ಡಾ.ಸಿ.ಎಂ. ಜೋಶಿ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಬಾಗಲಕೋಟೆ ಜಿಲ್ಲೆಯ ಮಕ್ಕಳ ಮೇಲಿನ 2024ರ ಅಪರಾಧಗಳ ಅಂಕಿ-ಅಂಶಗಳ ಪ್ರಕಾರ ಒಟ್ಟು 144 ಪ್ರಕರಣಗಳಲ್ಲಿ 61 ಪ್ರಕರಣಗಳು ಐಪಿಸಿ/ಬಿಎನ್ಎಸ್ ಅಡಿಯಲ್ಲಿ ದಾಖಲಾಗಿದ್ದರೆ, 83 ಪ್ರಕರಣಗಳು ವಿಶೇಷ ಮತ್ತು ಸ್ಥಳೀಯ ಕಾನೂನುಗಳ (ಖಐಐ) ಅಡಿಯಲ್ಲಿ ದಾಖಲಾಗಿವೆ. ಈ ಎರಡು ವಿಭಾಗಗಳನ್ನು ಒಟ್ಟಿಗೆ ನೋಡಿದಾಗ, ಬಾಗಲಕೋಟೆಯಲ್ಲಿ ಮಕ್ಕಳ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳು ಮೂಡಿದೆ.

ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯುರೋ ದಾಖಲೆಗಳನ್ನು ಆಧರಿಸಿ ಮೈಸೂರು ವಿವಿಯ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ (ಸಿಎಸ್ಎಸ್ಐ) ಕೇಂದ್ರದ ಸಹಪ್ರಾಧ್ಯಾಪಕ ಡಾ.ಡಿ.ಸಿ.ನಂಜುಂಡ ಮತ್ತು ಅವರ ತಂಡ ಅಂಕಿಅಂಶಗಳನ್ನು ವಿಶ್ಲೇಷಣೆ ನಡೆಸಿದಾಗ ಈ ಕಳವಳಕಾರಿ ಅಂಶ ಬಹಿರಂಗವಾಗಿದೆ.

ಐಪಿಸಿ/ಬಿಎನ್ಎಸ್ ಅಡಿಯಲ್ಲಿ ದಾಖಲಾಗಿರುವ 61 ಪ್ರಕರಣಗಳಲ್ಲಿ ಅತ್ಯಂತ ದೊಡ್ಡ ಪಾಲು ಮಕ್ಕಳ ಅಪಹರಣ ಮತ್ತು ಭಿಕ್ಷಾಟನೆಗಾಗಿ ಮಕ್ಕಳ ಕಳ್ಳತನಕ್ಕೆ ಸೇರಿದ್ದು, 54 ಪ್ರಕರಣಗಳು ಈ ಒಂದೇ ವಿಭಾಗದಲ್ಲಿ ದಾಖಲಾಗಿವೆ. ಉಳಿದಂತೆ 3 ಪ್ರಕರಣಗಳು ಉದ್ದೇಶ ಪೂರ್ವಕವಾಗಿ ಮಕ್ಕಳ ತ್ಯಜಿಸಿರುವುದು ಮತ್ತು ನಿರ್ಲಕ್ಷ್ಯಕ್ಕೆ ಸಂಬಂಧಿಸಿದ್ದು. 3 ಪ್ರಕರಣಗಳು ಇತರೆ ಐಪಿಸಿ ಅಪರಾಧಗಳಾಗಿವೆ. ಈ ಬಾರಿ ಎನ್‌ಸಿಆರ್‌ಬಿ ಬಹುತೇಕ ಪ್ರಕರಣಗಳನ್ನು ಅಪಹರಣ ಎಂಬ ಒಂದು ವರ್ಗದಲ್ಲಿ ಮಾತ್ರ ಸೀಮಿತಗೊಂಡಿದೆ.


ವಿಶೇಷ ಮತ್ತು ಸ್ಥಳೀಯ ಕಾನೂನುಗಳ ಅಡಿಯಲ್ಲಿ 83 ಪ್ರಕರಣಗಳ ಚಿತ್ರಣವನ್ನು ನೋಡಿದಾಗ ಮತ್ತೊಂದು ವಾಸ್ತವಿಕತೆ ಗೋಚರಿಸುತ್ತದೆ. ಈ 83 ಪ್ರಕರಣಗಳಲ್ಲಿ 5 ಪ್ರಕರಣಗಳು ಮಾತ್ರ ಪೋಕ್ಸೊ ಕಾಯ್ದೆಡಿಯಲ್ಲಿ ದಾಖಲಾಗಿದ್ದು, ಅದೂ ಗಂಭೀರ ಸ್ವರೂಪದ (ಕಲಂ 4 & 6) ಪ್ರಕರಣಗಳಾಗಿವೆ. ಉಳಿದ ಎಲ್ಲಾ ಪ್ರಮುಖ ಕಾಗಳಾದ ಜುವೆನೈಲ್ ಜಸ್ಟಿಸ್ ಕಾಯ್ದೆ, ಇಮ್ಮೋರಲ್ ಟ್ರಾಫಿಕ್ (ಪ್ರಿವೆನ್ಷನ್) ಕಾಯ್ದೆ, ಬಾಲಕಾರ್ಮಿಕ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಸೈಬರ್ ಕ್ರೈಂ ಕಾಯ್ದೆ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಶೂನ್ಯ ಪ್ರಕರಣಗಳು ದಾಖಲಾಗಿವೆ.

ಆದರೆ ಅತ್ಯಂತ ದೊಡ್ಡ ಪ್ರಶ್ನೆ ಹುಟ್ಟಿಸುವುದು ಇತರೆ ವಿಶೇಷ ಮತ್ತು ಸ್ಥಳೀಯ ಕಾನೂನುಗಳ ಅಪರಾಧಗಳು ಎಂಬ ವಿಭಾಗ. ಈ ವಿಭಾಗದಲ್ಲಿ ಒಟ್ಟು 83 ಪ್ರಕರಣಗಳ ಪೈಕಿ 78 ಪ್ರಕರಣಗಳು ಸೇರಿವೆ. ಈ ವರ್ಗದಲ್ಲಿ ಯಾವ ರೀತಿಯ ಅಪರಾಧಗಳು ಸೇರಿವೆ ಎಂಬ ಸ್ಪಷ್ಟತೆ ಇಲ್ಲದಿರುವುದು, ಅಂಕಿ-ಅಂಶಗಳ ಪಾರದರ್ಶಕತೆಯ ಕೊರತೆ ತೋರಿಸುತ್ತದೆ. ಇದರಿಂದ ಜಿಲ್ಲೆಯಲ್ಲಿ ಮಕ್ಕಳ ಮೇಲಿನ ನಿಜವಾದ ಅಪರಾಧಗಳ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ.

ಈ ಎರಡು ಅಂಶಗಳನ್ನು ಒಟ್ಟಿಗೆ ನೋಡಿದಾಗ, ಬಾಗಲಕೋಟೆಯ ಕಥೆ ಎರಡು ಮುಖಗಳನ್ನು ತೋರಿಸುತ್ತದೆ. ಒಂದು ಮಕ್ಕಳ ಅಪಹರಣದಂತಹ ಪ್ರಕರಣಗಳು ಹೆಚ್ಚಾಗಿ ಕಾಣಿಸುತ್ತಿದ್ದರೆ, ಮತ್ತೊಂದು ಲೈಂಗಿಕ ಅಪರಾಧಗಳು, ಬಾಲ್ಯ ವಿವಾಹ, ಮಾನವ ಕಳ್ಳಸಾಗಣೆ, ಸೈಬರ್ ಶೋಷಣೆ ಇತ್ಯಾದಿ ಗಂಭೀರ ಸಮಸ್ಯೆಗಳು ಶೂನ್ಯ ಸಂಖ್ಯೆಗಳ ಹಿಂದೆ ಮರೆಮಾಚಲ್ಪಟ್ಟಿವೆ. ಉದಾಹರಣೆಗೆ, ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿಯಲ್ಲಿ 2024ರಲ್ಲಿ ಯಾವುದೇ ಪ್ರಕರಣಗಳಿಲ್ಲದಿದ್ದರೂ, 54 ಅಪಹರಣ ಪ್ರಕರಣಗಳಲ್ಲಿ ಬಹುಪಾಲು ಬಾಲ್ಯವಿವಾಹ ಅಥವಾ ಎಲೋಪ್ಮೆಂಟ್ ಪ್ರಕರಣಗಳಾಗಿರುವ ಸಾಧ್ಯತೆ ಇದೆ. ಇದೇ ರೀತಿ, ಇಮ್ಮೋರಲ್ ಟ್ರಾಫಿಕ್ ಕಾಯ್ದೆಯಡಿಯಲ್ಲಿ ಪ್ರಕರಣಗಳಿಲ್ಲದಿದ್ದರೂ, ಪ್ರೊಕ್ಯುರೇಶನ್ ಪ್ರಕರಣ ಮಾನವ ಸಾಗಣೆಯ ಪ್ರಾರಂಭದ ಸೂಚನೆಯಾಗಿರಬಹುದೆಂದು ಡಾ.ಡಿ.ಸಿ.ನಂಜುಂಡ ಹೇಳುತ್ತಾರೆ.

ಅತ್ಯಾಚಾರ, ಅತ್ಯಾಚಾರ ಯತ್ನ, ಲೈಂಗಿಕ ಕಿರುಕುಳ, ಸ್ಟಾಕಿಂಗ್, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ, ಮರ್ಯಾದೆ ಹತ್ಯೆ, ಆತ್ಮಹತ್ಯೆಗೆ ಪ್ರೇರಣೆ, ಗಂಭೀರ ಗಾಯ ಇತ್ಯಾದಿ ಎಲ್ಲ ಪ್ರಮುಖ ಅಪರಾಧ ವಿಭಾಗಗಳಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ದಾಖಲಾಗಿವೆ. ಆದರೆ ಇದು ನಿಜವಾದ ಸುರಕ್ಷತೆಯ ಸೂಚಕವಲ್ಲ. ಬದಲಾಗಿ ಸಮಾಜದಲ್ಲಿನ ಮೌನ, ಹೆಣ್ಣು ಮಕ್ಕಳ ಗೌರವದ ಹೆಸರಿನಲ್ಲಿ ಪ್ರಕರಣ ಮುಚ್ಚಿಹಾಕುವ ಪ್ರವೃತ್ತಿ ಮತ್ತು ಪೊಲೀಸ್ ದಾಖಲಾತಿಗಳಲ್ಲಿನ ಸಮಸ್ಯೆಗಳ ಪ್ರತಿಬಿಂಬವಾಗಿರುವ ಸಾಧ್ಯತೆ ಇದೆ. ಈ ಕುರಿತು ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಬೇಕು.

- ಡಾ.ಡಿ.ಸಿ.ನಂಜುಂಡ, ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ (ಸಿಎಸ್ಎಸ್ಐ) ಕೇಂದ್ರದ ಸಹಪ್ರಾಧ್ಯಾಪಕ, ಮೈಸೂರು ವಿಶ್ವ ವಿದ್ಯಾಲಯ