ಸಮಸ್ಯೆ ಮುಕ್ತ ಅಗಳಕುಪ್ಪೆ ಗ್ರಾಮ ಎಂದ ಮಹಿಳೆಯರಿಗೆ ಧನ್ಯವಾದ ತಿಳಿಸಿದ ಶಾಸಕರು

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಜೊತೆಗೆ ರಂಗೋಲಿ ಸ್ಪರ್ಧೆಗಳ ಮೂಲಕ ಮಹಿಳೆಯರಿಗೆ ಉತ್ತೇಜನ ನೀಡುವುದು ಹಾಗೂ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಭೇಟಿ ನೀಡಿ ವೈಯಕ್ತಿಕವಾಗಿ ಜನರ ಸಮಸ್ಯೆ, ಮಹಿಳೆಯರ ಸಮಸ್ಯೆ, ರೈತರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕೆಲಸಕ್ಕೆ ಮುಂದಾಗಿದ್ದೇನೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ಸೋಂಪುರ ಹೋಬಳಿಯ ಅಗಳಕುಪ್ಪೆ ಗ್ರಾಮದಲ್ಲಿ ನೆಲಮಂಗಲ ಉತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಕಷ್ಟ- ಸುಖ ಆಲಿಸುವುದು ನನ್ನ ಕರ್ತವ್ಯ:

ರಂಗೋಲಿಗೆ ನಮ್ಮ ಹಿಂದೂ ಧರ್ಮದಲ್ಲಿ ಪ್ರಮುಖ ಸ್ಥಾನ ನೀಡಿದ್ದೇವೆ. ಇಂದಿಗೂ ಮಹಿಳೆಯರು ಪ್ರತಿ ಮನೆಯ ಮುಂದೆ ಬೆಳಗ್ಗೆ ರಂಗೋಲಿ ಬಿಡಿಸಿ ಮನೆಯ ಕಾರ್ಯಗಳನ್ನು ಆರಂಭಿಸುವುದು ರೂಢಿಯಲ್ಲಿದೆ. ಮಹಿಳೆಯರು ಕಳೆದ ಚುನಾವಣೆಯಲ್ಲಿ ನನಗೆ ಹೆಚ್ಚು ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ. ಅವರ ಕಷ್ಟ- ಸುಖಗಳನ್ನು ಆಲಿಸುವುದು ನನ್ನ ಕರ್ತವ್ಯ, ಹಾಗಾಗಿ ರಂಗೋಲಿ ಸ್ಪರ್ಧೆ ಮೂಲಕ ಮಹಿಳೆಯರನ್ನು ನೇರವಾಗಿ ಭೇಟಿ ಮಾಡಿ ಮುಖಾಮುಖಿ ಮಾತನಾಡಿ, ಅವರ ಕಷ್ಟ- ಸುಖಗಳನ್ನು ತಿಳಿದು ಸಾಧ್ಯವಾದಷ್ಟು ಪರಿಹರಿಸುತ್ತಿದ್ದೇನೆ ಎಂದರು.


ಎಲ್ಲರೂ ಸಹಕಾರ ನೀಡಿ:

ನೆಲಮಂಗಲ ಉತ್ಸವ ಅಂಗವಾಗಿ ತಾಲೂಕಿನಲ್ಲಿ ಸುಮಾರು 4500 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದ್ದೇನೆ. ಅದರ ಮುಂದಿನ ಭಾಗವಾಗಿ ರಂಗೋಲಿ ಸ್ಪರ್ಧೆ ಆಯೋಜಿಸಿದ್ದೇನೆ. ಮುಂದಿನ ದಿನಗಳಲ್ಲಿ ಯುವಕರಿಗೆ, ರೈತರಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯಿದ್ದು, ಎಲ್ಲರೂ ಸಹಕಾರ ನೀಡಬೇಕು ಎಂದರು.

ಸಮಸ್ಯೆ ಮುಕ್ತ ಗ್ರಾಮ:

ಸುಮಾರು ದಶಕಗಳಿಂದ ದಾಬಸ್‍ಪೇಟೆ- ಅಗಳಕುಪ್ಪೆ ರಸ್ತೆ ಕಿರಿದಾಗಿದ್ದು ವಾಹನಗಳು ಸುಗಮವಾಗಿ ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ಗೋವಿಂದರಾಜು ಅವರು ಗಮನಕ್ಕೆ ತಂದ ಮೊದಲ ವರ್ಷದಲ್ಲೇ ರಸ್ತೆಯನ್ನು ಅಗಲೀಕರಣ ಮಾಡಿ ಕಾಂಕ್ರೀಟ್ ರಸ್ತೆ ಮಾಡಿಸಿದ್ದೇನೆ. ಅಗಳಕುಪ್ಪೆ ಗೋವಿಂದರಾಜುರವರು ಗ್ರಾಮದ ಎಲ್ಲಾ ಕೆಲಸಗಳನ್ನು ಮಾಡಿಸಿದ್ದಾರೆ. ಅಗಳಕುಪ್ಪೆ ಸಮಸ್ಯೆ ಮುಕ್ತ ಗ್ರಾಮವಾಗಿದೆ ಎಂದು ಮಹಿಳೆಯರೇ ಹೇಳಿರುವುದು ಸಂತಸ ತಂದಿದೆ ಎಂದರು.

ಮಹಿಳೆಯರಿಂದ ಮನವಿ ಸ್ವೀಕಾರ: ಇದೇ ಸಂದರ್ಭದಲ್ಲಿ ಮಹಿಳೆಯರು ಸಿದ್ಧರಬೆಟ್ಟಕ್ಕೆ ರಸ್ತೆ ನಿರ್ಮಿಸಿಕೊಡುವಂತೆ ಮನವಿ ಮಾಡಿದಾಗ ಈ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಪಡೆದು ರಸ್ತೆ ನಿರ್ಮಿಸಲು ಕ್ರಮ ವಹಿಸುತ್ತೇನೆ. ಸ್ತ್ರೀಶಕ್ತಿ ಭವನಗಳ ನಿರ್ಮಾಣಕ್ಕೆ ಅನುದಾನ ನೀಡುವ ಭರವಸೆ ನೀಡಿದರು.

ರಂಗೋಲಿ ಬಿಡಿಸಿದ ಯುವಕರು:

ಕೃಷ್ಣಾಪುರ, ಹಳೆನಿಜಗಲ್ ಗ್ರಾಮದಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರ ಜೊತೆ ಯುವಕರು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ರಂಗೋಲಿ ಚಿತ್ರ ಹಾಗೂ ಹಳೆನಿಜಗಲ್ ಗ್ರಾಮದ ಯುವಕರು ರಂಗೋಲಿ ಚಿತ್ರ ಬಿಡಿಸಿ ಎಲ್ಲರನ್ನೂ ಆಕರ್ಷಿಸಿದ್ದು ವಿಶೇಷವಾಗಿತ್ತು.

ವಿವಿಧ ಗ್ರಾಮಗಳಲ್ಲಿ ಆಯೋಜನೆ: ಅಗಳಕುಪ್ಪೆ ಗ್ರಾಪಂ ವ್ಯಾಪ್ತಿಯ ಅಗಳಕುಪ್ಪೆ, ಕೃಷ್ಣಾಪುರ, ಕಲ್ಲನಾಯ್ಕನಹಳ್ಳಿ, ಬೀರಗೊಂಡನಹಳ್ಳಿ, ಕಾಮಾಲಾಪುರ, ಅರಳಿಮರದಪಾಳ್ಯ, ದೇವರಹೊಸಹಳ್ಳಿ, ಲಕ್ಷ್ಮೀನಗರ, ಹಳೆನಿಜಗಲ್, ಕಸಬಾನಿಜಗಲ್, ಮುದ್ದರಾಮನಾಯಕನಪಾಳ್ಯ ಲಕ್ಕೂರು ಗ್ರಾಮದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಿದ್ದು, ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ತಾಪಂ ಮಾಜಿ ಅಧ್ಯಕ್ಷೆ ಮಮತಾ ಗೋವಿಂದರಾಜು, ತಾಪಂ ಮಾಜಿ ಅಧ್ಯಕ್ಷೆ ಮಮತಾ ಗೋವಿಂದರಾಜು, ಜಯಮ್ಮ, ಜಯಲಕ್ಷ್ಮಮ್ಮ, ವನಿತಾ, ಶೋಭಾ ಖಲೀಂಉಲ್ಲಾ, ಶಿವಕುಮಾರ್, ಸಿದ್ದರಾಜು, ವೆಂಕಟಾಚಲಯ್ಯ, ಪಾರ್ಥ, ನಾರಾಯಣ್, ಸುರೇಶ್, ಶ್ರೀನಿವಾಸ್ ಸೇರಿ ನೂರಾರು ಮುಖಂಡರು ಉಪಸ್ಥಿತರಿದ್ದರು.