ಸಂಘದ ವಿಚಾರ ಮನೆ ಮನೆಗೆ ತಲುಪಿಸಿ

| Published : Oct 14 2025, 01:00 AM IST

ಸಾರಾಂಶ

ತಿಪಟೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷಾಚರಣೆಯ ಪಥಸಂಚಲನ ನಡೆಯಿತು.

ಕನ್ನಡಪ್ರಭವಾರ್ತೆ ತಿಪಟೂರು

ತಿಪಟೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷಾಚರಣೆಯ ಪಥಸಂಚಲನ ನಡೆಯಿತು.

ಈ ವೇಳೆ ತಿಪಟೂರು ಜಿಲ್ಲಾ ಕಾರ್ಯವಾಹ ರವೀಂದ್ರ ತಗ್ಗಿನಮನೆ ಮಾತನಾಡಿ, ಪ್ರತಿಯೊಂದು ಹಿಂದೂವಿನ ಮನೆಗೂ ಆರ್‌ಎಸ್‌ಎಸ್ ವಿಚಾರ ತಲುಪುವಂತೆ ಆಗಬೇಕಿದ್ದು ಈ ನಿಟ್ಟಿನಲ್ಲಿ ಸ್ವಯಂಸೇವಕರು ಕಾರ್ಯಪ್ರವೃತ್ತರಾಗಬೇಕು. ಸಮಾಜ ಯಾವುದೇ ತುರ್ತು ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಉಪಸ್ಥಿತಿಯನ್ನು ಅಪೇಕ್ಷಿಸುತ್ತಿದ್ದಾರೆ. ಸಂಘವು ನಿಸ್ವಾರ್ಥ ಭಾವನೆಯಿಂದ ಮುಂಚಿತವಾಗಿಯೇ ಕಾರ್ಯಪ್ರವೃತ್ತರಾಗಿರುತ್ತದೆ. ಮಂಡಲ ಮಟ್ಟದಲ್ಲಿಯೇ ಸಂಘದ ಕಾರ್ಯಕರ್ತರಿಗೆ ಸಂಸ್ಕಾರ, ಸೇವಾ ಮನೋಭಾ, ಶಿಸ್ತು ರೂಢಿಸಿಕೊಳ್ಳಲು ದೈನಂದಿನ ಶಾಖೆಯು ಕಾರಣವಾಗುತ್ತಿದೆ. ಸಂಘದ ಕಾರ್ಯಕರ್ತರು ತಾವು ಇರುವಂತಹ ಕಡೆ ಒಳ್ಳೆಯ ವಾತಾವರಣವನ್ನು ನಿರ್ಮಿಸುತ್ತಾರೆ. ದೇಶಕ್ಕೆ ಆಪತ್ತು ಬಂದಾಗ ಸೇವಕ ಸೇವೆಗೆ ನಿಂತು ಸಮಾಜದ ಸಮಸ್ಯೆಯನ್ನು ತನ್ನ ಕರ್ತವ್ಯವೆಂದು ಭಾವಿಸುತ್ತಾನೆ. ಆದರೆ ಯಾವುದೇ ಗೌರವ ಸನ್ಮಾನಗಳಿಗೆ ಅಪೇಕ್ಷೆ ಮಾಡುವುದಿಲ್ಲ. ಆರ್‌ಎಸ್‌ಎಸ್ ನೂರು ವರ್ಷದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದು ಎಂದಿಗೂ ವಿಚಲಿತವಾಗದೆ ತನ್ನ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ ಮುಂದೆಯೂ ಮಾಡುತ್ತಾ ಹೋಗುತ್ತದೆ. ಸಂಘದ ವರ್ತಮಾನ ಹಾಗೂ ಭವಿಷ್ಯದ ದೃಷ್ಟಿಯಿಂದ ಪಂಚ ಪರಿವರ್ತನೆ ಸಂಕಲ್ಪವಿಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ ಈ ನಿಟ್ಟಿನಲ್ಲಿ ವೈಯಕ್ತಿಕ ಸಂಕಲ್ಪ ಅತ್ಯಗತ್ಯ ಎಂದರು.

ಗುರುಕುಲಾನಂದಶ್ರಮದ ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ನಾವೆಲ್ಲ ಒಂದೇ ಎಂಬ ಭಾವನೆಯಿಂದ ಆರ್‌ಎಸ್‌ಎಸ್ ನೂರು ವರ್ಷಗಳಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಜಗತ್ತಿನಲ್ಲಿ ಯಾವುದೇ ಮಾನವ ಸಂಘಟನೆ ನೂರು ವರ್ಷಗಳ ಕಾಲ ನಿರಂತರವಾಗಿ ಯಾವ ಉದ್ದೇಶವನ್ನಿಟ್ಟುಕೊಂಡು ಪ್ರಾರಂಭವಾಗಿತ್ತೋ ಅದೇ ಉದ್ದೇಶದಲ್ಲಿ ಮುನ್ನಡೆಯುತ್ತಿರುವ ಆರ್‌ಎಸ್‌ಎಸ್ ಸಂಘಟನೆ ವಿಶೇಷವಾಗಿದೆ ಎಂದರು. ಪಥಸಂಚಲನ ಅಂಗವಾಗಿ ನಗರದಲ್ಲಿ ಕೇಸರಿ ಬಾವುಟಗಳು ಹಾಗೂ ರಾಜಬೀದಿಯಲ್ಲಿ ಬಣ್ಣ ಬಣ್ಣದ ಅಲಂಕಾರದ ರಂಗೋಲಿಗಳನ್ನು ಹಾಕಲಾಗಿತ್ತು. ನಗರದ ಕೋಡಿ ಸರ್ಕಲ್, ದೊಡ್ಡಪೇಟೆ, ಕನ್ನಿಕಾ ಪರಮೇಶ್ವರಿ ದೇವಸ್ಥಾನ ರಸ್ತೆ, ಅರಳಿಕಟ್ಟೆ ವೃತ್ತ, ಬಿ.ಎಚ್ ರಸ್ತೆಯ ಮೂಲಕ ಗುರುಕುಲನಂದಾಶ್ರಮದ ಮಠದವರೆಗೆ ಪಥಸಂಚನ ನಡೆಯಿತು. ಪಥ ಸಂಚಲನದ ಉದ್ದಕ್ಕೂ ಸಾರ್ವಜನಿಕರು ಪುಷ್ಪಾರ್ಚನೆ ಹಾಗೂ ಘೋಷಣೆಗಳನ್ನು ಕೂಗಿದರು. ೫೦೦ಕ್ಕೂ ಹೆಚ್ಚು ಗಣವೇಷಧಾರಿಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದರು.