ಸಾರಾಂಶ
ಮುಳಗುಂದ: ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಗುರುವಾರ ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ₹೧೮.೭೪ ಲಕ್ಷ ಉಳಿತಾಯ ಬಜೆಟ್‌ನ್ನು ಮಂಡಿಸಿದರು.
ಒಟ್ಟು ಜಮಾ ₹೯೭೭.೮೯ ಲಕ್ಷ, ಒಟ್ಟು ಖರ್ಚು ₹೯೫೯.೧೫ ಲಕ್ಷದ ಯೋಜನೆ ರೂಪಿಸಲಾಗಿದ್ದು, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪಟ್ಟಣದ ರಸ್ತೆ, ಚರಂಡಿ ನಿರ್ಮಾಣ ಹಾಗೂ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಲಾಗಿದೆ.ಬಜೆಟ್ ಮಂಡಿಸಿದ ಆನಂತರದಲ್ಲಿ ಕೆಲವು ಸಾರ್ವಜನಿಕರು, ಪಟ್ಟಣದಲ್ಲಿ ಉದ್ಯಾನ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಹಾಗೂ ಕೆಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇದ್ದು, ಸರಿಯಾಗಿ ಚರಂಡಿ ಸ್ವಚ್ಛ ನಿರ್ವಹಣೆ ಇಲ್ಲ. ಅದೇ ರೀತಿ ಪಟ್ಟಣದಲ್ಲಿ ಕುಡಿಯಲು ಬೋರ್‌ವೆಲ್ ನೀರು ಸರಬರಾಜು ಆಗುತ್ತಿದ್ದು, ಅದರಲ್ಲಿ ಅಧಿಕವಾಗಿ ಪ್ಲೋರೈಡ್ ಇದೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ತುಂಗಭದ್ರಾ ನದಿ ನೀರನ್ನು ಪಟ್ಟಣಕ್ಕೆ ಸರಬರಾಜು ಮಾಡಲು ಪಪಂ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಪಂ ಮುಖ್ಯಾಧಿಕಾರಿ, ತುಂಗಭದ್ರಾ ನದಿ ನೀರು ಪೂರೈಕೆ ಸ್ಥಗಿತವಾದ ಬಳಿಕ ನಿರ್ವಹಣೆ ಇಲ್ಲದೆ ಯಂತ್ರಗಳು ಹಾಳಾಗಿದ್ದು, ಅದೇ ರೀತಿ ಶಿರಹಟ್ಟಿ ಬೆಳ್ಳಟ್ಟಿ ನಡುವೆ ರಸ್ತೆ ಕಾಮಗಾರಿ ವೇಳೆ ಪೈಪ್‌ಗಳು ಒಡದಿವೆ. ಅವೆಲ್ಲ ದುರಸ್ತಿ ಕೆಲಸಕ್ಕೆ ಅಮೃತ ೨.೦ ಯೋಜನೆ ಅಡಿಯಲ್ಲಿ ಅಂದಾಜು ₹೨೫ ಕೋಟಿ ಬಿಡುಗಡೆಯಾಗಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ದುರಸ್ತಿಗೊಳಿಸಿ ಶಿರಹಟ್ಟಿ ಹಾಗೂ ಮುಳಗುಂದ ಪಪಂಗೆ ಹಸ್ತಾಂತರಿಸುತ್ತದೆ. ತುಂಗಭದ್ರಾ ನದಿ ನೀರು ಸರಬರಾಜು ನಿರ್ವಹಣೆಗೆ ಬಜೆಟ್‌ನಲ್ಲಿ ₹೫೦ ಲಕ್ಷ ಮೀಸಲಿಡಲಾಗಿದೆ ಎಂದು ವಿವರಿಸಿದರು.ಪ.ಜಾ., ಪ.ಪಂ. ಕಲ್ಯಾಣ ನಿಧಿ ಶೇ. ೨೯, ಬಡಜನರ ಕಲ್ಯಾಣ ನಿಧಿ ಶೇ. ೭.೨೫ ಹಾಗೂ ಅಂಗವಿಕಲರ ಕಲ್ಯಾಣ ನಿಧಿ ಶೇ. ೫ ಸೇರಿ ಒಟ್ಟು ₹೧೮ ಲಕ್ಷ ಪ್ರಸಕ್ತ ಸಾಲಿನ ಅಂದಾಜು ಆಯವ್ಯಯದಲ್ಲಿ ಮೀಸಲಿಡಲಾಗಿದೆ. ಅದೇ ರೀತಿ ಬಂಡವಾಳ ಪಾವತಿಗಳು ಕಟ್ಟಡಗಳು ₹೫೦.೫೦ ಲಕ್ಷ, ನಾಗರಿಕ ವಿನ್ಯಾಸಗಳು ಹಾಗೂ ಸ್ಮಶಾನ ಅಭಿವೃದ್ಧಿ ₹೧೫.೭೫ ಲಕ್ಷ, ರಸ್ತೆ-ಪಾದಚಾರಿ ಮಾರ್ಗಗಳು ₹೫೫.೨೫ ಲಕ್ಷ, ಚರಂಡಿ ಹಾಗೂ ರಸ್ತೆಬದಿ ಚರಂಡಿಗಳು ₹೪೫.೫೦ ಲಕ್ಷ, ಇತರ ಸ್ಥಿರಾಸ್ತಿಗಳು ₹೫ ಲಕ್ಷ, ಬೀದಿದೀಪಗಳು ₹೨೫ ಲಕ್ಷ, ಲಘು ವಾಹನಗಳು ₹೫ ಲಕ್ಷ, ಕಚೇರಿ ಉಪಕರಣಗಳು ₹೮ ಲಕ್ಷ, ಜೋಡಣೆಗಳು ಮತ್ತು ಸಲಕರಣೆಗಳು ₹೫ ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ ₹೪೧ ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ ವಾಹನಗಳು ₹೩೦ ಲಕ್ಷ ಹಾಗೂ ಭೂಮಿ ಉದ್ಯಾನಗಳು ಮತ್ತು ತೋಟಗಳು ₹೧೫.೫೦ ಲಕ್ಷ ಸೇರಿ ಒಟ್ಟು ₹೩೩೬.೫೦ ಲಕ್ಷ ಅಂದಾಜು ವೆಚ್ಚ ಹಾಗೂ ಪಾವತಿಗಳನ್ನು ನಿರೀಕ್ಷಿಸಲಾಗಿದೆ ಎಂದು ಪಪಂ ಮುಖ್ಯಾಧಿಕಾರಿಗಳು ಖರ್ಚು ವೆಚ್ಚದ ಲೆಕ್ಕ ನೀಡಿದರು.