ಬಿಜೆಪಿ ಕರ್ನಾಟಕ ಪ್ರಶಿಕ್ಷಣ ಮಹಾಭಿಯಾನ ಚಿಕ್ಕಮಗಳೂರು-ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಉದ್ಗಾಟನಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತರೀಕೆರೆ

ಭಾರತೀಯ ಜನತಾ ಪಕ್ಷ ಎನ್ನುವುದು ಕೇವಲ ಒಂದು ರಾಜಕೀಯ ಪಕ್ಷವಲ್ಲ. ಅದು ಒಂದು ಸೈದ್ದಾಂತಿಕ ಆಂದೋಲನ. ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಹರಡಿದೆ. ಭಾರತೀಯ ಚಿಂತನೆಗಳು ಜಗತ್ತಿನ ಕಲ್ಯಾಣ ಬಯಸುತ್ತದೆ ಎಂದು ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.

ಶುಕ್ರವಾರ ಸಮೀಪದ ಲಿಂಗದಹಳ್ಳಿ ಬಳಿ ಪ್ರಕೃತಿ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ನಡೆದ 2 ದಿನಗಳ ಬಿಜೆಪಿ ಕರ್ನಾಟಕ ಪ್ರಶಿಕ್ಷಣ ಮಹಾಭಿಯಾನ ಚಿಕ್ಕಮಗಳೂರು-ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಬಿಜೆಪಿ ಜಗತ್ತಿನ ಅತ್ಯಂತ ದೊಡ್ಡ ಪಕ್ಷ. 17 ಕೋಟಿ ಸದಸ್ಯರನ್ನು ಹೊಂದಿರುವ ಈ ಪಕ್ಷ 1850ಕ್ಕೂ ಹೆಚ್ಚು ಶಾಸಕರು, ಸಂಸದರನ್ನು ಹೊಂದಿದೆ. ಬಿಜೆಪಿ ಸೈದ್ದಾಂತಿಕ ಆಂದೋಲನ ಹಂತ ಹಂತವಾಗಿ ಬೆಳೆದಂತೆ ನಾಯಕತ್ವವೂ ಬೆಳೆದಿದೆ. ಈ ಬಗ್ಗೆ ಹೆಚ್ಚು ಅರಿವು ಮೂಡಿಸಲು ಈ ಪ್ರಶಿಕ್ಷಣದ ಮಹಾಭಿಯಾನ. ಸೈದ್ದಾಂತಿಕ ಪ್ರಕ್ರಿಯೆಯೇ ಈ ಕಾರ್ಯಕ್ರಮದ ಉದ್ದೇಶ.


ಅಧಿಕಾರ ಒಂದು ಸಾಧನ ಅಷ್ಟೇ, ಅದೇ ಪ್ರಮುಖ ಅಲ್ಲ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಭಾರತ ವಿಶ್ವಗುರು ವಾಗಬೇಕು ಎನ್ನುವುದು ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಸೈದ್ದಾಂತಿಕ ಪುನರುತ್ಥಾನ ಆಗಬೇಕು. ಸರ್ವೇ ಜನೋ ಸುಖಿನೋ ಭವಂತು ಎಂಬುದು ನಮ್ಮ ಉದ್ದೇಶ, ಅರ್ಥಿಕ ಬದಲಾವಣೆ ಸರ್ವವ್ಯಾಪಿಯಾಗಬೇಕು. ಪ್ರತಿಯೊಬ್ಬರೂ ಸ್ವಾವಲಂಬಿ, ಅತ್ಮನಿರ್ಬರರಾಗಬೇಕು. ಕಟ್ಟ ಕಡೆ ವ್ಯಕ್ತಿಗೂ ಶಕ್ತಿ ತುಂಬಬೇಕು. ರಾಷ್ಟ್ರೀಯತೆ ಎನ್ನುವುದು ತಾಯಿ ಮಕ್ಕಳ ಸಂಬಂಧ ಇದ್ದಂತೆ, ರಾಷ್ಟ್ರ ಮೊದಲು ಎನ್ನುವದು ನಮ್ಮ ಸಿದ್ದಾಂತ. ಸೈದ್ದಾಂತಿಕ ಬದ್ಧತೆಯಿಂದ ಜನನಾಯಕತ್ವ ಬೆಳೆಸಬೇಕು. ಅದು ಜನಪರ ಹೋರಾಟದ ಮೂಲಕ ಬೆಳೆಯಬೇಕು ಎಂದರು.

ಪ್ರಶಿಕ್ಷಣ ವರ್ಗದಲ್ಲಿ ಖಾಲಿ ಪಾತ್ರೆಯಂತೆ ಕುಳಿತು ವಿಚಾರಗಳನ್ನು ಮನನ ಮಾಡಿಕೊಳ್ಳಬೇಕು ಎಂದ ಅವರು ಈಗಿನ ಸರ್ಕಾರದ ಪ್ರಚಾರ ಪರ ಇದೆ. ಗ್ಯಾರಂಟಿಗಳ ಜಾಹಿರಾತುಗಳ ಭರಾಟೆಯಲ್ಲಿ ಇದೆ. ಜನರ ಬದುಕು ಶೂನ್ಯವಾಗಿದೆ. ರೈತರ ಆತ್ಮಹತ್ಯೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಇದೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ 9 ಮಂಡಲದಲ್ಲಿ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ನಡೆದಿದೆ. ಭಾರತೀಯ ಜನತಾ ಪಕ್ಷ ಇತರ ಪಕ್ಷಗಳಿಗಿಂತ ವಿಭಿನ್ನ. ರಾಷ್ಟ್ರೀಯತೆ ಎತ್ತಿ ಹಿಡಿಯುತ್ತದೆ. ಆನಂತರವೇ ಪಕ್ಷ, ಪ್ರಶಿಕ್ಷಣ ವರ್ಗದಲ್ಲಿ 2 ದಿನಗಳು ಏನನ್ನು ಕಲಿತುಕೊಳ್ಳುತ್ತೇವೆಯೋ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಶಿಕ್ಷಣ ವರ್ಗದಲ್ಲಿ ಬಹಳಷ್ಟು ವಿಚಾರಗಳು ಚರ್ಚೆಗೆ ಬರುತ್ತದೆ. ಪಕ್ಷದ ಸಾಮಾಜಿಕ ಉದ್ದೇಶ ಮತ್ತು ವ್ಯಕ್ತಿತ್ವ ಹೇಗೆ ರೂಪಿಸಕೊಳ್ಳಬೇಕು ಇತ್ಯಾದಿಗಳು ಖುಷಿಯಿಂದ ಪ್ರಶಿಕ್ಷ ಣ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಿಕ್ಷಣ ವರ್ಗದಲ್ಲಿ ವಿದ್ಯಾರ್ಥಿಗಳ ರೀತಿ ಕುಳಿತುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪ್ರಮುಖ್ ಅಶೋಕ್ ಮೂರ್ತಿ ಮಾತನಾಡಿ ಸಂಘಟನೆಗೆ ಶಕ್ತಿ ತುಂಬಬೇಕು. ಶಿಬಿರ ಯಶಸ್ವಿಯಾಗಲಿ ಎಂದರು.ಜಿಲ್ಲೆಯಲ್ಲಿ ಬಿಜೆಪಿ ಬೆಳೆದು ಬಂದ ಹಾದಿ ಚಿತ್ರ ಪ್ರದರ್ಶನವನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಉದ್ಘಾಟನೆ ನೆರವೇರಿಸಿದರು.

ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, ಮಾಜಿ ಶಾಸಕರಾದ ಡಿ.ಎಸ್.ಸುರೇಶ್, ಎಸ್.ಎಂ.ನಾಗರಾಜ್, ಬೆಳ್ಳಿ ಪ್ರಕಾಶ್, ಮುಖಂಡರಾದ ಕಲ್ಮರುಡಪ್ಪ, ಪ್ರೇಂಕುಮಾರ್, ಕೆ.ಆರ್.ದೃವಕುಮಾರ್, ಕೆ.ಆರ್.ಆನಂದಪ್ಪ, ಟಿ.ಎಲ್.ರಮೇಶ್, ಟಿ.ಎಂ.ಬೋಜರಾಜ್, ರಾಜೇಶ್ವರಿ ರಾಜಶೇಖರ್, ಚೈತ್ರಶ್ರೀ, ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

-

22ಕೆಟಿಆರ್.ಕೆ.1ಃ ತರೀಕೆರೆ ಸಮೀಪದ ಲಿಂಗದಹಳ್ಳಿ ಬಳಿ ಪ್ರಕೃತಿ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಬಿಜೆಪಿ ಕರ್ನಾಟಕ ಪ್ರಶಿಕ್ಷಣ ಮಹಾಭಿಯಾನ ಚಿಕ್ಕಮಗಳೂರು- ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯ ಕೇಶವಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.