ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮವನ್ನು ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಗಮನಹರಿಸಿಲ್ಲ. ಇದರ ವಿರುದ್ಧ ಸೋಮವಾರ ನಗರ ಕ್ಷೇತ್ರದ ಶಾಸಕರ ಕಚೇರಿ ಎದುರು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ನಗರಕ್ಕೆ ಹೆಚ್ಚಿನ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆವು. ಶಾಸಕರೊಂದಿಗೆ ಮಾತನಾಡಿದ್ದೆವು. ಆದರೂ ಈ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಜೊತೆಗೆ ಸುಮಾರು 300 ಕೋಟಿಗೂ ಅಧಿಕ ವೆಚ್ಚವಾದರೂ ಹಳೆಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿಲ್ಲ. ನಮ್ಮ ಒತ್ತಾಯಕ್ಕೆ 400 ಕಂಬಗಳನ್ನು ಮಾತ್ರ ತೆರವುಗೊಳಿಸಿದ್ದು, ಇನ್ನೂ 800 ಕಂಬಗಳನ್ನು ತೆರವುಗೊಳಿಸದೇ ಇದ್ದರೂ ಗುತ್ತಿಗೆದಾರರಿಗೆ ಹೇಗೆ ಹಣವನ್ನು ಬಿಡುಗಡೆ ಮಾಡಿದರು ಎಂದು ಪ್ರಶ್ನೆ ಮಾಡಿದರು.

ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಿರ್ಮಿಸಿರುವ ಶೌಚಾಲಯಗಳು ಸಾರ್ವಜನಿಕ ಬಳಕೆಗೆ ಲಭ್ಯವಾಗಿಲ್ಲ. ಇದರ ಜೊತೆಗೆ ಖಾತೆ ಬದಲಾವಣೆಯ ಶುಲ್ಕದ ಹೆಸರಿನಲ್ಲಿ ಅವಿರತವಾಗಿ ನಡೆಯುತ್ತಿರುವ ಅಕ್ರಮ ಮತ್ತು ಅತಿಯಾದ ಶುಲ್ಕ ವಸೂಲಾತಿ ನಿಲ್ಲಬೇಕೆಂದು ಒತ್ತಾಯಿಸಿದ್ದೆವು. ಇದೂ ಜಾರಿಯಾಗಿಲ್ಲ. ಶಿವಮೊಗ್ಗದ ನಗರಾಭಿವೃದ್ಧಿ ಪ್ರಾಧಿಕಾರದ ಬಳಿ ನಿರ್ಮಿಸಿರುವ ಶೆಡ್ಡನ್ನು ತೆರವುಗೊಳಿಸಬೇಕೆಂದು ಹಲವು ಭಾರಿ ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಿದ್ದರೂ ಇನ್ನೂ ತೆರವುಗೊಳಿಸಿಲ್ಲ ಎಂದು ದೂರಿದರು.

ಇಡೀ ಶಿವಮೊಗ್ಗ ನಗರ ಸಮಸ್ಯೆಗಳಿಂದ ಕೂಡಿದೆ. ನಮ್ಮ ಹೋರಾಟಗಳಿಗೆ ಬೆಲೆ ಇಲ್ಲದಂತಾಗಿದೆ. ಯಾರೂ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಆದ್ದರಿಂದ ಆಡಳಿತ ವೈಫಲ್ಯವನ್ನು ವಿರೋಧಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಒಂದು ವೇಳೆ ಕಾಲಮಿತಿಯೊಳಗೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂಬರುವ ದಿನಗಳಲ್ಲಿ ಪಾಲಿಕೆ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಅದಕ್ಕೂ ಉತ್ತರ ಸಿಗದಿದ್ದರೆ ಪ್ರತಿಭಟನಾ ಮೆರವಣಿಗೆ, ರಸ್ತೆತಡೆ, ಕಪ್ಪುಪಟ್ಟಿ ಪ್ರದರ್ಶನ, ಕಚೇರಿಗಳಿಗೆ ಮುತ್ತಿಗೆ ಮುಂತಾದ ತೀವ್ರ ಸ್ವರೂಪದ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.


ಪ್ರತಿಭಟನೆಯಲ್ಲಿ ಒಕ್ಕೂಟದ ಪ್ರಮುಖರಾದ ಕೆ.ವಿ. ವಸಂತಕುಮಾರ್, ಎ.ಸತೀಶ್‌ಕುಮಾರ್ ಶೆಟ್ಟಿ, ಎಸ್.ಬಿ. ಅಶೋಕ್‌ಕುಮಾರ್ ಗಾಂಧಿಬಸಪ್ಪ, ವಿನೋದ್ ಪೈ, ನಾಗೇಶ್, ಜನಮೇಜಿರಾವ್, ಜನಾರ್ಧನ ಪೈ, ನೇತಾಜಿ, ಗೋಪಿನಾಥ್, ಭಾಸ್ಕರ ಶೆಟ್ಟಿ, ಡಾ. ಶ್ರೀನಿವಾಸ್, ನಾಗರಾಜ್ ಘೋರೆ, ಸೀತಾರಾಮ್, ದಿಲೀಪ್‌ನಾಡಿಗ್, ಪ್ರಕಾಶ್, ಸುಬ್ರಹ್ಮಣ್ಯ, ನಾಗರಾಜ್ ಶೆಟ್ಟರ್ ಸೇರಿದಂತೆ ಹಲವರಿದ್ದರು.

ಶೀಘ್ರ ಸಮಸ್ಯೆ ಬಗೆಹರಿಸುವೆ: ಚನ್ನಬಸಪ್ಪ

ಸಾರ್ವಜನಿಕರ ಬಗ್ಗೆ ತಾವು ನಡೆಸುತ್ತಿರುವ ಹೋರಾಟದ ಬಗ್ಗೆ ನನ್ನ ಗಮನದಲ್ಲಿದೆ. ನಾನು ಕೂಡ ಹೋರಾಟದಿಂದಲೇ ಬಂದವನು. ಈಗಾಗಲೇ ಒಕ್ಕೂಟದ ಜೊತೆ ವಿವಿಧ ಸ್ತರದ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಆ ಸಭೆಗಳಿಗೆ ಒಕ್ಕೂಟದ ಪದಾಧಿಕಾರಿಗಳನ್ನೂ ಆಹ್ವಾನಿಸಿದ್ದೆ. ಅವರು ಆಗಮಿಸಿ ಸಮಸ್ಯೆಗಳನ್ನು ವಿವರಿಸಿದ್ದರು. ಅನೇಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಉಳಿದ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಜೊತೆ ಮತ್ತೆ ಸಭೆ ನಡೆಸಿ ಆದಷ್ಟು ಬೇಗ ಬಗೆಹರಿಸುವುದಾಗಿ ಮನವಿ ಸ್ವೀಕರಿಸಿದ ಶಾಸಕ ಎಸ್.ಎನ್. ಚನ್ನಬಸಪ್ಪ ಭರವಸೆ ನೀಡಿದರು.