ಪರಿಸರ ಸೂಕ್ಷ್ಮ ವಲಯದಲ್ಲಿ ಕಾಮಗಾರಿಗೆ ಲಿಖಿತ ಅಭಿಪ್ರಾಯ ಕಡ್ಡಾಯ: ಡಿಸಿ ಲಕ್ಷ್ಮೀಪ್ರಿಯಾ ಸೂಚನೆ

| Published : Jan 08 2025, 12:15 AM IST

ಪರಿಸರ ಸೂಕ್ಷ್ಮ ವಲಯದಲ್ಲಿ ಕಾಮಗಾರಿಗೆ ಲಿಖಿತ ಅಭಿಪ್ರಾಯ ಕಡ್ಡಾಯ: ಡಿಸಿ ಲಕ್ಷ್ಮೀಪ್ರಿಯಾ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಶೇ. 79ರಿಂದ 80ರಷ್ಟು ಅರಣ್ಯ ಪ್ರದೇಶವಿದ್ದು, ಪಶ್ಚಿಮ ಘಟ್ಟದಲ್ಲಿ ವಿಶೇಷ ಜೀವ ವೈವಿಧ್ಯತೆ ಇದೆ. ಇವುಗಳನ್ನು ಉಳಿಸಿ ರಕ್ಷಿಸುವಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕಿದೆ.

ಕಾರವಾರ: ಜಿಲ್ಲೆಯ ಪರಿಸರ ಸೂಕ್ಷ್ಮ ವಲಯಗಳಲ್ಲಿ ಯಾವುದೇ ಕಾಮಗಾರಿ ಅಥವಾ ಚಟುವಟಿಕೆಗಳನ್ನು ಕೈಗೊಳ್ಳಲು ಕಂದಾಯ ಇಲಾಖೆಯಿಂದ ಅನುಮತಿ ನೀಡುವ ಮುನ್ನ ಸಂಬಂಧಪಟ್ಟ ವ್ಯಾಪ್ತಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಯ ಲಿಖಿತ ಅಭಿಪ್ರಾಯ ಪಡೆಯಬೇಕು ಎಂದು ಎಲ್ಲ ತಹಸೀಲ್ದಾರರಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಕಾಳಿ ಅರಣ್ಯ ಮೀಸಲು, ಶರಾವತಿ ಕಣಿವೆ, ಅತ್ತಿವೇರಿ ಪಕ್ಷಿಧಾಮ ಪ್ರದೇಶಗಳು ಪರಿಸರ ಸೂಕ್ಷ್ಮ ವಲಯಗಳು ಎಂದು ಗುರುತಿಸಲ್ಪಟ್ಟಿದೆ. ಈ ಪ್ರದೇಶಗಳಲ್ಲಿ ಕಡ್ಡಾಯವಾಗಿ ನಿರ್ಬಂಧಿಸಿರುವ ಕಾಮಗಾರಿಗಳು, ಅನುಮತಿ ನೀಡಬಹುದಾದ ಕಾಮಗಾರಿಗಳ ವಿವರಗಳನ್ನು ಸಂಬಂಧಪಟ್ಟ ವ್ಯಾಪ್ತಿಯ ಅರಣ್ಯಾಧಿಕಾರಿಗಳಿಂದ ಪಡೆದು ಅಗತ್ಯವಿರುವ ಅನುಮತಿಗಳನ್ನು ಮಾತ್ರ ನೀಡುವಂತೆ ತಿಳಿಸಿದರು.ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಶೇ. 79ರಿಂದ 80ರಷ್ಟು ಅರಣ್ಯ ಪ್ರದೇಶವಿದ್ದು, ಪಶ್ಚಿಮ ಘಟ್ಟದಲ್ಲಿ ವಿಶೇಷ ಜೀವ ವೈವಿಧ್ಯತೆ ಇದೆ. ಇವುಗಳನ್ನು ಉಳಿಸಿ ರಕ್ಷಿಸುವಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕಿದೆ. ಹಲವು ಕಂದಾಯ ದಾಖಲೆಗಳಲ್ಲಿ ಅರಣ್ಯ ಭೂಮಿಯನ್ನು ಸರ್ಕಾರ ಎಂದು ದಾಖಲಿಸಿದ್ದು, ಇಂತಹ ಪ್ರಕರಣಗಳ ಕುರಿತಂತೆ ಅರಣ್ಯ ಇಲಾಖೆಯೊಂದಿಗೆ ಜಂಟಿಯಾಗಿ ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಅಂತಹ ಜಮೀನು ಹಂಚಿಕೆ ಮಾಡಿದಲ್ಲಿ ಮುಂದೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದರು.

ಸಭೆಯಲ್ಲಿ ಹಂಗಾಮಿ ಲಾಗಣಿಗೆ ನೀಡಿದ ಪ್ರಕರಣ ಹಾಗೂ ಕಾಯಂ ಲಾಗಣಿ ಮಂಜೂರಿಸಿದ ಪ್ರಕರಣಗಳ ಬಗ್ಗೆ, 1978ರ ಪೂರ್ವದ ಅರಣ್ಯ ಅತಿಕ್ರಮಣ ಸಕ್ರಮ ಕುರಿತು, ಅರಣ್ಯ ಪ್ರದೇಶದ ಇಂಡಿಕರಣ ಬಾಕಿ, ಪರಿಭಾವಿತ ಅರಣ್ಯ ಪ್ರದೇಶಗಳ ವಿವರ, ಬೆಟ್ಟ ಜಮೀನುಗಳ ಬಗ್ಗೆ, ಡಿಸ್ ಫಾರೆಸ್ಟ್ ಜಮೀನು ಬಗ್ಗೆ, ಪರಿಶಿಷ್ಟ ವರ್ಗ ಹಾಗೂ ಒಟಿಎಫ್‌ಟಿ ಅರ್ಜಿಗಳ ಕುರಿತಂತೆ ವಿಸ್ತೃತ ಚರ್ಚೆ ನಡೆಯಿತು.

ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲೆಯ ಎಲ್ಲ ಉಪ ವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರರು ಇದ್ದರು.