ಕನ್ನಡಪ್ರಭ ವಾರ್ತೆ ಹುಕ್ಕೇರಿ

ನನೆಗುದಿಗೆ ಬಿದ್ದಿರುವ ಹಾಗೂ ಹೊಸ ಯೋಜನೆಗಳನ್ನು ಸಮರ್ಪಕ ಅನುಷ್ಠಾನಗೊಳಿಸುವ ಮೂಲಕ ಹುಕ್ಕೇರಿ ತಾಲೂಕಿನ ಸಮಗ್ರ ನೀರಾವರಿಗೆ ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಶುಕ್ರವಾರ ಕರೆ ನೀಡಿದ್ದ ಹುಕ್ಕೇರಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಇದರೊಂದಿಗೆ ಹುಕ್ಕೇರಿ ಬಂದ್ ಪ್ರತಿಭಟನೆಗೆ ಸೀಮಿತವಾದಂತಾಯಿತು.

ಹುಕ್ಕೇರಿ ತಾಲೂಕಿನ ಸಮಗ್ರ ನೀರಾವರಿ ಆಗ್ರಹಿಸಿ ರೈತರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಮೂರನೇ ದಿನ ಪೂರ್ಣಗೊಂಡಿದ್ದು, ಶನಿವಾರವೂ ಮುಂದುವರಿಯಲಿದೆ. ಇದರೊಂದಿಗೆ ಸಂಕೇಶ್ವರ ಮತ್ತು ಯಮಕನಮರಡಿಗೂ ಪ್ರತಿಭಟನೆಯನ್ನು ವಿಸ್ತರಿಸಲು ಹೋರಾಟದ ಮುಂಚೂಣಿ ನಾಯಕರು ಘೋಷಿಸಿದ್ದಾರೆ. ಇದೇ ವೇಳೆ ಶನಿವಾರ ಸ್ವಯಂ ಪ್ರೇರಿತವಾಗಿ ಸಂಕೇಶ್ವರ ಮತ್ತು ಯಮಕನಮರಡಿ ಬಂದ್ ಮಾಡುವಂತೆ ರೈತ ಮುಖಂಡರು ಮನವಿ ಮಾಡಿದ್ದಾರೆ.

ಬಂದ್‌ಗೆ ವಿವಿಧ ಮಠಾಧೀಶರು, ಅನೇಕ ಸಂಘಟನೆಗಳು ನೈತಿಕ ಬೆಂಬಲ ವ್ಯಕ್ತಪಡಿಸಿದವು. ಧರಣಿ ನಿರತ ಸ್ಥಳ ಕೋರ್ಟ್‌ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆದರೂ, ವಾಹನ ಸಂಚಾರ, ವಾಣಿಜ್ಯ ವಹಿವಾಟು ಎಂದಿನಂತೆ ನಡೆದವು. ಕೆಲವೆಡೆ ಬೆಳಗ್ಗೆ ಅಂಗಡಿ ಮುಂಗಟ್ಟುಗಳು ಮುಚ್ಚಿದ ಸ್ಥಿತಿಯಲ್ಲಿ ಕಂಡುಬಂದರೂ ಮಧ್ಯಾಹ್ನದ ಬಳಿಕ ವಹಿವಾಟು ಪ್ರಾರಂಭಗೊಂಡಿತು. ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಯ ವಾಹನಗಳ ಸಂಚಾರ, ವಿವಿಧ ವಾಣಿಜ್ಯ ವಹಿವಾಟುಗಳ ಸೇವೆಯಲ್ಲಿ ವ್ಯತ್ಯಯವಾಗಲಿಲ್ಲ. ಆದರೆ, ಪಟ್ಟಣದ ಬಸವೇಶ್ವರ ಸರ್ಕಲ್, ನಾಕಾ, ಹೊಸ ಬಸ್ ನಿಲ್ದಾಣ, ಪೇಟೆ ಮಾರ್ಗಗಳಲ್ಲಿ ಅಂಗಡಿ ಮುಂಗಟ್ಟುಗಳು, ಹೊಟೇಲ್‌ಗಳು ಬಂದ್ ಆಗಿದ್ದವು. ವಾಹನ ಸವಾರರು ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸಿದರು. ಪಟ್ಟಣ ವ್ಯಾಪ್ತಿಯ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿತ್ತು.

ಸದಾ ವಾಹನ ಮತ್ತು ಜನ ದಟ್ಟಣೆಯಿಂದ ಕೂಡಿರುತ್ತಿದ್ದ ಬಸ್ ನಿಲ್ದಾಣದ ಪ್ರದೇಶದಲ್ಲಿ ಜನ ಸಂಚಾರ ವಿರಳವಾಗಿತ್ತು. ಕೆಲ ಆಟೋ ಚಾಲಕರು ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ, ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ ದೃಶ್ಯ ಕಂಡುಬಂತು. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ವಿರಳವಾಗಿದ್ದರು. ಬಂದ್ ಕರೆ ಹಿನ್ನೆಲೆಯಲ್ಲಿ ಆಯಕಟ್ಟಿನ ಮತ್ತು ಪ್ರಮುಖ ಸ್ಥಳಗಳಲ್ಲಿ ಭದ್ರೆತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.


ಕೊಟಬಾಗಿ, ದಡ್ಡಿ, ಕೋಚರಿ, ಕುರಣಿ ಸೇರಿದಂತೆ ತಾಲೂಕಿನ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಯೋಜನೆಯ ಕೊನೆಯ ಹಂತದವರೆಗೂ ನೀರು ತಲುಪುವಂತೆ ಕ್ರಮ ವಹಿಸಬೇಕು. ಮಲ್ಲಿಕಾರ್ಜುನ ಮತ್ತು ಶಿಪ್ಪೂರ ಏತ ನೀರಾವರಿಗೆ ಅಗತ್ಯ ಅನುದಾನ ಬಿಡುಗಡೆಗೊಳಿಸಬೇಕು. ಹೊಸ ಯೋಜನೆಗಳಾದ ಅಡವಿಸಿದ್ದೇಶ್ವರ, ಶಂಕರಲಿಂಗ ಏತ ನೀರಾವರಿಗಳನ್ನು ಕೂಡಲೇ ಪ್ರಾರಂಭಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಘಟಪ್ರಭಾ ಬಲದಂತೆ ಮತ್ತು ಎಡದಂತೆ ಕಾಲುವೆಗಳನ್ನು ದುರಸ್ತಿಗೊಳಿಸಬೇಕು. ತಾಲೂಕಿನ ಅಮ್ಮಣಗಿ, ಕಣಗಲಾ ಸೇರಿದಂತೆ 60 ಗ್ರಾಮಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ನಿಗದಿತ ಕಾಲಮೀತಿಯಲ್ಲಿ ಕೆರೆ ತುಂಬಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಹಿಡಕಲ್ ಜಲಾಶಯದ ನೀರನ್ನು ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ತೆಗೆದುಕೊಂಡು ಹೋಗುವ ಮೂಲಕ ರಾಜ್ಯದ ನೀರಾವರಿ ಸಚಿವರು ಈ ಭಾಗದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಜಲಾಶಯ ನಿರ್ಮಾಣಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಜನರ ಸಂಕಷ್ಟಕ್ಕೆ ಮೊದಲು ಸ್ಪಂದಿಸಬೇಕು. ಇಲ್ಲವಾದರೆ ಧಾರವಾಡಕ್ಕೆ ನೀರು ತೆಗೆದುಕೊಂಡು ಹೋಗಲು ಹಾಕಿರುವ ಪೈಪ್‌ಲೈನ್‌ಗಳನ್ನು ಕಿತ್ತು ಹಾಕಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.

ಸತ್ಯಾಗ್ರಹ ನೇತೃತ್ವ ವಹಿಸಿದ ಸಂಘಟನೆ ಕಾರ್ಯಾಧ್ಯಕ್ಷ ಶಶಿಕಾಂತ ಗುರೂಜಿ, ರಾಜ್ಯಾಧ್ಯಕ್ಷ ಚೂನಪ್ಪಾ ಪೂಜೇರಿ ಮಾತನಾಡಿ, ಪ್ರತಿಭಟನೆ ಬೆಂಬಲಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಆದರೆ, ರಾಜಕೀಯ ಹೊರತುಪಡಿಸಿ ನೀರಾವರಿಗಾಗಿ ಮಾತ್ರ ಪಾಲ್ಗೊಳ್ಳಬೇಕು ಎಂದರು.

--------

ಬಾಕ್ಸ್‌

ಪ್ರತಿಭಟನಾಕಾರರ ಆಕ್ರೋಶ

ಧರಣಿ ನಿರತ ಸ್ಥಳಕ್ಕೆ ತಾಲೂಕಿನ ವಿವಿಧ ಭಾಗಗಳಿಂದ ರೈತರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಆಗಮಿಸಿ ಪ್ರತಿಭಟನೆ ನಡೆಸಿದ್ದು, ನೀರಾವರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರೊಂದಿಗೆ ಅನ್ನದಾತರ ಅಳಲು ಆಲಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಹುಕ್ಕೇರಿ ತಾಲೂಕಿನಲ್ಲಿಯೇ ಎರಡು ಜಲಾಶಯ, ಮೂರು ನದಿಗಳು ಹರಿದಿದ್ದರೂ ಇಲ್ಲಿನ ಬಹುತೇಕ ಪ್ರದೇಶದ ರೈತರು ನೀರಾವರಿಯಿಂದ ವಂಚಿತರಾಗಿದ್ದಾರೆ. ತಾಲೂಕಿನ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಿಡಕಲ್ ಜಲಾಶಯದಿಂದ ವಿಜಯಪುರ, ಬಾಗಲಕೋಟೆವರೆಗೂ ನೀರು ಸರಬರಾಜಾಗುತ್ತಿದೆ. ಆದರೆ, ತಾಲೂಕಿನ ಕೆಲ ಭಾಗದ ರೈತರ ಜಮೀನುಗಳಿಗೆ ನೀರಿನ ಸೌಲಭ್ಯ ಕಲ್ಪಿಸುವಲ್ಲಿ ಪ್ರತಿನಿಧಿಗಳು ಇಚ್ಛಾಶಕ್ತಿ ತೋರುತ್ತಿಲ್ಲ. ಜೊತೆಗೆ ಈ ಸಮಸ್ಯೆ ಪರಿಹರಿಸಬೇಕಾದ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.