ತುಮಕೂರು ಜಿಲ್ಲೆಗೆ ಹೇಮಾವತಿ ನದಿ ನೀರನ್ನು ಕಾಲುವೆ ಮೂಲಕ ಇದೇ ಶುಕ್ರವಾರದೊಳಗೆ ಹರಿಸದಿದ್ದಲ್ಲಿ ಪುನಃ ಸೋಮವಾರದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎನ್ ಡಿ ಎ ಮುಖಂಡರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಹೇಮಾವತಿ ನೀರನ್ನು ಕೆನಾಲ್‌ ಮೂಲಕ ಹರಿಸಬೇಕು ಅಲ್ಲದೇ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಸೋಮವಾರ ಪ್ರತಿಭಟನೆ ನಡೆಸಿದವು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತುಮಕೂರು ಜಿಲ್ಲೆಗೆ ಹೇಮಾವತಿ ನದಿ ನೀರನ್ನು ಕಾಲುವೆ ಮೂಲಕ ಇದೇ ಶುಕ್ರವಾರದೊಳಗೆ ಹರಿಸದಿದ್ದಲ್ಲಿ ಪುನಃ ಸೋಮವಾರದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎನ್ ಡಿ ಎ ಮುಖಂಡರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಹೇಮಾವತಿ ನೀರನ್ನು ಕೆನಾಲ್‌ ಮೂಲಕ ಹರಿಸಬೇಕು ಅಲ್ಲದೇ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಸೋಮವಾರ ಪ್ರತಿಭಟನೆ ನಡೆಸಿದವು.

ಜೆಡಿಎಸ್ ನ ಮುಖಂಡರು ಮತ್ತು ಕಾರ್ಯಕರ್ತರು ದಬ್ಬೇಘಟ್ಟ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿಯ ಮುಂದೆ ಶಾಸಕ ಎಂ.ಟಿ.ಕೃಷ್ಣಪ್ಪನವರ ನೇತೃತ್ವದಲ್ಲಿ ಜಮಾಯಿಸಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ಕಚೇರಿ ಮುಂದೆ ಮಾಜಿ ಶಾಸಕರಾದ ಮಸಾಲಾ ಜಯರಾಮ್ ಮತ್ತು ಎಂ.ಡಿ.ಲಕ್ಷ್ಮೀನಾರಾಯಣ್ ರವರ ನೇತೃತ್ವದಲ್ಲಿ ಜಮಾವಣೆಗೊಂಡಿದ್ದರು. ಎರಡೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹೇಮಾವತಿ ನಾಲಾ ಕಚೇರಿಯತ್ತ ತೆರಳಿ ಕಚೇರಿ ಮುಂಭಾಗ ಕೆಲ ಕಾಲ ಪ್ರತಿಭಟನೆ ನಡೆಸಿದರು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಜಿಲ್ಲೆ ಬರಗಾಲದಿಂದ ತತ್ತರಿಸಿದೆ. ಎಲ್ಲಾ ಕೆರೆ ಕಟ್ಟೆಗಳು ಒಣಗಿವೆ. ಹೇಮಾವತಿ ಡ್ಯಾಂ ನಲ್ಲಿ ಸಾಕಷ್ಟು ನೀರಿದೆ. ಹಾಗಾಗಿ ಕೂಡಲೇ ಹೇಮಾವತಿ ನದಿ ನೀರನ್ನು ಎಲ್ಲಾ ಕಾಲುವೆಗಳ ಮೂಲಕ ಹರಿಯಬಿಡಬೇಕು ಎಂದು ಆಗ್ರಹಿಸಿದರು. ಮಾಜಿ ಶಾಸಕ ಮಸಾಲಾ ಜಯರಾಮ್ ಮಾತನಾಡಿ ಹೇಮಾವತಿ ನೀರನ್ನು ಕೂಡಲೇ ಬಿಡುಗಡೆಗೊಳಿಸದಿದಲ್ಲಿ ಗೊರೂರು ಡ್ಯಾಂ ತನಕ ಪಾದಯಾತ್ರೆ ಮಾಡಲು ಎನ್ ಡಿ ಎ ಕಾರ್ಯಕರ್ತರು ಸಿದ್ದವಿದ್ದಾರೆ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿದೆ. ರೈತರ ಪಂಪ್ ಸೆಟ್ ಗಳಿಗೆ 7 ಗಂಟೆಗಳ ಕಾಲ ಸತತವಾಗಿ ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು. ಜಿಲ್ಲೆಯ ನೀರನ್ನು ಎಕ್ಸ್ ಪ್ರೆಸ್ ಕೆನಾಲ್ ಮೂಲಕ ಬೇರೆ ಜಿಲ್ಲೆಗಳಿಗೆ ಸಾಗಿಸಲು ಪ್ರಯತ್ನಿಸುತ್ತಿರುವ ರಾಜ್ಯ ಸರ್ಕಾರ ಕೂಡಲೇ ಯೋಜನೆಯನ್ನು ರದ್ದುಪಡಿಬೇಕೆಂದು ಆಗ್ರಹಿಸಿದರು.

ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ಗುಬ್ಬಿಯ ಬಿಜೆಪಿ ಮುಖಂಡ ದಿಲೀಪ್ ಮಾತನಾಡಿ, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು, ಹೇಮಾವತಿ ನದಿ ನೀರನ್ನು ಕಾಲುವೆಗಳ ಮೂಲಕ ಹರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸೋಮವಾರದಿಂದ ಅಹೋ ರಾತ್ರಿ ಧರಣಿ ಮಾಡುವುದಾಗಿ ತಿಳಿಸಿದರು.

ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೇಮಾವತಿ ನಾಲಾ ಸೂಪರಿಂಟೆಂಡೆಂಟ್ ಎಂಜಿನಿಯರ್ ಶ್ರೀನಿವಾಸ್ ಶುಕ್ರವಾರದಂದು ನೀರಾವರಿ ಸಲಹಾ ಸಮಿತಿಯ ಸಭೆ ಇದೆ. ಅಂದು ಹೇಮಾವತಿ ನದಿ ನೀರನ್ನು ಕಾಲುವೆಗಳ ಮೂಲಕ ಬಿಡುವ ನಿರ್ಧಾರವಾಗಲಿದೆ. ಅಲ್ಲಿಯವರೆಗೆ ತಾಳ್ಮೆಯಿಂದ ಇರುವಂತೆ ಎನ್ ಡಿ ಎ ನಾಯಕರಿಗೆ ಮನವಿ ಮಾಡಿಕೊಂಡರು. ಅವರು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಇಂದಿನಿಂದ ಆರಂಭವಾಗಬೇಕಿದ್ದ ಅಹೋ ರಾತ್ರಿ ಧರಣಿಯನ್ನು ಕೈ ಬಿಡಲಾಯಿತು.

ಈ ವೇಳೆ ತಾಲೂಕು ಜೆ ಡಿ ಎಸ್ ಅಧ್ಯಕ್ಷ ಸಾದರಹಳ್ಳಿ ದೊಡ್ಡೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಡೊಂಕಿಹಳ್ಳಿ ಪ್ರಕಾಶ್, ಜೆಡಿಎಸ್ ನ ವಕ್ತಾರ ವೆಂಕಟಾಪುರ ಯೋಗೀಶ್ ಸೇರಿದಂತೆ ಎರಡೂ ಪಕ್ಷಗಳ ಮುಖಂಡರು ಭಾಗಿಯಾಗಿದ್ದರು.