ರೈತರ ಸಂಪೂರ್ಣ ಸಾಲಮನ್ನಾಕ್ಕೆ ಒತ್ತಾಯ

| Published : Mar 23 2024, 01:01 AM IST

ಸಾರಾಂಶ

ರೈತರ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಸಾಲ ಪಡೆದಿದ್ದು, ತೀವ್ರ ಬರಗಾಲದ ಸಂಕಷ್ಟದಲ್ಲಿರುವ ರೈತರಿಗೆ ಯಾವುದೇ ನೋಟಿಸ್ ನೀಡಬಾರದು.

ಹೊಸಪೇಟೆ:

ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಜೆ.ಎನ್. ಕಾಳಿದಾಸ್ ಒತ್ತಾಯಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಸಾಲ ಪಡೆದಿದ್ದು, ತೀವ್ರ ಬರಗಾಲದ ಸಂಕಷ್ಟದಲ್ಲಿರುವ ರೈತರಿಗೆ ಯಾವುದೇ ನೋಟಿಸ್ ನೀಡಬಾರದು. ಒಂದು ವೇಳೆ ನೀಡಿದಲ್ಲಿ ಅಂತಹ ಬ್ಯಾಂಕ್‌ಗಳ ವಿರುದ್ಧ ಉಗ್ರ ಹೋರಾಟ ನಡೆಸುತ್ತೇವೆ. ಈ ಕೂಡಲೇ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.ಬರಗಾಲದಿಂದ ಮುಂದಿನ ಬೆಳೆ ಬೆಳೆಯಲು ಆರ್ಥಿಕ ಸಮಸ್ಯೆಯಾಗಿದೆ. ಹಾಗಾಗಿ ಎಕರೆಗೆ ₹ 10 ಸಾವಿರ ಮುಂಗಡ ನೀಡಿ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಬೇಕು. ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕ ವಿತರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಮುಂಬರುವ ಮುಂಗಾರು ಮತ್ತು ಹಿಂಗಾರು ಪ್ರವೇಶವಾಗುವ ಒಳಗೆ ಬೀಜ ಮತ್ತು ರಸಗೊಬ್ಬರ ಬೆಲೆ ಕಡಿಮೆ ಮಾಡಿ ವಿತರಿಸಬೇಕು ಎಂದು ಒತ್ತಾಯಿಸಿದರು.

ರೈತರು ಬೆಳೆದ ಬೆಳೆಗಳಿಗೆ ಸ್ವಾಮಿನಾಥನ್ ವರದಿ ಕೂಡಲೇ ಜಾರಿಗೊಳಿಸಬೇಕು. ತೋಟಗಾರಿಕೆ ಇಲಾಖೆ ಯಾವುದೇ ಮಾಹಿತಿ ಕೊಡದೇ ನಿರ್ಲಕ್ಷ್ಯ ತೋರುತ್ತಿದೆ. ಜತೆಗೆ ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳು 2023-24ರಲ್ಲಿ ಸಿಕ್ಕಿಲ್ಲ. ಇನ್ನು ಮುಂದೆ ಎಲ್ಲ ರೀತಿಯ ಕೃಷಿ ಸಾಮಗ್ರಿಗಳು ಹಾಗೂ ಕೀಟನಾಶಕ ಮತ್ತು ಸೌಲಭ್ಯಗಳು ರೈತರಿಗೆ ಸಿಗುವಂತೆ ಮಾಡಿ ಅನುಕೂಲ ಮಾಡಿಕೊಡಬೇಕು ಎಂದರು.

ತುಂಗಭದ್ರಾ ಜಲಾಶಯ ಇರುವ ಈ ಭಾಗದಲ್ಲಿ ಕುಡಿಯುವ ನೀರಿನ ಆದ್ಯತೆ ಕೊಡಬೇಕು. ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಬೇಸಿಗೆಯಲ್ಲಿ ಸಮಸ್ಯೆಯಾಗದಂತೆ ಶುದ್ಧ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಮಾಡಬೇಕು. ಜಿಂದಾಲ್ ಕಂಪನಿಗೆ ನೀರು ಹರಿಸುತ್ತಿರುವ ಕುರಿತು ಕುಡಿಯುವ ನೀರಿಗೆ ಆದ್ಯತೆ ಕೊಟ್ಟು ಜೂನ್ ವರೆಗೆ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು. ಸಕ್ಕರೆ ಕಾರ್ಖಾನೆ ಸ್ಥಾಪನೆ ಬಗ್ಗೆ ಕಳೆದ ಅವಧಿಯಲ್ಲಿ ಸಚಿವರಾಗಿದ್ದವರು ಚರ್ಚೆ ಮಾಡಿದರೂ ಆಗಲಿಲ್ಲ. ಈಗ ರೈತರಿಗೆ ಬೆಲೆ ಕೊಡದೇ ಅವಮಾನ ಮಾಡಲಾಗುತ್ತಿದ್ದು, ಕೂಡಲೇ ಕಾರ್ಖಾನೆ ಸ್ಥಾಪನೆಗೆ ಒತ್ತು ಕೊಡಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಹೇಮರೆಡ್ಡಿ, ತಾಲೂಕು ಅಧ್ಯಕ್ಷ ಎಚ್.ಜಿ. ಮಲ್ಲಿಕಾರ್ಜುನ, ಉಪಾಧ್ಯಕ್ಷ ಎಲ್.ಎಸ್. ರುದ್ರಪ್ಪ, ಜೆ. ಮಲ್ಲಪ್ಪ, ಆರ್. ಮುತ್ತಯ್ಯ, ಪಂಪಾಪತಿ, ಸಿದ್ದೇಶ್ವರ್ ಮತ್ತಿತರರಿದ್ದರು.