ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್ ನೌಕರರಿಗೆ ವಾರದಲ್ಲಿ ಐದು ದಿನ ಮಾತ್ರ ಕೆಲಸ ನಿರ್ವಹಿಸಿಕೊಂಡು ಉಳಿದ ಎರಡು ದಿನಗಳು ರಜೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಮುಖಂಡರುಗಳು ನಗರದ ಕೆನರಾ ಬ್ಯಾಂಕ್ ಮುಖ್ಯ ಕಚೇರಿ ಆವರಣದಲ್ಲಿ ಶುಕ್ರವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

ಚಿಕ್ಕಮಗಳೂರು: ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್ ನೌಕರರಿಗೆ ವಾರದಲ್ಲಿ ಐದು ದಿನ ಮಾತ್ರ ಕೆಲಸ ನಿರ್ವಹಿಸಿಕೊಂಡು ಉಳಿದ ಎರಡು ದಿನಗಳು ರಜೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಮುಖಂಡರುಗಳು ನಗರದ ಕೆನರಾ ಬ್ಯಾಂಕ್ ಮುಖ್ಯ ಕಚೇರಿ ಆವರಣದಲ್ಲಿ ಶುಕ್ರವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ್, ಇಂದು ವಿವಿಧ ಬ್ಯಾಂಕ್‌ ಒಟ್ಟಾಗಿ ಪೂರ್ವಭಾವಿಯಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಜ.27 ರಂದು ಇಡಿ ದೇಶಾದ್ಯಂತ ನೌಕರರ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.ಪ್ರಸ್ತುತ ಬ್ಯಾಂಕ್ ವೃತ್ತಿಯಲ್ಲಿ ನೌಕರರು ಸಿಬ್ಬಂದಿ ಕೊರತೆಯಿಂದ ಬಹುತೇಕ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೇ ಆಧುನಿಕ ಕಾಲದಲ್ಲಿ ಬ್ಯಾಂಕಿನ ವಹಿವಾಟು, ಹಣ ಕಟ್ಟಲು ಅಥವಾ ಹಿಂಪಡೆಯಲು ಎಲ್ಲವು ಎಟಿಎಂನಲ್ಲೇ ಸೌಲಭ್ಯ ಕಲ್ಪಿಸಿರುವ ಹಿನ್ನೆಲೆಯಲ್ಲಿ ನೌಕರರಿಗೆ ಕೊಂಚ ಸಹಕರಿಸಿ ವಾರದಲ್ಲಿ ಐದು ದಿನ ಮಾತ್ರ ಕೆಲಸ ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಈಗಾಗಲೇ ಸರ್ಕಾರಿ ನೌಕರರು, ಇನ್ಸೂರೆನ್ಸ್, ಆರ್‌ಬಿಐ ಸೇರಿದಂತೆ ಅನೇಕ ಸಂಸ್ಥೆಗಳಿಗೆ ವಾರದಲ್ಲಿ ಐದು ದಿನ ಮಾತ್ರ ಕೆಲಸವಿದೆ. ಆದರೆ, ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಬ್ಯಾಂಕ್ ನೌಕರರಿಗೆ ವಾರ ಪೂರ್ತಿ ಕೆಲಸ ತೀವ್ರ ಒತ್ತಡಕ್ಕೆ ಕಾರಣವಾಗುತ್ತಿದೆ. ಅಲ್ಲದೇ ಐದು ದಿನ ಕೆಲಸ ನಿರ್ವಹಿಸಿದರೆ ಬ್ಯಾಂಕ್ ಗ್ರಾಹಕರಿಗೂ ಯಾವುದೇ ಸಮಸ್ಯೆಯಿಲ್ಲದ ಕಾರಣ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸಂಘದ ಸಂಘಟನಾ ಕಾರ್ಯದರ್ಶಿ ಉಜ್ವಲ್ ಪಡುಬಿದ್ರಿ, ಎಸ್‌ಬಿಐ ಬ್ಯಾಂಕ್ ಸಹಾಯಕ ಅಧಿಕಾರಿ ಚಂದನ್, ಸಂಘದ ಸದಸ್ಯರಾದ ದೀಪಕ್, ಪ್ರದೀಪ್, ಎಂ.ಟಿ.ಪ್ರಕಾಶ್, ಗಂಗಾಧರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.