ಭೀಮಾ ಕೊರೆಗಾಂವ್ ವಿಜಯೋತ್ಸವ: ನೀಲಿಮಯವಾದ ಚಿಕ್ಕಮಗಳೂರು

| Published : Jan 08 2025, 12:15 AM IST

ಸಾರಾಂಶ

ಚಿಕ್ಕಮಗಳೂರು, ಭೀಮಾ ಕೊರೆಗಾಂವ್ ವಿಜಯೋತ್ಸವ ಅಂಗವಾಗಿ ವಿವಿಧ ದಲಿತ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಮಂಗಳವಾರ ಬೃಹತ್ ಬೈಕ್ ರ್‍ಯಾಲಿ ನಡೆಯಿತು.

ಬೃಹತ್ ಬೈಕ್ ರ್‍ಯಾಲಿ, ಇಂದು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಭೀಮಾ ಕೊರೆಗಾಂವ್ ವಿಜಯೋತ್ಸವ ಅಂಗವಾಗಿ ವಿವಿಧ ದಲಿತ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಮಂಗಳವಾರ ಬೃಹತ್ ಬೈಕ್ ರ್‍ಯಾಲಿ ನಡೆಯಿತು.

ತೊಗರಿಹಂಕಲ್ ಸರ್ಕಲ್‌ನಿಂದ ಆರಂಭವಾದ ಬೈಕ್ ರ್‍ಯಾಲಿಗೆ ಪಟಾಕಿ ಸಿಡಿಸುವ ಮೂಲಕ ಚಾಲನೆ ನೀಡಲಾಯಿತು. ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ ಪರ ಜಯಘೋಷ ಹಾಕಿ ಸಂಭ್ರಮಿಸಿದರು.

ತೊಗರಿಹಂಕಲ್ ವೃತ್ತದಿಂದ ಆರಂಭವಾದ ಬೈಕ್ ರ್‍ಯಾಲಿ ಐ.ಜಿ. ರಸ್ತೆ ಮಾರ್ಗವಾಗಿ ಸಾಗಿ ಟೌನ್ ಕ್ಯಾಂಟಿನ್ ಸರ್ಕಲ್ ಬಳಸಿ ಕೆ.ಇ.ಬಿ. ವೃತ್ತದ ಮೂಲಕ ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆಯಲ್ಲಿ ಸಾಗಿ ಆಜಾದ್ ಮೈದಾನ ತಲುಪಿತು. ನಂತರ ಅಂಬೇಡ್ಕರ್ ರಸ್ತೆ ಮೂಲಕ ಜಿಲ್ಲಾ ಪಂಚಾಯಿತಿ ಕಚೇರಿಗೆ ಸಾಗಿದ ಬೈಕ್ ರ್‍ಯಾಲಿ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ಇರುವ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಯಘೋಷ ಕೂಗಿದರು.

ರ್‍ಯಾಲಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ ಭಾವಚಿತ್ರದ ಮೆರವಣಿಗೆ ನಡೆಯಿತು. ಇಂದು ನಡೆದ ಬೈಕ್ ರ್‍ಯಾಲಿಯಲ್ಲಿ ಎಲ್ಲಾ ದಲಿತ ಸಂಘಟನೆಗಳ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಭಾಗವಹಿಸಿದ್ದರು. ಬುಧವಾರ ಮಧ್ಯಾಹ್ನ ನಗರದಲ್ಲಿ ಬೃಹತ್ ಮೆರವಣಿಗೆ ನಡೆಯಲಿದ್ದು, ತೊಗರಿಹಂಕಲ್ ಸರ್ಕಲ್‌ನಿಂದ ಆರಂಭವಾಗುವ ಮೆರವಣಿಗೆ ಆಜಾದ್ ಪಾರ್ಕ್ ಮೈದಾನದಲ್ಲಿ ಸಮಾಪ್ತಿಗೊಳ್ಳಲಿದೆ. ಸಂಜೆ ಆಜಾದ್‌ಪಾರ್ಕ್ ವೃತ್ತದಲ್ಲಿ ಬಹಿರಂಗ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಜೇವರ್ಗಿಯ ಶ್ರೀ ಜಗದ್ಗುರು ಮರುಳಶಂಕರ ದೇವರ ಗುರುಪೀಠದ ಶ್ರೀ ಸಿದ್ಧಬಸವ ಕಬೀರ ಮಹಾಸ್ವಾಮಿ, ಭೀಮ್ ಆರ್ಮಿ ಸಂಘಟನೆ ಸಂಸ್ಥಾಪಕ ಹಾಗೂ ಉತ್ತರ ಪ್ರದೇಶದ ಲೋಕಸಭಾ ಸದಸ್ಯ ಚಂದ್ರಶೇಖರ್ ಆಜಾದ್ ರಾವಣ್, ತಮಿಳುನಾಡಿನ ತಿರುವಳ್ಳುವರ್ ಕ್ಷೇತ್ರದ ಲೋಕಸಭಾ ಸದಸ್ಯ ಶಶಿಕಾಂತ್ ಸೆಂಥಿಲ್, ಪ್ರಗತಿಪರ ಚಿಂತಕ ಹಾಗೂ ಸಾಮಾಜಿಕ ಹೋರಾಟಗಾರ ಜಕ್ಕಪ್ಪ ಹಾಗೂ ಅಂಬೇಡ್ಕರ್ ವಾದಿ ದು. ಸರಸ್ವತಿ ಸೇರಿ ಹಲವು ಪ್ರಗತಿಪರ ಚಿಂತಕರು ಭಾಗವಹಿಸಲಿದ್ದಾರೆ ಎಂದು ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ಪ್ರಕಟಣೆ ತಿಳಿಸಿದೆ.ಕಾರ್ಯಕ್ರಮದ ಅಂಗವಾಗಿ ನಗರದ ಎಲ್ಲಾ ಮುಖ್ಯ ವೃತ್ತಗಳಲ್ಲಿ ಬ್ಯಾನರ್, ಬಂಟಿಂಗ್‌ಗಳ ಭರಾಟೆ ಜೋರಾಗಿದೆ. ಇಡೀ ಚಿಕ್ಕಮಗಳೂರು ನಗರ ನೀಲಿಮಯವಾಗಿದೆ.

-- ಬಾಕ್ಸ್‌ --ಇಂದು ಮದ್ಯ ಮಾರಾಟ ನಿಷೇಧಭೀಮಾ ಕೊರೇಗಾಂವ್‌ ವಿಜಯೋತ್ಸವದ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಬುಧವಾರ ಬೆಳಿಗ್ಗೆ 6 ಗಂಟೆ ಯಿಂದ ರಾತ್ರಿ 11 ಗಂಟೆವರೆಗೆ ಚಿಕ್ಕಮಗಳೂರು ನಗರ ಹಾಗೂ ಬಸವನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಸುತ್ತ 5 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಾ ನಮೂನೆಯ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಆದೇಶ ಹೊರಡಿಸಿದ್ದಾರೆ.-------ಇಂದು ಕೆಲವೆಡೆ ವಾಹನಗಳ ನಿಲುಗಡೆಚಿಕ್ಕಮಗಳೂರು ನಗರದಲ್ಲಿ ಬುಧವಾರ ಕೊರೆಗಾಂವ್‌ ವಿಜಯೋತ್ಸವದ ಹಿನ್ನಲೆಯಲ್ಲಿ ಮೆರವಣಿಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಸುಗಮ ವಾಹನಗಳ ಸಂಚಾರದ ದೃಷ್ಟಿಯಿಂದ ಕೆಲವೆಡೆ ವಾಹನಗಳ ನಿಲುಗಡೆ ನಿಷೇಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಅವರು ಆದೇಶ ಹೊರಡಿಸಿದ್ದಾರೆ.

ಟೌನ್‌ ಕ್ಯಾಂಟಿನ್‌ ಸರ್ಕಲ್‌ನಿಂದ ಕೆಇಬಿ ವೃತ್ತ, ಹನುಮಂತಪ್ಪ ವೃತ್ತ, ಆಜಾದ್‌ ಪಾರ್ಕ್‌ವರೆಗೆ ಹಾಗೂ ಆಜಾದ್‌ ಪಾರ್ಕ್‌ ಸುತ್ತಲಿನ ಸ್ಥಳದಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಕೆಎಂ ರಸ್ತೆಯಿಂದ ಅಂಬೇಡ್ಕರ್‌ ರಸ್ತೆ ಮೂಲಕ ದೀಪಾ ನರ್ಸಿಂಗ್‌ ಹೋಂ ಕಡೆಗೆ ಏಕಮುಖವಾಗಿ ಚಲಿಸಲು ಅವಕಾಶ ನೀಡಲಾಗಿದೆ.

7 ಕೆಸಿಕೆಎಂ 1ಕೊರೆಗಾಂವ್‌ ವಿಜಯೋತ್ಸವದ ಹಿನ್ನಲೆಯಲ್ಲಿ ಮಂಗಳವಾರ ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಬೈಕ್‌ ರ್‍ಯಾಲಿ ನಡೆಸಿದರು.