ರಾಜ್ಯ ಮತ್ತು ರಾಷ್ಟ್ರದ ವಿವಿಧೆಡೆ ನಡೆಯುವ ಕಬಡ್ಡಿ ಪಂದ್ಯಾವಳಿಗಳಲ್ಲಿ ಮಹಿಳಾ ತಂಡ ಪಾಲ್ಗೊಳ್ಳಲು ರಾಜ್ಯದೆಲ್ಲೆಡೆ ಮುಕ್ತ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಕ್ರೀಡಾಪಟುಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಬ್ಯಾಡಗಿ: ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಮೇ 1 ಮತ್ತು 2ರಂದು ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಹಾವೇರಿ ಜಿಪಂ ಮಹಿಳಾ ತಂಡಕ್ಕೆ ಅವಕಾಶ ನೀಡದೆ ಅಮಾನವೀಯವಾಗಿ ನಡೆಸಿಕೊಂಡು ಕ್ರೀಡಾಪಟುಗಳ ಮೇಲೆ ದೌರ್ಜನ್ಯವೆಸಗಿದ್ದಲ್ಲದೇ ಪಂದ್ಯಾವಳಿಯಿಂದ ಹೊರ ಹಾಕಿದ ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಸಂಸ್ಥೆ ಕಾರ್ಯದರ್ಶಿ ಶ್ರೀಧರ ಕಾಗಿನೆಲ್ಲಿ, ಗ್ಯಾಲರಿ ಮಾಲೀಕ ಶೇಖರ ಹಾಗೂ ತೀರ್ಪುಗಾರ ನಂಜೇಶಗೌಡ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ರಾಜ್ಯ ಮತ್ತು ರಾಷ್ಟ್ರದ ವಿವಿಧೆಡೆ ನಡೆಯುವ ಕಬಡ್ಡಿ ಪಂದ್ಯಾವಳಿಗಳಲ್ಲಿ ಮಹಿಳಾ ತಂಡ ಪಾಲ್ಗೊಳ್ಳಲು ರಾಜ್ಯದೆಲ್ಲೆಡೆ ಮುಕ್ತ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಕ್ರೀಡಾಪಟುಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕೋಚ್ ಮಂಜುಳ ಭಜಂತ್ರಿ, ಶಾಸಕ ಶಿವಣ್ಣನವರ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರ ಹಾಗೂ ಅಧಿಕಾರಿಗಳ ಸಹಯೋಗದೊಂದಿಗೆ ಸುಮಾರು 40ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಕಳೆದ 8 ವರ್ಷದಿಂದ ತರಬೇತಿ ನೀಡುತ್ತಾ ಬಂದಿದ್ದು, ಇಲ್ಲಿ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ವಿಶ್ವವಿದ್ಯಾಲಯ ಸೇರಿದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರಿದ್ದಲ್ಲದೇ ಕಳೆದ ವರ್ಷ ಹಾವೇರಿ ವಿಶ್ವವಿದ್ಯಾಲಯ ತಂಡದಲ್ಲಿ 12 ಕ್ರೀಡಾಪಟುಗಳಿದ್ದು, ಪದವಿಪೂರ್ವ ಶಿಕ್ಷಣ ಇಲಾಖೆ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ರುಕ್ಸಾರ ಖತೀಬ್ ಪಾಲ್ಗೊಂಡಿದ್ದಳು. ಇಂತಹ ಕ್ರೀಡಾಪಟುಗಳನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದು ದುರದೃಷ್ಟಕರ ಘಟನೆ ಮತ್ತೊಮ್ಮೆ ಮರುಕಳಿಸದಂತೆ ಹಾಗೂ ಮುಕ್ತ ಅವಕಾಶ ನೀಡುವಂತೆ ಆಗ್ರಹಿಸಿದರು.

ಗೃಹ ಸಚಿವರ ನಡೆಸಿದ ಪಂದ್ಯಾವಳಿಯಲ್ಲೇ ಅವಮಾನ: ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕೊರಟಗೆರೆ ಜಿಲ್ಲಾ ಪಂಚಾಯತ್ ತಂಡಕ್ಕೆ ಮೊದಲು ಆಹ್ವಾನ ನೀಡಿ ಬಳಿಕ ಆಟವಾಡಲು ನಿರಾಕರಿದ್ದು ಖಂಡನಾರ್ಹ, ಪ್ರಶ್ನಿಸಿದ್ದಕ್ಕೆ ಜಿಲ್ಲಾ ಕಾರ‍್ಯದರ್ಶಿ ಶ್ರೀಧರ ಕಾಗಿನೆಲ್ಲಿ ಅವರಿಂದ ಅನುಮತಿ ಪಡೆಯುವಂತೆ ತಿಳಿಸುವುದು ಎಷ್ಟರಮಟ್ಟಿಗೆ ಸರಿ? 300 ಕಿ.ಮೀ. ತೆರಳಿದ ಕ್ರೀಡಾಪಟುಗಳಿಗೆ ಅದರಲ್ಲೂ ಗೃಹಸಚಿವರ ಹೆಸರಿನಲ್ಲಿ ನಡೆದ ಪಂದ್ಯಾವಳಿಯಲ್ಲಿ ಮಾಡಿರುವ ಅವಮಾನದಿಂದ ರಾಜ್ಯದ ಕ್ರೀಡಾಪಟುಗಳು ತಲೆ ತಗ್ಗಿಸುವಂತಾಗಿದ್ದು, ಇಲ್ಲಿ ತರಬೇತಿ ಪಡೆಯುತ್ತಿರುವ ರೈತರ, ದಲಿತರ, ಬಡವರ ಮಕ್ಕಳಿಗೆ ನ್ಯಾಯ ಕೊಡಿಸವವರು ಯಾರು..? ತಪ್ಪಿತಸ್ಥರ ವಿರುದ್ಧ ಕ್ರಮವಾಗದಿದ್ದರೇ ಹೋರಾಟ ನಿಶ್ಚಿತ ಎಂದು ಪ್ರಶ್ನಿಸಿದರು.ಜಿಲ್ಲೆಯಲ್ಲೇ ಕಬಡ್ಡಿ ನಶಿಸುತ್ತಿದೆ: ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಹಾವೇರಿ ಜಿಲ್ಲಾ ಪಂಚಾಯತ್ ತಂಡ ವನ್ನು ಹೊರಗೆ ಹಾಕಲು ಕಾರಣವೇನು? ಎಂದು ಲಿಖಿತ ಉತ್ತರ ನೀಡದೇ ಕಳುಹಿಸಿದ್ದಾರೆ, ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಸಂಸ್ಥೆ ಹಾವೇರಿ ಇದರ ಪದಾಧಿಕಾರಿಗಳು ಜಿಲ್ಲೆಯಲ್ಲಿ ಕಬಡ್ಡಿ ನಶಿಸುವಂತೆ ನೋಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಉತ್ತಮ ಹೆಸರನ್ನು ಪಡೆದ ಮಹಿಳಾ ತಂಡದ ನೈತಿಕಶಕ್ತಿ ಕುಂದಿಸುವ ಹುನ್ನಾರ ಇದರಲ್ಲಡಗಿದೆ ಬಡ, ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ಕ್ರೀಡಾಪಟುಗಳಿಗೆ ಅನ್ಯಾಯವೆಸಗಿದ್ದು ಸಂಸ್ಥೆ ವಿರುದ್ಧ ಕ್ರಮ ಜರುಗಿಸಬೇಕಲ್ಲದೇ ಸಹಕಾರ ಇಲಾಖೆ ಉಪನಿಬಂಧಕರು ಹಾವೇರಿ ಸದರಿ ಸಂಸ್ಥೆಯ ನೋಂದಣಿ ರದ್ದುಪಡಿಸುವಂತೆ ಆಗ್ರಹಿಸಿದರು.

ಕ್ರಮದ ಭರವಸೆ: ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ನಮ್ಮದೆ ಜಿಲ್ಲಾ ಪಂಚಾಯತ್ ತಂಡಕ್ಕೆ ಇಂತಹ ಪರಿಸ್ಥಿತಿ ಬಂದಿರುವುದನ್ನು ಹಾಗೂ ಅದನ್ನು ಗಮನಕ್ಕೆ ತಂದಿರುವುದನ್ನು ಸ್ವಾಗತಿಸುತ್ತೇನೆ. ಪೊಲೀಸ್ ಇಲಾಖೆ ನಿರ್ದೇಶನ ನೀಡುವ ಮೂಲಕ ತಪ್ಪತಸ್ಥರನ್ನು ಕರೆತಂದು ವಿಚಾರಣೆ ನಡೆಸಿ ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು. ಈ ವೇಳೆ ನ್ಯಾಯವಾದಿ ಸುರೇಶ ಛಲವಾದಿ ಹಾವೇರಿ, ಹಿರಿಯ ಕಬಡ್ಡಿ ಕ್ರೀಡಾಪಟು ಸಿ.ಜಿ. ಚಕ್ರಸಾಲಿ, ಮಲ್ಲಿಕಾರ್ಜುನ ಕೋಡಿಹಳ್ಳಿ, ರಾಜೇಶ ಮಾಳಗಿ, ಎಲ್.ಎಸ್. ಹರಳಹಳ್ಳಿ, ಸುಭಾಸ್ ಮಾಳಗಿ ಜಿಲ್ಲಾ ಪಂಚಾಯತ್ ತಂಡದ ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.