ಭದ್ರಾ ಡ್ಯಾಂನಿಂದ ಮಳೆಗಾಲದ ಬೆಳೆಗೆ ಆ.15ರೊಳಗೆ ಬಲದಂಡೆ ನಾಲೆಗಳಿಗೆ ನೀರು ಹರಿಸದಿದ್ದರೆ ಆ.16ರಿಂದಲೇ ತೀವ್ರ ಸ್ವರೂಪದ ಹೋರಾಟಕ್ಕೆ ಸಜ್ಜಾಗಲು ಭಾರತೀಯ ರೈತ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ನಡೆದ ರೈತ ಮುಖಂಡರು, ರೈತರು, ಅಚ್ಚುಕಟ್ಟು ರೈತರ ಸಭೆಯಲ್ಲಿ ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು.

- ಆ.15ರೊಳಗೆ ನೀರು ಬಿಡಲು ತಾಕೀತು, ಸ್ಪಂದಿಸದಿದ್ದರೆ ಆ.16ರಿಂದಲೇ ಹೋರಾಟ

- - - - ಅಚ್ಚುಕಟ್ಟು ರೈತರು ಪ್ರತಿ ಸಲ ನೀರಿಗಾಗಿ ಹೋರಾಟ ನಡೆಸುವುದೇನೂ ಹೊಸದಲ್ಲ

- ಪ್ರೊ. ಸಿ.ನರಸಿಂಹಪ್ಪ, ಎಸ್.ಎ. ರವೀಂದ್ರನಾಥ್‌ ನೇತೃತ್ವದಲ್ಲಿ ಅಚ್ಚುಕಟ್ಟು ರೈತರ ಸಭೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಡ್ಯಾಂನಿಂದ ಮಳೆಗಾಲದ ಬೆಳೆಗೆ ಆ.15ರೊಳಗೆ ಬಲದಂಡೆ ನಾಲೆಗಳಿಗೆ ನೀರು ಹರಿಸದಿದ್ದರೆ ಆ.16ರಿಂದಲೇ ತೀವ್ರ ಸ್ವರೂಪದ ಹೋರಾಟಕ್ಕೆ ಸಜ್ಜಾಗಲು ಭಾರತೀಯ ರೈತ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ನಡೆದ ರೈತ ಮುಖಂಡರು, ರೈತರು, ಅಚ್ಚುಕಟ್ಟು ರೈತರ ಸಭೆಯಲ್ಲಿ ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು.

ನಗರದ ಹೊರವಲಯದ ಸರ್ಕ್ಯೂಟ್ ಹೌಸ್ ಆವರಣದಲ್ಲಿ ಒಕ್ಕೂಟದ ಹಿರಿಯ ಧುರೀಣರಾದ ನೀರಾವರಿ ತಜ್ಞ ಪ್ರೊ. ಸಿ.ನರಸಿಂಹಪ್ಪ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ಒಕ್ಕೂಟದ ಅಧ್ಯಕ್ಷ ಎಚ್.ಆರ್. ಲಿಂಗರಾಜ ಇತರೆ ಮುಖಂಡರ ನೇತೃತ್ವದ ಸಭೆಯಲ್ಲಿ ಭದ್ರಾ ನಮ್ಮ ಹಕ್ಕು, ಮಳೆಗಾಲದ ಬೆಳೆಗೆ ನೀರನ್ನು ಬಿಡಲೇಬೇಕು ಎಂಬ ಏಕೈಕ ಬೇಡಿಕೆಯೊಂದಿಗೆ ರೈತರು ಇನ್ನು 5 ದಿನದಲ್ಲಿ ನಾಲೆಗೆ ನೀರು ಹರಿಸದಿದ್ದರೆ, ಆ.16ರಿಂದಲೇ ತೀವ್ರ ಸ್ವರೂಪದ ಹೋರಾಟಕ್ಕಿಳಿಸಲು ತೀರ್ಮಾನಿಸಿದರು.

ಹಿರಿಯ ರೈತ ನಾಯಕ ಪ್ರೊ. ಸಿ.ನರಸಿಂಹಪ್ಪ ಮಾತನಾಡಿ, ಈ ಬಾರಿ ಮಳೆ ಕೈಕೊಟ್ಟಿದ್ದು, ಅರ್ಧ ಮಳೆಗಾಲವೇ ಮುಗಿದುಹೋಗಿದೆ. ಇನ್ನೂ ಉತ್ತಮ ಮಳೆಯಾಗುವ ಭರವಸೆ ಇದ್ದೇ ಇದೆ. ಈಗ ನೀರು ಬಿಡುವುದಿಲ್ಲವೆಂದರೆ ಅದು ಸರ್ಕಾರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ಹೇಳಿಕೆಯಾಗುತ್ತದೆ. ಈ ಹಿಂದಿನಿಂದಲೂ ಭದ್ರಾ ನೀರಿಗಾಗಿ ನಾವು ದಾವಣಗೆರೆ ಭಾಗದಲ್ಲಿ ತೀವ್ರ ಸ್ವರೂಪದ ಹೋರಾಟಗಳನ್ನು ನಡೆಸಿದ ಇತಿಹಾಸವಿದೆ. ಈಗಲೂ ನೀರಿಗಾಗಿ ಹೋರಾಟ ನಡೆಸುತ್ತೇವೆ. ಮುಂದೆಯೂ ನಮ್ಮ ಹಕ್ಕಿನ ನೀರಿಗಾಗಿ ನಮ್ಮ ಹೋರಾಟ ಇದ್ದೇ ಇರುತ್ತದೆ ಎಂದು ಎಚ್ಚರಿಸಿದರು.

ಹರಿಹರದ ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ ಮಾತನಾಡಿ, ತುಂಗಾ ಮತ್ತು ಭದ್ರಾ ಡ್ಯಾಂನ ಜಲಾನಯನ ಪ್ರದೇಶದಲ್ಲಿ ಆಗುತ್ತಿರುವ ಮಳೆಯಿಂದಾಗಿ ಡ್ಯಾಂಗೆ ಒಳಹರಿವು ಉತ್ತಮವಾಗಿದೆ. ಸೆ.31ರವರೆಗೂ ಒಳಹರಿವು ಮುಂದುವರಿಯುವ ವಿಶ್ವಾಸವಿದೆ. ಬೇಸಿಗೆಯಲ್ಲೂ ಒಳಹರಿವು ಇರುತ್ತದೆ. ನೀರಿನ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ದಪ್ಪ ಚರ್ಮದ ಅಧಿಕಾರಿ ವರ್ಗಕ್ಕೆ ಬಿಸಿ ಮುಟ್ಟಿಸುವ ಕೆಲಸವು ನಮ್ಮ ರೈತರಿಂದ ಮೊದಲು ಆಗಬೇಕಾಗಿದೆ. ಅಚ್ಚುಕಟ್ಟು ರೈತರ ಹಿತ ಕಾಯಬೇಕಾದ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಆಕ್ಷೇಪಿಸಿದರು.

ಡ್ಯಾಂನಲ್ಲಿ 140-150 ಅಡಿ ನೀರು ಇದ್ದಾಗಲೇ ಯಾವುದೇ ಷರತ್ತು ವಿಧಿಸದೇ ನೀರು ಹರಿಸಲಾಗುತ್ತಿತ್ತು. ಈಗ ಮಳೆಗಾಲದ ಬೆಳೆಗೆ ನೀರು ಪಡೆಯಲು ಹೋರಾಟ ನಡೆಸಬೇಕಾದ ದುಸ್ಥಿತಿಗೆ ರೈತರನ್ನು ಸರ್ಕಾರ ತಂದು ನಿಲ್ಲಿಸಿದೆ. ಹಿರಿಯ ರೈತ ನಾಯಕರು ಕರೆ ಕೊಟ್ಟಾಗ ಅಚ್ಚುಕಟ್ಟು ರೈತರು, ಸಮಸ್ತ ರೈತರು ಹೋರಾಟಕ್ಕೆ ಮುಂದಾಗಬೇಕು. ಜಿಲ್ಲೆಯಲ್ಲಿ ಇಬ್ಬರು ಸಚಿವರು, ಹಲವಾರು ಕಾಂಗ್ರೆಸ್ ಶಾಸಕರಿದ್ದಾರೆ. ಈ ಎಲ್ಲರೂ ಸರ್ಕಾರದ ಮೇಲೆ ಒತ್ತಡ ಹೇರಿ, ಭದ್ರಾ ಡ್ಯಾಂನಿಂದ ನಾಲೆಗಳಿಗೆ ನೀರು ಹರಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್ ಮುಖಂಡ ಬೆಳವನೂರು ಬಿ.ನಾಗೇಶ್ವರ ರಾವ್ ಮಾತನಾಡಿ, ಭದ್ರಾ ಡ್ಯಾಂನಲ್ಲಿ ಸಾಕಷ್ಟು ನೀರು ಸಂಗ್ರಹವಿದೆ. ಈಗಾಗಲೇ ದವಸ, ಧಾನ್ಯಗಳ ಬೆಲೆ ಏರಿಕೆಯಾಗುತ್ತಿದ್ದು, ಈಗ ನೀರು ಬಿಡದಿದ್ದರೆ ಅಕ್ಕಿ ದರವೂ ಹೆಚ್ಚುತ್ತದೆ. ಡ್ಯಾಂನಲ್ಲಿ ಸಮರ್ಪಕ ನೀರು ಸಂಗ್ರಹವಾಗಿದ್ದು, ರೈತರಿಗೆ ಅಗತ್ಯವಿದ್ದಾಗ ನೀರು ಹರಿಸದಿದ್ದರೆ ನೀರಾವರಿ ಇಲಾಖೆ ಅಧಿಕಾರಿಗಳಾದರೂ ಯಾಕೆ ಇರಬೇಕು? ರೈತರು ಬೀದಿಗಿಳಿಯದೇ ಸರ್ಕಾರವಾಗಲೀ, ನೀರಾವರಿ ಅಧಿಕಾರಿಗಳು, ಕಾಡಾ ಅಧಿಕಾರಿಗಳು ನೀರು ಹರಿಸುವ ಸಾಧ್ಯತೆ ಇಲ್ಲ. ಮತ್ತೆ ಅಚ್ಚುಕಟ್ಟು ರೈತರು ಬೀದಿಗಿಳಿದು ಹೋರಾಡಬೇಕಾದ ಅನಿವಾರ್ಯತೆ ತಂದೊಡ್ಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಯಕೊಂಡದ ಬಿಜೆಪಿ ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಮಾತನಾಡಿ, ದಾವಣಗೆರೆ ಜಿಲ್ಲೆಯ ಸಚಿವರಿಗೆ ರೈತರೆಂದರೆ ಅಸಡ್ಡೆಯಾದಂತಿದೆ. ರೈತರು ಹೋರಾಟ ನಡೆಸಿದರೂ ಸಹಿತ ಸ್ಪಂದಿಸುತ್ತಿಲ್ಲ. ರೈತರ ಸಂಕಷ್ಟಕ್ಕೆ ನಾವು ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ಆ.15ರವರೆಗೆ ಕಾದು ನೋಡುತ್ತೇವೆ. ಅಷ್ಟರಲ್ಲಿ ಭದ್ರಾ ಡ್ಯಾಂನಿಂದ ನಾಲೆಗೆ ನೀರು ಹರಿಸದಿದ್ದರೆ, ಆ.16ರ ಬೆಳಗ್ಗೆಯಿಂದಲೇ ನಾಲೆಗೆ ನೀರು ಹರಿಸುವವರೆಗೂ ನಿರಂತರ ಹೋರಾಟ ನಡೆಸುತ್ತೇವೆ. ಇನ್ನಾದರೂ ಸರ್ಕಾರ ಎಚ್ಚೆತ್ತು, ಭದ್ರಾ ನಾಲೆಗಳಿಗೆ ನೀರು ಹರಿಸುವ ಕೆಲಸ ಮಾಡಲಿ ಎಂದು ತಾಕೀತು ಮಾಡಿದರು.

ಹರಿಹರ ಶಾಸಕ ಬಿ.ಪಿ.ಹರೀಶ, ಒಕ್ಕೂಟದ ಕಾರ್ಯದರ್ಶಿ ಎ.ಎಂ.ಮಂಜುನಾಥ, ಮುಖಂಡರಾದ ಆವರಗೊಳ್ಳ ಬಿ.ಎಂ.ಷಣ್ಮುಖಯ್ಯ, ಬಿ.ಎಂ.ಸತೀಶ ಕೊಳೇನಹಳ್ಳಿ, ಲೋಕಿಕೆರೆ ನಾಗರಾಜ, ಮಾಜಿ ಮೇಯರ್ ಕುಂದುವಾಡ ಎಚ್.ಎನ್.ಗುರುನಾಥ, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡ ಎಚ್.ಜಿ.ಗಣೇಶಪ್ಪ, ಕುಂದುವಾಡ ಜಿಮ್ಮಿ ಹನುಮಂತಪ್ಪ, ಬಿಜೆಪಿ ಉತ್ತರ ಅಧ್ಯಕ್ಷ ಬಾತಿ ಶಂಕರಮೂರ್ತಿ ಸೇರಿದಂತೆ ನೂರಾರು ರೈತರು ಸಭೆಯಲ್ಲಿದ್ದರು.

- - -

(ಬಾಕ್ಸ್‌-1)

* ಒಕ್ಕೂಟದ ಸಭೆಯಲ್ಲಿ ರೈತರಿಂದ ಭಿನ್ನ ಅಭಿಪ್ರಾಯ!

- ಈಗ ನೀರು ಬಿಟ್ಟರೆ ಬೇಸಿಗೆ ಹಂಗಾಮಿನಲ್ಲಿ ತೊಂದರೆಯಾಗುವ ಅಪಾಯ ದಾವಣಗೆರೆ: ಭದ್ರಾ ಡ್ಯಾನಿಂದ ನೀರು ಹರಿಸುವ ವಿಚಾರದಲ್ಲಿ ಕೆಲ ರೈತ ಮುಖಂಡರಿಂದ ಭಿನ್ನ ಅಭಿಪ್ರಾಯಗಳೂ ವ್ಯಕ್ತವಾದ ಘಟನೆ ಸೋಮವಾರ ನಡೆಯಿತು.

ನಗರದ ಸರ್ಕ್ಯೂಟ್ ಹೌಸ್ ಪ್ರವೇಶ ದ್ವಾರದ ಬಳಿ ನಡೆದ ಸಭೆಯಲ್ಲಿ, ಭದ್ರಾ ಡ್ಯಾಂನಿಂದ ಈಗ ನಾಲೆಗೆ ನೀರು ಹರಿಸಿದರೆ ಶೇ.80ರಷ್ಟು ರೈತರು ಬತ್ತದ ಬೀಜ ಚೆಲ್ಲುತ್ತಾರೆ. ಸೆಪ್ಟಂಬರ್‌ಗೆ ನಾಟಿ ಮಾಡುತ್ತಾರೆ. ಈ ಬತ್ತದ ಕೊಯ್ಲು ಡಿಸೆಂಬರ್ ವೇಳೆಗೆ ಮುಗಿಯುವವರೆಗೂ ನೀರು ಹರಿಸಬೇಕಾಗುತ್ತದೆ. ಈಗ ಡ್ಯಾಂ ಖಾಲಿಯಾಗಿ ಮುಂದಿನ ಬೇಸಿಗೆ ಹಂಗಾಮಿಗೆ ನೀರು ಸಿಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಲ್ಲದೇ, ಬೆಳೆದು ನಿಂತ ತೋಟಗಳು ಒಣಗುತ್ತವೆ. ಈ ಕಾರಣಕ್ಕೆ ಈಗ ನೀರು ಬಿಡದೇ ಬೇಸಿಗೆ ಬೆಳೆಗೆ ನೀರು ಬಿಟ್ಟರೆ ಹೆಚ್ಚು ಅನುಕೂಲವಾಗುತ್ತದೆ. ಡ್ಯಾಂನಲ್ಲಿ 130 ದಿನಕ್ಕೆ ಆಗುವಷ್ಟು ನೀರು ಸಂಗ್ರಹ ಇಟ್ಟುಕೊಂಡು, ಮುಂದಿನ ಬೇಸಿಗೆ ಹಂಗಾಮಿನಲ್ಲಿ ಜನವರಿ 10ರಿಂದ ಮೇ ತಿಂಗಳ ಕೊನೆಯವರೆಗೂ ನೀರು ಕೊಟ್ಟರೆ ತೋಟಗಳು ಉಳಿಯುತ್ತವೆ ಎಂದು ಅನೇಕ ರೈತರು ತಿಳಿಸಿದರು.

ಸದ್ಯ 8440 ಕ್ಯುಸೆಕ್ ನೀರು ಒಳಹರಿವು ಇದೆ. ಆಶ್ಲೇಷ ಮಳೆ ಶುರುವಾಗಿ ವಾರವೇ ಕಳೆದರೂ ನಿರೀಕ್ಷೆಯಂತೆ, ವಾಡಿಕೆಯಂತೆ ಮಳೆಯಾಗುತ್ತಿಲ್ಲ. ಹಾಗಾಗಿ, ಈಗ ನೀರು ಬಿಡುವಂತೆ ಒತ್ತಾಯ ಮಾಡುವ ಮುನ್ನ ಬೇಸಿಗೆ ದಿನಗಳನ್ನು, ತೋಟದ ಬೆಳೆಗಳನ್ನೂ ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಣಯ ಕೈಗೊಳ್ಳುವಂತೆ ಕೆಲವು ರೈತರು ಅಭಿಪ್ರಾಯ ವ್ಯಕ್ತಪಡಿಸಿದರು.

ಅಂತಿಮವಾಗಿ ಮಳೆಗಾಲದ ಬೆಳೆಗೆ ಈಗ ನೀರು ಹರಿಸಲು ಸರ್ಕಾರ ಮುಂದಾಗಬೇಕು. ನೀರಿಗಾಗಿ ಹೋರಾಟವನ್ನೂ ಮಾಡೋಣ ಎಂಬ ನಿರ್ಣಯಕ್ಕೆ ಬರಲಾಯಿತು.

- - -

(ಬಾಕ್ಸ್‌-2)

* ವೈಜ್ಞಾನಿಕವಾಗಿ ನೀರು ನಿರ್ವಹಣೆ ಮಾಡಬೇಕು

ಭದ್ರಾ ಡ್ಯಾಂನಲ್ಲಿ ಸದ್ಯ 170.6 ಅಡಿ ನೀರು ಇದ್ದು, ಅಚ್ಚುಕಟ್ಟು ಕೊನೆಯ ಭಾಗದ ರೈತರು ಒಂದೂವರೆ ದಶಕದಿಂದ ನೀರಾವರಿ ಸೌಲಭ್ಯ ವಂಚಿತರಾಗಿದ್ದಾರೆ. ಕುಂದುವಾಡ, ಹಳೆಬಾತಿ, ಶಂಶೀಪು, ಬನ್ನಿಕೋಡು, ಮಲೆಬೆನ್ನೂರು ಸೇರಿದಂತೆ ಹಲವಾರು ಗ್ರಾಮಗಳಿಗೆ ಡ್ಯಾಂ ತುಂಬಿದ್ದಾಗಲೂ ನೀರು ಸಿಕ್ಕಿಲ್ಲ. ಹೀಗಾದರೆ ರೈತರ ಬದುಕು ಸಂಪೂರ್ಣ ನಾಶವಾಗುತ್ತದೆ. ಮಳೆಯನ್ನೇ ನಂಬಿ, ಬೆಳೆ ಬೆಳೆಯಬೇಕಾದ ಸ್ಥಿತಿಗೆ ಇದು ತಂದು ನಿಲ್ಲಿಸಿದೆ. ಕೊನೆ ಭಾಗದ ರೈತರಿಗೂ ನೀರು ತಲುಪುವಂತೆ ಅಧಿಕಾರಿಗಳು ವೈಜ್ಞಾನಿಕವಾಗಿ ನೀರು ನಿರ್ವಹಣೆ ಮಾಡಬೇಕು. ಆಗ ಮಾತ್ರ ನೀರಾವರಿ ಯೋಜನೆ ನಿಜವಾದ ಉದ್ದೇಶ ಈಡೇರಿದಂತಾಗುತ್ತದೆ. ಭದ್ರಾ ಅಚ್ಚುಕಟ್ಟು ರೈತರ ಹಿತ ಕಾಯುವ ಕೆಲಸ ಸರ್ಕಾರ, ಅಧಿಕಾರಿಗಳು ಮಾಡಲಿ ಎಂದು ರೈತ ಮುಖಂಡರು ಒತ್ತಾಯಿಸಿದರು.

- - -

-(ಫೋಟೋಗಳಿವೆ)