- ಮಾಯಕೊಂಡ ಕಾಂಗ್ರೆಸ್ ಮುಖಂಡರ ನಿಯೋಗದಿಂದ ಡಿಕೆಶಿ, ಸಿದ್ದುಗೆ ಮನವಿ - ಎಡಗೈ ಕೋಟಾದಡಿ ಬಸವಂತಪ್ಪಗೆ ಸಚಿವ ಸ್ಥಾನಕ್ಕೆ ಎಚ್.ಆಂಜನೇಯ ಒತ್ತಡ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಪರಿಶಿಷ್ಟ ಜಾತಿಗೆ ಮೀಸಲಾದ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ, ಮಾದಿಗ ಸಮುದಾಯದ ಮುಖಂಡ ಕೆ.ಎಸ್.ಬಸವಂತಪ್ಪ ಅವರಿಗೆ ಸಚಿವ ಸ್ಥಾನ ನೀಡುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮಾಜಿ ಸಚಿವ ಎಚ್.ಆಂಜನೇಯ ಹಾಗೂ ಕ್ಷೇತ್ರದ ಕಾಂಗ್ರೆಸ್ ಮುಖಂಡರ ನಿಯೋಗ ಬೆಂಗಳೂರಿನಲ್ಲಿ ಭೇಟಿ ಮಾಡಿ, ಚರ್ಚಿಸಿತು.ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಮುಖಂಡರ ನಿಯೋಗ, ಮಾಯಕೊಂಡ ಕ್ಷೇತ್ರದ ಜನರ ಮೆಚ್ಚಿನ ಶಾಸಕನಾಗಿ, ಜನರ ನೋವು, ನಲಿವುಗಳಿಗೆ ಕೆ.ಎಸ್.ಬಸವಂತಪ್ಪ ಸ್ಪಂದಿಸುತ್ತಿದ್ದಾರೆ. ಅವರಿಗೆ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದರು. ಮತ್ತೊಂದು ಕಡೆ ಶಾಸಕ ಕೆ.ಎಸ್.ಬಸವಂತಪ್ಪ ಸಮೇತರಾಗಿ ಮಾಜಿ ಸಚಿವ ಎಚ್.ಆಂಜನೇಯ ಭೇಟಿ ಮಾಡಿ, ಬಸವಂತಪ್ಪಗೆ ಸಚಿವ ಸ್ಥಾನ ನೀಡುವಂತೆ ಸಿಎಂ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯಗೆ ಒತ್ತಾಯಿಸಿದ್ದಾರೆ.
ಕ್ಷೇತ್ರದ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿರುವ ಶಾಸಕ ಕೆ.ಎಸ್. ಬಸವಂತಪ್ಪಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡಬೇಕು. ಕ್ಷೇತ್ರದ ಜಿಪಂ ಸದಸ್ಯರಾಗಿದ್ದ ಅವಧಿಯಲ್ಲೇ ಜನಪರ ಕೆಲಸಗಳ ಮೂಲಕ ಜನರ ಮನಸ್ಸಿನಲ್ಲಿ ಬೇರೂರಿರುವಂತಹ ವ್ಯಕ್ತಿ ಬಸವಂತಪ್ಪ. ವಿಧಾನಸಭೆಗೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಸೋತರೂ ನಿರುತ್ಸಾಹಗೊಳ್ಳದೇ, ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕ ಕಾಯ್ದುಕೊಂಡು ಬಂದಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿ, ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಯಾರೇ ಮೃತಪಟ್ಟಿದ್ದರೂ ಸುದ್ದಿ ತಿಳಿದ ಕೂಡಲೇ ಅಲ್ಲಿಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳುವ ಜೊತೆಗೆ ಅಗತ್ಯ ನೆರವು ನೀಡುವ ಮೂಲಕ ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ತಿಳಿಸಿದರು.
ಮಾಯಕೊಂಡ ಕ್ಷೇತ್ರದಲ್ಲಿ ‘ಆಂಬ್ಯುಲೆನ್ಸ್ ಬಸವಂತಪ್ಪ’ ಎಂಬ ಹೆಸರಿನಿಂದ ಜನಪ್ರಿಯರಾದವರು ಮಾಯಕೊಂಡ ಶಾಸಕ. ಪ್ರತಿದಿನ ಹತ್ತಾರು ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಖುದ್ದಾಗಿ ಆಲಿಸಿ, ಸ್ಥಳದಲ್ಲೇ ಹಲವಾರು ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸ ಶಾಸಕ ಬಸವಂತಪ್ಪ ಮಾಡುತ್ತಿದ್ದಾರೆ. ಹೀಗಾಗಿ, 2ನೇ ಅವಧಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಸವಂತಪ್ಪ ಅವರಿಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಮುಖಂಡರು ಒಕ್ಕೊರಲಿನಿಂದ ಮನವಿ ಮಾಡಿದರು.
ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಅಣಜಿ ನಾಗರಾಜ, ಮಂಜುನಾಥ, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ, ರಾಮಗೊಂಡನಹಳ್ಳಿ ಶರಣಪ್ಪ, ಗುಮ್ಮನೂರು ಶಂಭುಲಿಂಗಪ್ಪ, ಆಲೂರು ಸೋಮಣ್ಣ, ಆನಗೋಡು ಕರಿಬಸಪ್ಪ, ಬಾಡಾ ರುದ್ರಸ್ವಾಮಿ, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.- - -
(ಬಾಕ್ಸ್)* ಸಿದ್ದು, ಡಿಕೆಶಿ, ಹೈಕಮಾಂಡ್‌ಗೂ ಒತ್ತಡ ಮತ್ತೊಂದು ಕಡೆ ಮಾಜಿ ಸಚಿವ ಎಚ್.ಆಂಜನೇಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ, ಸಚಿವ ಸಂಪುಟ ವಿಸ್ತರಣೆಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕಾಲದಿಂದಲೂ ಮಾದಿಗ ಸಮುದಾಯವು ಕಾಂಗ್ರೆಸ್ ಪಕ್ಷವನ್ನು ನಿರಂತರ ನಂಬಿ, ಬೆಂಬಲಿಕೊಂಡು ಬಂದಿದೆ. ಮಾದಿಗ ಸಮುದಾಯವು ಪಕ್ಷದ ಭದ್ರವಾದ ಮತ ಬ್ಯಾಂಕ್ ಆಗಿದೆ. ಆದ್ದರಿಂದ ಪಕ್ಷದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ನಮ್ಮ ಸಮುದಾಯಕ್ಕೆ ಹೆಚ್ಚಿನ ಸ್ಥಾನಮಾನ ನೀಡಬೇಕು. ಇದರಿಂದ ಮುಂಬರುವ ದಿನಗಳಲ್ಲಿ ಪಕ್ಷಕ್ಕೂ ಮತ್ತಷ್ಟು ಬಲ ಬರಲಿದೆ ಎಂದು ಉಭಯ ನಾಯಕರಿಗೆ ಎಚ್.ಆಂಜನೇಯ ಮನವರಿಕೆ ಮಾಡಿಕೊಟ್ಟರು.ಈಗಾಗಲೇ ಎಡ ಸಮುದಾಯದ ಕೋಟಾದಡಿ ಒಬ್ಬರಿಗೆ ಸಚಿವ ಸ್ಥಾನವನ್ನು ನೀಡಲಾಗಿದ್ದು, ಮಾದಿಗ ಸಮುದಾಯದ ಇನ್ನೂ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕು. ಅದರಲ್ಲಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅವರಿಗೆ ಅವಕಾಶ ಕಲ್ಪಿಸಬೇಕು. ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ, ಹಾವೇರಿ, ವಿಜಯನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿರುವ ಮಾದಿಗ ಸಮುದಾಯಕ್ಕೆ ಸ್ಥಾನಮಾನ, ಅವಕಾಶ ನೀಡಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದಾರೆ.
- - --8ಕೆಡಿವಿಜಿ5:
ಬೆಂಗಳೂರಿನಲ್ಲಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅವರಿಗೆ ಮಾದಿಗ ಸಮುದಾಯದಿಂದ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಭೇಟಿ ಮಾಡಿ ಒತ್ತಡ ಹೇರಿದರು.