ಕೇಂದ್ರ ಸಂಪುಟದಿಂದ ಅಮಿತ್ ಶಾ ವಜಾಕ್ಕೆ ಆಗ್ರಹ

| Published : Jan 08 2025, 12:15 AM IST

ಸಾರಾಂಶ

ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ದಸಂಸ ಕಾರ್ಯಕರ್ತರು ಮಂಗಳವಾರ ಡಿಸಿ ಕಚೇರಿ ಮುಂಭಾಗ ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಸಂಸತ್ ನಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದರು.

ದೇಶಕ್ಕೆ ಭದ್ರವಾದ ಸಂವಿಧಾನ ನೀಡಿರುವ ಸಂವಿಧಾನಶಿಲ್ಪಿ ಅಂಬೇಡ್ಕರ್ ಹೆಸರೇಳುವ ಬದಲು ದೇವರನ್ನು ಸ್ಮರಿಸಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆಂದು ಗೃಹ ಸಚಿವ ಅಮಿತ್‍ಷಾ ಅಂಬೇಡ್ಕರ್ ರಚಿಸಿದ ಸಂವಿಧಾನದ ಅಡಿಯಲ್ಲಿಯೇ ಸಚಿವನಾಗಿದ್ದೇನೆಂಬುದ ಮರೆತಿದ್ದಾರೆಂದು ದೂರಿದರು.

ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದ ಚಿಂತಕ ಜಗಳೂರು ಯಾದವರೆಡ್ಡಿ, ಜವಾಬ್ದಾರಿ ಸ್ಥಾನದಲ್ಲಿರುವ ಕೇಂದ್ರ ಗೃಹ ಮಂತ್ರಿ ಅಮಿತ್‍ ಶಾ ಅಂಬೇಡ್ಕರ್ ಬಗ್ಗೆ ಕೀಳಾಗಿ ಮಾತನಾಡಿರುವುದ ಪ್ರಧಾನಿ ನರೇಂದ್ರಮೋದಿ ಸಮರ್ಥಿಸಿಕೊಳ್ಳುತ್ತಿರುವುದು ದೊಡ್ಡ ದುರಂತ. ತಕ್ಷಣವೇ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿದರು.

ಬೇರೆ ದೇಶಗಳಲ್ಲಿ ಯಾರಾದರೂ ಇಂತಹ ಹೇಳಿಕೆಗಳನ್ನು ನೀಡಿದ್ದರೆ ಕ್ಷಣದಲ್ಲೆ ಅಧಿಕಾರದಿಂದ ಕೆಳಗಿಳಿಸುತ್ತಿದ್ದರು. ಸಂವಿಧಾನಕ್ಕೆ ಅಪಚಾರವೆಸಗುತ್ತಿರುವ ಅಮಿತ್‍ಷಾ ಶಾ ಹೇಳಿಕೆಯನ್ನು ಸಾಮಾಜಿಕ ಬದ್ದತೆಯಿರುವ ಪ್ರತಿಯೊಬ್ಬರು ವಿರೋಧಿಸುವಂತೆ ಮನವಿ ಮಾಡಿದರು.

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಸಂವಿಧಾನ ಹಾಗೂ ಅಂಬೇಡ್ಕರ್ ಬಗ್ಗೆ ಲಘುವಾಗಿ ಮಾತನಾಡುವುದ ರೂಢಿಸಿಕೊಂಡಂತೆ ಕಾಣಿಸುತ್ತಿದೆ. ಬಿಜೆಪಿ ಸಂಸದರೊಬ್ಬರು ಸಂವಿಧಾನ ಬದಲಾವಣೆ ಮಾಡುತ್ತೇವೆಂದು ನೇರವಾಗಿ ಹೇಳಿಕೆ ನೀಡಿದರೂ ಆತನ ಮೇಲೆ ಕ್ರಮ ಕೈಗೊಳ್ಳಲಾಗಿಲ್ಲ. ಅಂಬೇಡ್ಕರ್ ಅವರ ಬಗ್ಗೆ ಪದೇ ಪದೆ ಅವಹೇಳನಕಾರಿ ಮಾತುಗಳ ಆಡುವುದರ ಮೂಲಕ ಬಿಜೆಪಿ ದೇಶದ ಬಹು ಸಂಖ್ಯಾತ ಶೋಷಿತ ಸಮುದಾಯಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಯಾದವರೆಡ್ಡಿ ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಸಿ.ಹೆಚ್.ಮಂಜುನಾಥ್ ಮಾತನಾಡಿ ದೇಶ ವಿದೇಶಗಳಲ್ಲಿ ಓದಿ 30 ಡಿಗ್ರಿಗಳನ್ನು ಪಡೆದಿರುವ ಅಂಬೇಡ್ಕರೇ ರವರನ್ನು ಸಂಸತ್‍ನಲ್ಲಿ ಹಗುರವಾಗಿ ಮಾತನಾಡಿರುವ ಗೃಹ ಮಂತ್ರಿ ಅಮಿ ಶಾ ರನ್ನು ಸಂಪುಟದಿಂದ ತಕ್ಷಣವೇ ವಜಾಗೊಳಿಸುವಂತೆ ಆಗ್ರಹಿಸಿದರು.

ಎರಡು ವರ್ಷಗಳ ಕಾಲ ಅಧ್ಯಯನ ನಡೆಸಿ ಪವಿತ್ರ ಗ್ರಂಥ ಸಂವಿಧಾನವನ್ನು ಅಂಬೇಡ್ಕರ್ ಅವರು ದೇಶಕ್ಕೆ ಕೊಡುಗೆಯಾಗಿ ನೀಡಿರುವ ಮೌಲ್ಯ ಅರಿಯದ ಗೃಹ ಸಚಿವ ಅಮಿತ್‍ ಶಾ ಕೇವಲವಾಗಿ ಮಾತನಾಡಿರುವುದು ಇಡಿ ದೇಶವೇ ತಲೆ ತಗ್ಗಿಸುವಂತಾಗಿದೆ. ಪ್ರಧಾನಿ ನರೇಂದ್ರಮೋದಿರವರು ಸಮರ್ಥನೆ ಮಾಡಿಕೊಳ್ಳುವ ಬದಲು ತಕ್ಷಣದಿಂದಲೆ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.

ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಮಾತನಾಡಿ ಅಂಬೇಡ್ಕರ್ ಅಮಿತ್ ಶಾ ಸೇರಿದಂತೆ ಎಲ್ಲ ಸಮುದಾಯಗಳಿಗೂ ಮೀಸಲಾತಿ ನೀಡಿದ್ದಾರೆ. ಕೇಂದ್ರ ಗೃಹ ಸಚಿವರಾಗಲು ಅಂಬೇಡ್ಕರ್ ಕಾರಣ ಎಂಬುದ ಮರೆತಿದ್ದಾರೆಂದು ದೂರಿದರು. ಹೊನ್ನೂರಪ್ಪ, ಆರ್.ಭೀಮಣ್ಣ, ಶಶಿಕುಮಾರ್, ಮಹೇಶ್, ಕರಿಬಸಪ್ಪ ಚನ್ನಿಗರಾಮಯ್ಯ, ನಿವೃತ್ತ ಪಿಯು ಡಿಡಿ ಬಿ.ಆರ್.ಶಿವಕುಮಾರ್, ಮಹಲಿಂಗಪ್ಪ ಧರಣಿಯಲ್ಲಿ ಪಾಲ್ಗೊಂಡಿದ್ದರು.