ಶಿಗ್ಗಾಂವಿ ತಾಲೂಕಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ರೈತರಿಗೆ ೨೦೨೪-೨೫ನೇ ಸಾಲಿನಲ್ಲಿ ಅನ್ಯಾಯವಾದಂತೆ ೨೦೨೫-೨೬ನೇ ಸಾಲಿನ ಬೆಳೆ ವಿಮೆಯಲ್ಲೂ ಸಹಿತ ಪ್ರೀಮಿಯಂ ಹಣ ಕಟ್ಟಿದ ರೈತರಿಗೆ ಅನ್ಯಾಯವಾಗಿ ಮತ್ತೆ ಸಂಕಷ್ಟ ಎದುರಾಗಿದೆ ಎಂದು ರೈತ ಮುಖಂಡ ಹಾಗೂ ಮಾಜಿ ಜಿಪಂ ಸದಸ್ಯ ಶಶಿಧರ ಹೊನ್ನಣ್ಣವರ ಆರೋಪಿಸಿದ್ದಾರೆ.
ಶಿಗ್ಗಾಂವಿ: ತಾಲೂಕಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ರೈತರಿಗೆ ೨೦೨೪-೨೫ನೇ ಸಾಲಿನಲ್ಲಿ ಅನ್ಯಾಯವಾದಂತೆ ೨೦೨೫-೨೬ನೇ ಸಾಲಿನ ಬೆಳೆ ವಿಮೆಯಲ್ಲೂ ಸಹಿತ ಪ್ರೀಮಿಯಂ ಹಣ ಕಟ್ಟಿದ ರೈತರಿಗೆ ಅನ್ಯಾಯವಾಗಿ ಮತ್ತೆ ಸಂಕಷ್ಟ ಎದುರಾಗಿದೆ ಎಂದು ರೈತ ಮುಖಂಡ ಹಾಗೂ ಮಾಜಿ ಜಿಪಂ ಸದಸ್ಯ ಶಶಿಧರ ಹೊನ್ನಣ್ಣವರ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷದಂತೆ ಈ ವರ್ಷವೂ ಅವೈಜ್ಞಾನಿಕ ನಿಯಮದಿಂದ ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ತನದಿಂದ ರೈತರಿಗೆ ಸಂಕಷ್ಟ ಎದುರಾಗಿದೆ, ೨೦೨೫-೨೬ ನೇ ಸಾಲಿನಲ್ಲಿ ೨೮ ಗ್ರಾ.ಪಂ ಪೈಕಿ ೭ ಪಂಚಾಯತಿಗಳಿಗೆ ಮೆಕ್ಕೆಜೋಳಕ್ಕೆ ವಿಮೆ ಬಂದಿದ್ದು ಒಟ್ಟು ೨೮ ಪಂಚಾಯತಿಯ ಪ್ರೀಮಿಯಂ ಹಣ ಸುಮಾರು ೧,೭೩,೨೪,೬೩೫/- ಪ್ರೀಮಿಯಂ ಹಣ ಕಟ್ಟಿದ್ದು ಇನ್ನೂ ೨೧ ಪಂಚಾಯಿತಿಗೆ ಅನ್ಯಾಯ ಮಾಡಲಾಗಿದೆ. ಅದರಂತೆ ಬಂಕಾಪುರ ಹೋಬಳಿಗೆ ನೀರಾವರಿ ಆಶ್ರಿತ ಭತ್ತದ ಬೆಳೆಗೆ ವಿಮೆ ಬಂದಿದ್ದು ಮಳೆ ಆಶ್ರಿತ ಭತ್ತಕ್ಕೆ ಕೇವಲ ಕುನ್ನೂರ ಪಂಚಾಯಿತಿಗೆ ವಿಮೆ ಬಂದಿದೆ. ಮಳೆ ಆಶ್ರಿತ ಭತ್ತಕ್ಕೆ ೨೮೫ ಜನ ರೈತರು ೧,೬೮,೮೬೨ ಪ್ರಿಮಿಯಂ ಹಣ ತುಂಬಿದ್ದು, ಅದಕ್ಕೆ ೯,೮೯,೧೧೫ ವಿಮೆ ಬಂದಿರುತ್ತದೆ. ಅದೇ ರೀತಿ ನೀರಾವರಿ ಭತ್ತಕ್ಕೆ ೧೦೩೩ ರೈತರು ೧೪,೫೧,೩೫೯/- ಪ್ರೀಮಿಯಂ ಹಣ ತುಂಬಿದ್ದು ೪,೦೫,೮೪,೧೭೪/- ಪ್ರೀಮಿಯಂ ಬಂದಿದೆ.ಶಿಗ್ಗಾಂವಿ ಹೋಬಳಿಗೆ ಹತ್ತಿ ಬೆಳೆಗೆ ೯೯ ಜನ ರೈತರು ೧೫೨೨,೮೬ ಪ್ರೀಮಿಯಂ ಹಣ ತುಂಬಿದ್ದು ೪೨,೬೪,೧೭ ರು. ವಿಮೆ ಬಂದಿರುತ್ತದೆ. ಈ ರೀತಿ ಅವೈಜ್ಞಾನಿಕ ನಿಯಮದಿಂದ ರೈತರು ವಿಮೆಯಿಂದ ವಂಚಿತರಾಗಿದ್ದಾರೆ ಎಂದರು.
ತಾಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತನದಿಂದ ಅವೈಜ್ಞಾನಿಕ ಸಮೀಕ್ಷೆ ಮಾಡಿ ಕೇವಲ ೭೫೯.೩೩ ಹೆಕ್ಟರ ಪ್ರದೇಶವನ್ನು ಹಾನಿ ಪ್ರದೇಶವೆಂದು ಗುರುತಿಸಿ ಹಾನಿಯಲ್ಲೂ ಸಹಿತ ರೈತರಿಗೆ ವಂಚಿಸಿದ್ದಾರೆ. ರೈತರು ಬೆಳೆ ವಿಮೆಗೆ ಕೇವಲ ಪ್ರೀಮಿಯಂ ಹಣ ತುಂಬಿ ಈ ಸಾರಿಯಾದರೂ ವಿಮೆ ಬರುತ್ತದೆ ಎಂಬ ನಂಬಿಕೆ ಹುಸಿಯಾಗಿದೆ. ರೈತರಿಗೆ ಸಮಗ್ರವಾಗಿ ಬೆಳೆವಿಮೆ ಒದಗಿಸಿಕೊಡಬೇಕೆಂದು ರೈತರ ಕೂಗಿಗೆ ಕವಡೆ ಕಾಸಿನ ಕಿಮತ್ತು ಕೊಡದೆ ಇರುವ ವಿಮೆ ಕಂಪನಿಗಳು ಅವೈಜ್ಞಾನಿಕ ನಿಯಮದಿಂದ ರೈತರನ್ನು ದುಸ್ಥಿತಿಗೆ ಸಿಲುಕಿಸಿ ಕೈತೊಳೆದು ಕೊಂಡಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ನಾರಾಯಣಪುರ ಡಿಪಿಪಿ ಸೊಸೈಟಿಯ ಅಧ್ಯಕ್ಷ ಉಮೇಶ ಅಂಗಡಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿದ್ದಲಿಂಗೇಶ್ವರ ಕಲಿವಾಳ, ಷಣ್ಮುಖ ಕಾಳಣ್ಣವರ, ಮಂಜುನಾಥಗೌಡ ಗೋಟಗೋಡಿ, ಶಿವಾನಂದ ತೊಂಡೂರ, ಶಂಕರ ಹೊಸಕಟ್ಟಿ, ಮಲ್ಲೇಶಪ್ಪ ಬೂದಿಹಾಳ, ಸುರೇಶ ಮೂರಾರಿ, ಮಾಲತೇಶ ಕಮ್ಮಾರ, ಜಗದೀಶ ಶಿದ್ದಪ್ಪನವರ, ಬಸವಣ್ಣೆಪ್ಪ ಗುಳೇದಕೇರಿ, ಗದಗಯ್ಯ ಹಿರೇಮಠ, ನಿಂಗಪ್ಪ ಹರಿಜನ, ಸಂತೋಷ ದೊಡ್ಡಮನಿ, ಶಿವನಾಗಪ್ಪ ಲಕ್ಷೇಶ್ವರ, ದುಂಡಪ್ಪ ರಾಯಣ್ಣವರ ಸೇರಿದಂತೆ ಇತರ ರೈತರು ಇದ್ದರು.ವಿಮಾ ಕಂಪನಿಯ ಮೇಲೆ ಸಂಶಯ: ತಾಲೂಕಿನ ೨೮ ಪಂಚಾಯಿತಿಗಳ ಪೈಕಿ ೭ ಪಂಚಾಯಿತಿಗೆ ವಿಮೆ ಬಂದಿದ್ದು, ಹಿರೇಮಣಕಟ್ಟಿ ಗ್ರಾಮ ಪಂಚಾಯಿತಿಗೆ ಕೇವಲ ಒಬ್ಬ ರೈತನಿಗೆ ವಿಮೆ ಬಂದಿರುತ್ತದೆ. ಇದು ಒಟ್ಟು ಪಂಚಾಯಿತಿಗೆ ಬೆಳೆ ವಿಮೆ ಬರದೇ ಕೇವಲ ಒಬ್ಬ ರೈತನಿಗೆ ಬಂದಿದ್ದು, ವಿಮಾ ಕಂಪನಿಯ ಮೇಲೆ ಸಂಶಯ ಮೂಡಿದೆ. ಆ ಪಂಚಾಯತಿಯನ್ನು ವಿಮೆಗೆ ಏಕೆ ಸೇರಿಸಿಲ್ಲ ಎಂಬ ಪ್ರಶ್ನೆ ಉದ್ಭವವಾಗಿದೆ.