20 ಸಾವಿರ ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಗ್ರಾಮ ಲೆಕ್ಕಧಿಕಾರಿ

| Published : Mar 08 2024, 01:59 AM IST / Updated: Mar 08 2024, 03:48 PM IST

ನಾಗರಾಜ್ | Kannada Prabha
20 ಸಾವಿರ ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಗ್ರಾಮ ಲೆಕ್ಕಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಜಮೀನಿನ ಖಾತೆ ಮಾಡಿಕೊಡುವ ಸಂಬಂಧ ರೈತರಿಂದ 20 ಸಾವಿರ ರು. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿ ಗುರುವಾರ ಮಧ್ಯಾಹ್ನ ತಾಲೂಕಿನ ಹೊಣಕೆರೆ ನಾಡಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಜಮೀನಿನ ಖಾತೆ ಮಾಡಿಕೊಡುವ ಸಂಬಂಧ ರೈತರಿಂದ 20 ಸಾವಿರ ರು. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿ ಗುರುವಾರ ಮಧ್ಯಾಹ್ನ ತಾಲೂಕಿನ ಹೊಣಕೆರೆ ನಾಡಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತಾಲೂಕಿನ ಶ್ರೀರಘುರಾಮಪುರ ಮತ್ತು ಹೊಣಕೆರೆ ವೃತ್ತದ ನಾಗರಾಜ್ ರೈತನಿಂದ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದವರು. ಹೊಣಕೆರೆ ಗ್ರಾಮದ ಶಿವಣ್ಣ ಎಂಬ ರೈತನಿಂದ ಜಮೀನಿನ ಪೌತಿ ಖಾತೆ ಮಾಡಿಕೊಡಲು 20 ಸಾವಿರಕ್ಕೆ ಬೇಡಿಕೆಯಿಟ್ಟು ಮುಂಗಡವಾಗಿ 7 ಸಾವಿರ ಲಂಚ ಪಡೆದಿದ್ದರು. ಉಳಿದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಿಂದ ರೈತ ಶಿವಣ್ಣ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಗುರುವಾರ ಮಧ್ಯಾಹ್ನ ಹೊಣಕೆರೆ ನಾಡಕಚೇರಿಯಲ್ಲಿ ರೈತ ಶಿವಣ್ಣನಿಂದ ಗ್ರಾಮ ಲೆಕ್ಕಾಧಿಕಾರಿ ನಾಗರಾಜ್ ಲಂಚದ ಬಾಕಿ ಹಣ ಪಡೆಯುತ್ತಿದ್ದರು. ಇದೇ ವೇಳೆಗೆ ದಿಢೀರ್ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ನಾಗರಾಜ್‌ನನ್ನು ವಶಕ್ಕೆ ಪಡೆದು ಮಂಡ್ಯಕ್ಕೆ ಕರೆದೊಯ್ದಿದ್ದಾರೆಂದು ಹೇಳಲಾಗಿದೆ.

ಜಿಲ್ಲಾ ಲೋಕಾಯುಕ್ತ ಎಸ್ಪಿ ಸುರೇಶ್‌ಬಾಬು ಮತ್ತು ಡಿವೈಎಸ್‌ಪಿ ಸುನಿಲ್‌ಕುಮಾರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಬ್ಯಾಟರಾಯಗೌಡ, ಸಿಬ್ಬಂದಿ ಶರತ್, ಶಂಕರ್ ನವೀನ್ ಹಾಗೂ ಮಾನಸ ಕರ್ತವ್ಯ ನಿರ್ವಹಿಸಿದ್ದರು.

ನಾಗರಾಜ್ ವಿರುದ್ಧ ಆರೋಪ:

ತಾಲೂಕಿನ ದೊಂದೆಮಾದಹಳ್ಳಿಯ ನಾಗರಾಜು ಕಳೆದ 15 ವರ್ಷಗಳಿಂದ ಹೊಣಕೆರೆ ಹೋಬಳಿಯ ಶ್ರೀರಘುರಾಮಪುರ ವೃತ್ತದ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಹೆಚ್ಚುವರಿಯಾಗಿ ಹೊಣಕೆರೆ ವೃತ್ತದ ಪ್ರಭಾರ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಆದಾಯಕ್ಕೂ ಮೀರಿ ಅಪಾರ ಪ್ರಮಾಣದ ಆಸ್ತಿ ಸಂಪಾದಿಸಿದ್ದಾರೆ. ಜಮೀನು ಖಾತೆ ಸೇರಿದಂತೆ ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗೂ ಸಹ ರೈತರಿಂದ ಕನಿಷ್ಠ 5 ರಿಂದ 50 ಸಾವಿರ ರು. ವರೆಗೂ ಲಚಕ್ಕೆ ಬೇಡಿಕೆ ಇಡುತ್ತಿದ್ದರೆಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.

ಕೇಳಿದಷ್ಟು ಲಂಚದ ಹಣ ಕೊಡದಿದ್ದರೆ ಅಂತಹ ರೈತರ ಖಾತೆಗೆ ಸಂಬಂಧಿಸಿದ ಕಡತಗಳನ್ನು ತನ್ನ ಬಳಿಯೇ ಇಟ್ಟುಕೊಂಡು ಮೇಲಾಧಿಕಾರಿಗಳು ನಿಮ್ಮ ಕಡತಗಳಿಗೆ ಸಹಿ ಹಾಕುತ್ತಿಲ್ಲವೆಂಬ ಕಾರಣ ಕೊಟ್ಟು ಅನಾವಶ್ಯಕವಾಗಿ ರೈತರಿಗೆ ತೊಂದರೆ ಕೊಡುತ್ತಿದ್ದರು. ಇಂತಹ ಲಂಚಕೋರ ಗ್ರಾಮಲೆಕ್ಕಿಗನ ವಿರುದ್ಧ ಅಧಿಕಾರಿಗಳು ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕೆಂದು ಸ್ಥಳೀಯ ಜನರು ಒತ್ತಾಯಿಸಿದ್ದಾರೆ.