಂಗಲ

ತಾಲೂಕಿನ ಯರಡಾಲ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಬೈಲವಾಡ ಗ್ರಾಮ ಪಂಚಾಯತ ಅಧಿಕಾರಿಗಳು ನಿರ್ಲಕ್ಷ್ಯದಿಂದಾಗಿ ಇಲ್ಲಿನ ಬಡಾವಣೆಗಳ ನಾಗರಿಕರು ನಿತ್ಯ ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ. ಚನ್ನಮ್ಮನ ಕಿತ್ತೂರು ಮತಕ್ಷೇತ್ರಕ್ಕೆ ಒಳಪಡುವ ಗ್ರಾಮದಲ್ಲಿ ಜೆಜೆಎಂ ಎಂಬ ಮನೆ, ಮನೆಗೆ ನೀರು ಯೋಜನೆಯು ಸಂಪೂರ್ಣ ನೆಲ ಕಚ್ಚಿದೆ. ಗ್ರಾಮದಲ್ಲಿ ಬೆರಳೆಣಿಕೆಯಷ್ಟು ಬೋರ್‌ವೆಲ್‌ಗಳಿದ್ದು, ಸಮರ್ಪಕವಾಗಿ ಜನರಿಗೆ ನೀರು ಸರಬರಾಜು ಮಾಡದ ಕಾರಣ ಕುಡಿಯುವ ನೀರನ್ನು ಎರಡು ಕಿ.ಮೀ ದೂರದಿಂದ ತೆಗೆದುಕೊಂಡು ಬರುವ ಪರಿಸ್ಥಿತಿ ಎದುರಾಗಿದೆ. ಸುಮಾರು 500 ಕ್ಕೂ ಹೆಚ್ಚಿನ ಮನೆಗಳಿದ್ದು, 5000ಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಇಲ್ಲಿನ ಶಾಸಕರ ಆಸಕ್ತಿ ಹಾಗೂ ಪ್ರಯತ್ನದಿಂದ ಹಲವಾರು ಅಭಿವೃದ್ದಿ ಕಾಮಗಾರಿಗಳಾಗಿವೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ದಿನ ಬೆಳಗಾದರೆ ಬಡಾವಣೆಗಳ ನಾಗರಿಕರು ಕೊಡ ಹಿಡಿದು ಮಹಿಳೆಯರು, ಮಕ್ಕಳು, ವಯೋವೃದ್ದರು, ನೀರು ಅರಸುತ್ತಾ ಅಲೆದಾಡುವುದೇ ಕಾಯಕವಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಭವಣೆ ಕುರಿತು ಈಗಾಗಲೇ ಬೈಲವಾಡ ಪಿಡಿಒಗೆ ಸಮಸ್ಯಗಳ ಬಗ್ಗೆ ಮನವರಿಕೆ ಮಾಡಿದ್ದರೂ ಸಹ ಯಾವದೇ ಕ್ರಮ ಕೈಗೊಳ್ಳದೇ ಉದಾಸೀನತೆ ತೋರುತಿದ್ದಾರೆಂದು ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ ನೀರು ಸರಬರಾಜು ಮಾಡುವ ವಾಟರಮನ್‌ಗೆ ಹೇಳಿದರೂ ಕ್ಯಾರೇ ಎನ್ನುತ್ತಿಲ್ಲ. ಸುಮಾರು 3-4 ತಿಂಗಳಿಂದ ಕುಡಿಯುವ ನೀರಿಗಾಗಿ ಹಲವಾರು ಸಮಸ್ಯೆಗಳನ್ನು ಇಲ್ಲಿನ ನಾಗರಿಕರು ಅನುಭವಿಸುತ್ತಿದ್ದು, ಶಕ್ತಿನಗರ, ಹರಿಜನ ಕೇರಿ, ಗೌಡರ ಕಾಲೋನಿ, ಹೊಸ್ ಪ್ಲಾಟ್ ಮುಂತಾದೆಡೆ ಅವೈಜ್ಞಾನಿಕವಾಗಿ ಜೆಜೆಎಂ ಕಾಮಗಾರಿ ಪೂರೈಸಿದ್ದರಿಂದ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಹೀಗಾಗಿ ಪಂಚಾಯತಿ ಅಧಿಕಾರಿಗಳು ಕುಡಿಯುವ ನೀರು ಪೂರೈಸಲು ಶೀಘ್ರ ಕ್ರಮ ಕೈಗೊಳ್ಳಬೇಕು. ಶಕ್ತಿನಗರದಲ್ಲಿನ ಬಸ್ ಶೆಲ್ಟರ್‌ಗೆ ಸೂಕ್ತ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಗಟಾರಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಇಲ್ಲಿನ ನಾಗರಿಕರು ಒತ್ತಾಯಿಸಿದ್ದಾರೆ.

------------

ಕೋಟ್‌.....


ಬೈಲವಾಡ ಗ್ರಾಪಂ ವ್ಯಾಪ್ತಿಯ ಯರಡಾಲ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರಿಗೆ ನಾಗರಿಕರು ಸಮಸ್ಯ ಎದುರಿಸುತ್ತಿರುವದು ನನ್ನ ಗಮನಕ್ಕೆ ಬಂದಿದೆ. ರಸ್ತೆ ರಿಪೇರಿ ಮಾಡುತ್ತಿರುವುದರಿಂದ ಅಭಿವೃದ್ಧಿ ಹಾಗೂ ಪರಿಹಾರ ವಿಳಂಬವಾಗಲಿದ್ದು, ನಾಗರಿಕರು ಸಹಕರಿಸಬೇಕು.

ಡಿ.ಬಿ.ರಾಯನಾಯ್ಕರ, ಪಿಡಿಒ ಬೈಲವಾಡಪಂಚಾಯತ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಗ್ರಾಮ ಸಮಸ್ಯೆಗಳಿಂದ ಬಳಲುತ್ತಿದೆ. ಕುಡಿಯುವ ನೀರನ್ನು ಸಂಗ್ರಹಿಸಲು ಮುಖ್ಯ ರಸ್ತೆ ಮೂಲಕ ಸಂಚರಿಸುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಶಾಶ್ವತವಾಗಿ ಸೌಲಭ್ಯ ಕೊಡಿ ಎಂದು ಈಗಾಗಲೇ ತಾಪಂ ಹಾಗೂ ಗ್ರಾಪಂ ಅಧಿಕಾರಿಗಳ ಗಮನಕ್ಕೆ ಈ ಸಮಸ್ಯ ತಂದರೂ ಇಲ್ಲಿಯವರೆಗೆ ಯಾವದೇ ಪರಿಹಾರ ದೊರೆತಿಲ್ಲ.

- ಈರಯ್ಯ ಈರಯ್ಯನವರ, ನಿವೃತ್ತ ಯೋಧ ಯರಡಾಲ