ಕನ್ನಡಪ್ರಭ ವಾರ್ತೆ ಅಥಣಿ

ಆರೋಗ್ಯವಂತ ಸಮಾಜ ಕಟ್ಟಲು ಮತ್ತು ಅಮೂಲ್ಯವಾದ ಆರೋಗ್ಯ ಸಂಪತ್ತನ್ನು ಕಾಪಾಡುವಲ್ಲಿ ವೈದ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವೈದ್ಯ ವೃತ್ತಿ ಕೇವಲ ಒಂದು ಉದ್ಯೋಗವಲ್ಲ, ಅದು ಸಮಾಜ ಸೇವೆಯಾಗಿದೆ ಎಂದು ಸ್ತ್ರೀರೋಗ ತಜ್ಞ ಡಾ.ಸೋಮಶೇಖರ ಪಾಟೀಲ ಹೇಳಿದರು.

ಇಲ್ಲಿನ ಕೆಎಂಸಿ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಪುರಾತನ ಕಾಲದಿಂದಲೂ ವೈದ್ಯರ ಸೇವೆ ದೇವರ ಸಮಾನ ಎಂದು ಕರೆಯಲಾಗಿದೆ. ಅವರ ಶ್ರಮ ಮತ್ತು ನಿಸ್ವಾರ್ಥ ಸೇವೆಗೆ ಎಂದಿಗೂ ಬೆಲೆ ಕಟ್ಟಲಾಗದು, ರೋಗಿಗಳ ನೋವನ್ನ ತಮ್ಮ ನೋವು ಎಂದು ಭಾವಿಸಿ ತಮ್ಮ ನಿದ್ದೆ, ಹಸಿವು, ಸುಖವನ್ನ ತ್ಯಾಗ ಮಾಡಿ ನಿರಂತರ ರೋಗಿಗಳ ಸೇವೆಯಲ್ಲಿರುತ್ತಾರೆ. ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಮಗು ಎರಡೂ ಜೀವಗಳು ಮುಖ್ಯವಾಗಿರುತ್ತದೆ. ಸಂಕಷ್ಟದಲ್ಲಿರುವ ಜೀವಗಳನ್ನು ರಕ್ಷಣೆ ಮಾಡುವ ಜೊತೆಗೆ ರೋಗಿಗಳ ಮತ್ತು ಅವರ ಕುಟುಂಬದಲ್ಲಿ ಆಶಾಕಿರಣ ಮೂಡಿಸುವ ಕೆಲಸವನ್ನು ವೈದ್ಯರು ಮಾಡುತ್ತಾರೆ ಎಂದರು.

ರೈತನ ಮಗನಾಗಿ ಡಾ.ಸಂಜಯ ಕುರೆನ್ನವರ ನನ್ನ ಶಿಷ್ಯನಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ನಮ್ಮೆಲ್ಲರಿಗೆ ಹೆಮ್ಮೆ. ಅಥಣಿಯಲ್ಲಿ ಕೆಎಂಸಿ ಆಸ್ಪತ್ರೆ ಆರಂಭಿಸುವ ಮೂಲಕ ತಮ್ಮ ವೈದ್ಯಕೀಯ ಸೇವೆ ಆರಂಭಿಸಿರುವುದು ನನಗೆ ಸಂತಸ ತಂದಿದೆ. ಈ ಆಸ್ಪತ್ರೆಯ ಮೂಲಕ ಜನರಿಗೆ ಉತ್ತಮ ಸೇವೆ ದೊರಕಲಿ ಎಂದು ಶುಭ ಹಾರೈಸಿದರು.

ಆಸ್ಪತ್ರೆ ಉದ್ಘಾಟಿಸಿದ ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ, ವೈದ್ಯರಿಲ್ಲದ ಸಮಾಜವನ್ನು ನಾವು ಕಲ್ಪಿಸಿಕೊಳ್ಳುವುದು ಅಸಾಧ್ಯ. ಅವರ ಸೇವೆ ಇಲ್ಲದೆ, ನಮ್ಮ ಆರೋಗ್ಯ ರಕ್ಷಣೆ ಮತ್ತು ಉತ್ತಮ ಜೀವನ ಸಾಧ್ಯವಿಲ್ಲ. ಡಾ.ವಿಜಯ್ ಕುರೆನ್ನವರ ಹಾಗೂ ಡಾ.ಸಂಜಯ ಕುರೆನ್ನವರ ವೈದ್ಯಕೀಯ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆ ಮತ್ತು ಆರೋಗ್ಯ ಸೇವೆ ಜನ ಮೆಚ್ಚುಗೆಗೆ ಪಾತ್ರವಾಗಿದೆ. ನಮ್ಮ ತಂದೆ ಲಕ್ಷ್ಮಣ ಸಂಗಪ್ಪ ಸವದಿ ಅವರ ಹೆಸರಿನಲ್ಲಿ ಫೌಂಡೇಶನ್ ಆರಂಭಿಸಿದ್ದೇವೆ. ಈ ಫೌಂಡೇಶನ್ ಮೂಲಕ ಅನೇಕ ಬಡ ರೋಗಿಗಳಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಕಾರ್ಯ ಮಾಡಲಾಗುತ್ತಿದೆ. ಇಂದು ಅಥಣಿಯಲ್ಲಿ ಆರಂಭಗೊಂಡಿರುವ ಕೆಎಂಸಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೂ ಇಂತಹ ಸೇವೆ ದೊರಕಲಿ. ಈ ಆಸ್ಪತ್ರೆಯ ವೈದ್ಯರಿಂದ ಗ್ರಾಮೀಣ ಪ್ರದೇಶದ ಬಡ ರೋಗಿಗಳಿಗೆ ಗುಣಮಟ್ಟದ ಸೇವೆಗಳು ದೊರಕಲಿ ಎಂದು ಹಾರೈಸಿದರು.


ದಿವ್ಯ ಸಾನಿಧ್ಯ ವಹಿಸಿದ್ದ ನದಿ ಇಂಗಳಗಾವದ ಸಿದ್ದಲಿಂಗ ಸ್ವಾಮೀಜಿ, ಶೆಟ್ಟರ ಮಠದ ಮರುಳು ಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಅಭಿಯಂತರ ರಾಜಶೇಖರ ಟೋಪಗಿ, ಕಲೀಲ ಜಾಲಿಹಾಳರನ್ನು ಸನ್ಮಾನಿಸಲಾಯಿತು. ಈ ವೇಳೆ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ, ನಿರ್ದೇಶಕ ಜಿ.ಎಂ.ತೇವರಮನಿ, ಶಿವರುದ್ರ ಗೂಳಪ್ಪನವರ, ಸುರೇಶ್ ಮಾಯಣ್ಣವರ, ಧರೆಪ್ಪ ಠಕ್ಕನವರ, ರಾಜೀವ ನಾಡಗೌಡ, ಎಸ್.ಆರ್.ಮಾಳಿ, ಮುರಿಗೆಪ್ಪ ಕುರೆನ್ನವರ, ಶೋಭಾ ಕುರೆನ್ನವರ, ಡಾ.ರಶ್ಮಿ ಕುರೆನ್ನವರ, ಡಾ.ಪ್ರೀತಿ ಕುರೆನ್ನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಎಸ್.ಆರ್.ಮಾಳಿ ಸ್ವಾಗತಿಸಿದರು. ಡಾ.ಸಂಜಯ ಕುರೆನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯ ಹುದ್ದಾರ ನಿರೂಪಿಸಿದರು. ಡಾ.ವಿಜಯ ಕುರೆನ್ನವರ ವಂದಿಸಿದರು.