ಮತದಾನದ ಪ್ರಮಾಣ ಹೆಚ್ಚಳಕ್ಕೆ ಕ್ರಮವಹಿಸಿ: ತುಷಾರ್‌ ಸೂಚನೆ

| Published : Mar 23 2024, 01:01 AM IST

ಸಾರಾಂಶ

ಮತದಾನ ಪ್ರಮಾಣ ಕಡಿಮೆ ಇರುವ ಮತಗಟ್ಟೆ ವ್ಯಾಪ್ತಿಯಲ್ಲಿ ಜನರಿಗೆ ಜಾಗೃತಿ ಮೂಡಿಸಿ ಮತದಾನ ಪ್ರಮಾಣ ಹೆಚ್ಚಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮತದಾನ ಪ್ರಮಾಣ ಕಡಿಮೆ ಇರುವ ಮತಗಟ್ಟೆ ವ್ಯಾಪ್ತಿಯಲ್ಲಿ ಜನರಿಗೆ ಜಾಗೃತಿ ಮೂಡಿಸಿ ಮತದಾನ ಪ್ರಮಾಣ ಹೆಚ್ಚಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ವಿಜಯ ಕಾಲೇಜಿನಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಹಾಗೂ ಮೇಲ್ವಿಚಾರಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ಚುನಾವಣೆಯಲ್ಲೂ ಮತದಾನ ಮಾಡುವಾಗ ನಿಗದಿತ ಶೇಕಡವಾರು ಪ್ರಮಾಣ ತಲುಪಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಬೂತ್ ಮಟ್ಟದ ಮೇಲ್ವಿಚಾರಕರು ಹಾಗೂ ಬೂತ್ ಮಟ್ಟದ ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಳ ಮಾಡಬೇಕೆಂದು ತಿಳಿಸಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತಗಟ್ಟೆಗಳ ಪೈಕಿ ಕಳೆದ ಬಾರಿ ಸುಮಾರು 935 ಮತಗಟ್ಟೆಗಳಲ್ಲಿ ಮತದಾನದ ಪ್ರಮಾಣ ಶೇಕಡವಾರು ಕಡಿಮೆಯಾಗಿರುತ್ತದೆ. ಆಯಾ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಮನೆ-ಮನೆಗೆ ಬೂತ್ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ತಪ್ಪದೆ ಮತದಾನ ಮಾಡಲು ನಾಗರಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.

ಮತದಾರರು ವೋಟರ್ ಹೆಲ್ಪ್ ಲೈನ್‌ಗೆ ಭೇಟಿ ನೀಡಿ ಮತದಾನ ಗುರುತಿನ ಚೀಟಿಯ ಸಂಖ್ಯೆ ನಮೂದಿಸಿದರೆ ಸಾಕು ಮತಗಟ್ಟೆ ಹಾಗೂ ವಿಳಾಸದ ಲಭ್ಯವಾಗಲಿದೆ. ಇದೀಗ ಮತಗಟ್ಟೆಗೆ ಲೊಕೇಶನ್‌ ಹಾಕಿಕೊಂಡು ತೆರಳುವ ವ್ಯವಸ್ಥೆಯ ಸಾಫ್ಟ್‌ವೇರ್‌ ಸಿದ್ದಪಡಿಸಲಾಗುತ್ತಿದೆ ಎಂದು ಹೇಳಿದರು.

ಸ್ವೀಪ್ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಕಾಂತರಾಜು, ಬೆಂಗಳೂರು ನಗರ ಜಿಲ್ಲೆಯ ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸ್ವೀಪ್ ನೋಡಲ್ ಅಧಿಕಾರಿ ಲಕ್ಷ್ಮಿದೇವಿ ಉಪಸ್ಥಿತರಿದ್ದರು.

- - -

ಚುನಾವಣಾ ನೀತಿ ಸಂಹಿತೆ ಮೇಲೆ ನಿಗಾಕ್ಕೆ ನಿರ್ದೇಶನಕನ್ನಡಪ್ರಭ ವಾರ್ತೆ ಬೆಂಗಳೂರುನಗರದಲ್ಲಿ ಲೊಕಸಭಾ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮೇಲೆ ನಿಗಾವಹಿಸಬೇಕು. ಉಲ್ಲಂಘನೆ ಕಂಡು ಬಂದ ತಕ್ಷಣ ದೂರು ದಾಖಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಪೊಲೀಸ್‌ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಿ ಮಾತನಾಡಿದ ಅವರು, ಚೆಕ್ ಪೋಸ್ಟ್‌ಗಳಲ್ಲಿ ಅನುಮಾನಾಸ್ಪದ ವಾಹನ ಪರಿಶೀಲಿಸಬೇಕು. ದಾಖಲೆ ಇಲ್ಲದೆ ಹಣ ಸಾಗಿಸುವುದು ಅಥವಾ ಇನ್ನಿತರೆ ವಸ್ತುಗಳನ್ನು ಸಾಗಿಸುತ್ತಿದ್ದರೆ ಅದನ್ನು ವಶಕ್ಕೆ ಪಡೆದು ದೂರು ದಾಖಲಿಸಬೇಕೆಂದು ಸೂಚಿಸಿದರು.ಹತ್ತು ಲಕ್ಷಕ್ಕಿಂತ ಹೆಚ್ಚು ಹಣ ಸಿಕ್ಕಿದಲ್ಲಿ ಕೂಡಲೇ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಒದಗಿಸಬೇಕು. ವಶಕ್ಕೆ ಪಡೆದ ಸಂಬಂಧಪಟ್ಟವರು ಸರಿಯಾದ ದಾಖಲೆಗಳನ್ನು ಸಲ್ಲಿಸಿದಲ್ಲಿ ಹಣವನ್ನು ಜಿಲ್ಲಾಮಟ್ಟದ ದೂರು ಸಮಿತಿಯ ಆದೇಶದ ಮೇರೆಗೆ ಬಿಡುಗಡೆಗೊಳಿಸಬೇಕು ಎಂದು ಹೇಳಿದರು.ನಿಯೋಜಿಸಿರುವ ಎಫ್‌ಎಸ್‌ಟಿ ಹಾಗೂ ಎಸ್ಎಸ್‌ಟಿ ತಂಡಗಳು ಸಕ್ರಿಯವಾಗಿ ಕೆಲಸ ನಿರ್ವಹಿಸಿ ವಿಚಾರ ಸಂಹಿತೆ ಉಲ್ಲಂಘನೆ ಹಾಗೂ ಬೇರೆ-ಬೇರೆ ಕಾಯ್ದೆ ಅಡಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ದೂರುಗಳನ್ನು ಆಯಾ ಪೊಲೀಸ್ ಠಾಣೆಗೆ ನೀಡಬೇಕು. ಪೊಲೀಸ್ ಅಧಿಕಾರಿಗಳು ದೂರಿನ ಮೇಲೆ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ಅಥವಾ ಗಂಭೀರ ಸ್ವರೂಪವಲ್ಲದ ವರದಿ (ಎನ್‌ಸಿಆರ್) ದಾಖಲಿಸಿ ತುರ್ತು ಕ್ರಮ ಕೈಗೊಳ್ಳಲು ಸೂಚಿಸಿದರು.ಎನ್‌ಸಿಆರ್‌ಗಳಿಗೆ ಸಂಬಂಧಿಸಿದಂತೆ ಎಫ್‌ಎಸ್‌ಟಿ ಮತ್ತು ಎಸ್‌ಎಸ್‌ಟಿಗಳು ಸಂಬಂಧಿತ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಅಗತ್ಯ ಎಲ್ಲಾ ಸಹಾಯವನ್ನು ಪೊಲೀಸ್ ಅಧಿಕಾರಿಗಳು ನೀಡಲು ಸೂಚಿಸಲಾಯಿತು.ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಮಾತನಾಡಿ, ಲೋಕಸಭಾ ಚುನಾವಣಾ ಕೆಲಸ-ಕಾರ್ಯಗಳನ್ನು ಶಿಸ್ತಿನಿಂದ ನಿರ್ವಹಿಸಬೇಕು. ಜತೆಗೆ ಚುನಾವಣಾಧಿಕಾರಿಗಳ ಜತೆಗೆ ಸಮನ್ವಯ ಸಾಧಿಸಿ ಕರ್ತವ್ಯ ನಿರ್ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶಿಸಿದರು.ಸಭೆಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ, ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ। ಹರೀಶ್ ಕುಮಾರ್, ಡಾ। ದಯಾನಂದ್, ವಿನೋತ್ ಪ್ರಿಯಾ ಉಪಸ್ಥಿತರಿದ್ದರು.