ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು

ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದ್ದು ಗುರುವಾರ ತಡರಾತ್ರಿ ವಿವಿಧ ಕಡೆ ಸುರಿದ ಭರ್ಜರಿ ಮಳೆಯಿಂದ ಕೆರೆ ಕಟ್ಟೆಗಳಿಗೆ ಜೀವ ಜಲ ಹರಿದು ಬಂದಿದ್ದು ಬರುಡಾಗಿದ್ದ ಕೃಷಿ ಭೂಮಿಗಳಿಗೆ ಜೀವ ಕಳೆ ತಂದಿದೆ.

ಪಟ್ಟಣ ಸೇರಿ ರಾಯಪುರ, ಬಿಜಿಕೆರೆ, ಕೊಂಡ್ಲಹಳ್ಳಿ, ಕೋನಸಾಗರ, ನೇರ್ಲಹಳ್ಳಿ, ಮರ್ಲಹಳ್ಳಿ, ಚಿಕ್ಕೋಬನಹಳ್ಳಿ, ಮುತ್ತಿಗಾರಹಳ್ಳಿ, ತುಮಕೂರ್ಲಹಳ್ಳಿ, ರಾಯಪುರ, ಸೂಲೇನಹಳ್ಳಿ ಗುಂಡ್ಲೂರು, ಯರೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.

ಚೆಕ್ ಡ್ಯಾಂ ಮತ್ತು ಕಟ್ಟೆಗಳಿಗೆ ನೀರು ಬಂದಿದೆ. ತಾಲೂಕಿನ ನೇರ್ಲಹಳ್ಳಿಯಲ್ಲಿ ಪುಟ್ಟಮ್ಮ ಎಂಬುವರಿಗೆ ಸೇರಿದ 2 ಎಕರೆ ಮೆಕ್ಕೆಜೋಳ ಬೆಳೆಗೆ ನೀರು ನುಗ್ಗಿದ್ದು ಬಾರಿ ಬಿರುಗಾಳಿಗೆ 10ಕ್ಕೂ ಹೆಚ್ಚಿನ ತೆಂಗಿನ ಮರಗಳು ನೆಲಕ್ಕುರುಳಿವೆ. ಬಿಜಿಕೆರೆ ಗ್ರಾಮದಲ್ಲಿ ಗೊಂಚಿಗಾರ ತೋಟಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿ ನಾಲ್ಕು ಎಕರೆ ಮೆಕ್ಕೆಜೋಳ ನೀರಿನಿಂದ ಆವೃತವಾಗಿದೆ. ದಲಿತ ಕಾಲೋನಿಯಲ್ಲಿ ರಾಜಕಾಲುವೆ ಇಲ್ಲದ ಪರಿಣಾಮ ಚರಂಡಿ ನೀರು ಸಮೀಪದ ಮನೆಗಳಿಗೆ ನುಗ್ಗಿದೆ. ಅಲ್ಲದೆ ರೈತ ಸಣ್ಣ ಬಸಪ್ಪ ಎಂಬುವರ ಕಣದಲ್ಲಿ ಮೊಳಕಾಲುದ್ದ ನೀರು ನಿಂತು ಜಾನುವಾರುಗಳ ಮೇವು ಸಂಪೂರ್ಣವಾಗಿ ಹಾಳಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಚಿಕ್ಕೇರಹಳ್ಳಿ ರೈತ ವೆಂಕಟೇಶ್ ಎಂಬುವರಿಗೆ ಸೇರಿದ 2 ಎಕರೆ ಬಾಳೆ ತೋಟ ನೆಲಕ್ಕುರುಳಿ ಲಕ್ಷಾಂತರ ರು. ನಷ್ಟ ಸಂಬಂವಿಸಿದೆ.

ಮುತ್ತಿಗಾರಹಳ್ಳಿ ಗೋಕಟ್ಟೆ ತುಂಬಿ ಹರಿಯುತ್ತಿದ್ದು ಮುತ್ತಿಗಾರಹಳ್ಳಿ ಮತ್ತು ಬಿಜಿಕೆರೆ ಸಂಪರ್ಕದ ಮುಖ್ಯ ರಸ್ತೆಯಲ್ಲಿ ಹರಿಯುತ್ತಿದ್ದ ನೀರಿನಿಂದ ದ್ವಿಚಕ್ರ ವಾಹನ ಸವಾರರು ಕ್ಷಣ ಕಾಲ ಹೈರಾಣಾಗುವಂತಾಗಿತ್ತು. ಇನ್ನು ಬಿಜಿಕೆರೆ ದೊಡ್ಡ ಹಳ್ಳಕ್ಕೆ ಜೀವ ಕಳೆ ಬಂದಿದೆ. ಬರುಡಾಗಿದ್ದ ಹೊಸ ಕೆರೆಗೆ ನೀರು ಹರಿದು ಬಂದಿದೆ.


ತಡರಾತ್ರಿ ಸುರಿದ ಮಳೆಯಿಂದ ಕೃಷಿ ಭೂಮಿಗಳಿಗೆ ಜೀವ ಕಳೆ ಬಂದಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದೆ. ಕಸಬಾ ಹೋಬಳಿಗೆ ಹೋಲಿಕೆ ಮಾಡಿಕೊಂಡಲ್ಲಿ ದೇವಸಮುದ್ರ ಹೋಬಳಿಯಲ್ಲಿ ಮಳೆ ಕೊರತೆ ಬಾಧಿಸುತ್ತಿದ್ದು ತಾಲೂಕಿನ ಮೊಳಕಾಲ್ಮೂರು 24.0 ಮಿಮೀ, ರಾಯಪುರ 26.0 ಮಿಮೀ ಬಿಜಿಕೆರೆ 55.4 ಮಿಮೀ, ರಾಂಪುರ 2.1 ಮಿಮೀ ಮಳೆಯಾಗಿದೆ.