ಸಾರಾಂಶ
ಕಾರವಾರ: ನಗರದಲ್ಲಿ ಬೀದಿನಾಯಿ, ಬೀಡಾಡಿ ಜಾನುವಾರುಗಳು ಅಧಿಕವಾಗಿದ್ದು, ಇವುಗಳ ಉಪಟಳದಿಂದ ಸಾಕಷ್ಟು ತೊಂದರೆಯಾಗುತ್ತಿದೆ. ನಿಯಂತ್ರಣಕ್ಕೆ ನಗರಸಭೆಯಿಂದ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ನಗರಸಭೆಯ ಸದಸ್ಯ ನಂದಾ ನಾಯ್ಕ ಆಗ್ರಹಿಸಿದರು.ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ರಾತ್ರಿ ವೇಳೆ ನಾಯಿಗಳು ಸತತವಾಗಿ ಬೊಗಳುತ್ತಿರುವುದರಿಂದ ನಿದ್ರೆ ಬರುವುದಿಲ್ಲ. ಏಕಾಏಕಿ ಮನುಷ್ಯರ ಮೇಲೆ ಎರಗುತ್ತವೆ. ಜೀವಭಯದಿಂದಲೇ ಸಂಚಾರ ಮಾಡುವಂತಾಗಿದೆ.
ನಗರದ ಬಹುತೇಕ ರಸ್ತೆಗಳ ಮೇಲೆ ಜಾನುವಾರುಗಳು ಮಲಗಿರುವುದುರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತದೆ. ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಜನರು ಸದಸ್ಯರಿಗೆ ದೂರುತ್ತಿದ್ದಾರೆ. ಬೀಡಾಡಿ ಜಾನುವಾರು, ಬೀದಿನಾಯಿಗಳ ಉಪಟಳದಿಂದ ಹಿಂಸೆಯಾಗುತ್ತಿದೆ. ಇವುಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದರು.ಸದಸ್ಯ ಪ್ರೇಮಾನಂದ ಗುನಗ, ಬೀದಿನಾಯಿಗಳನ್ನು ಹಿಡಿದು ಒಂದು ನಿರ್ದಿಷ್ಟ ಜಾಗ ಗುರುತಿಸಿ ಅಲ್ಲಿ ಸಾಕಬೇಕು. ಅವುಗಳು ರಸ್ತೆಗೆ ಬರಲು ಬಿಡಬಾರದು ಎಂದರು.ಸದಸ್ಯ ಗಣಪತಿ ನಾಯ್ಕ ಮಾತನಾಡಿ, ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ₹೧೦ ಲಕ್ಷ ಖರ್ಚು ಮಾಡಿ ಸಂತಾನಶಕ್ತಿಹರಣ ಶಸ್ತ್ರ ಚಿಕಿತ್ಸೆಗೆ ಆಪರೇಷನ್ ಥೀಯೇಟರ್ ಮಾಡಲಾಗಿತ್ತು. ಆದರೆ ಅದು ಬಳಕೆಯಾಗುತ್ತಿಲ್ಲ. ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪೌರಾಯುಕ್ತ ಜಗದೀಶ ಹುಲಗೆಜ್ಜಿ ಮಾತನಾಡಿ, ನಾಯಿಗಳನ್ನು ಒಂದೆಡೆ ಹಿಡಿದಿಡಲು ಕಾನೂನಿನಲ್ಲಿ ಅವಕಾಶವಿಲ್ಲ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿದರೂ ಬಳಿಕ ಯಾವ ಜಾಗದಲ್ಲಿ ಹಿಡಿಯಲಾಗಿದೆಯೇ ಅಲ್ಲಿಯೆ ಬಿಡಬೇಕು ಎಂದಿದೆ ಎಂದ ಅವರು, ಜಾನುವಾರುಗಳಿಂದ ಅಪಘಾತ ಆಗಬಾರದು ಎಂದು ರೇಡಿಯಂ ಹಾಕಬೇಕು ಎಂಬ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.ಗಣಪತಿ ನಾಯ್ಕ, ಹೂವು ಹಣ್ಣು ಮಾರುಕಟ್ಟೆ ಬಾಡಿಗೆ ಪಾವತಿ ಮಾಡುತ್ತಿಲ್ಲವೇ? ಏಕೆ ಅಲ್ಲಿ ಅವಕಾಶ ನೀಡಬೇಕು? ಖಾಲಿ ಮಾಡಿಸಿ, ಆ ಜಾಗವನ್ನು ಬೇರೆ ಕೆಲಸಕ್ಕೆ ಉಪಯೋಗಿಸಿ ಎಂದರು.ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ ಖಾಲಿ ಮಾಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಉಪಾಧ್ಯಕ್ಷೆ ಪ್ರೀತಿ ಜೋಶಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ ಹಾಗೂ ಸದಸ್ಯರು ಇದ್ದರು.
ಇಂದಿನಿಂದ ದೀಪೋತ್ಸವ, ವಿವಿಧ ಕಾರ್ಯಕ್ರಮಭಟ್ಕಳ: ಪಟ್ಟಣದ ಲಕ್ಷ್ಮೀನಾರಾಯಣ ರಾಮನಾಥ ಶಾಂತೇರಿ ಕಾಮಾಕ್ಷಿ ಬೇತಾಳ ದೇವಸ್ಥಾನದಲ್ಲಿ ಡಿ. ೧ರಿಂದ ಡಿ. ೭ರ ವರೆಗೆ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ವಾಸ್ತವ್ಯ ಮತ್ತು ದೀಪೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.ದೇವಸ್ಥಾನದಲ್ಲಿ ವಿದ್ಯಾದೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಮಾರ್ಗದರ್ಶನ ಮತ್ತು ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಭಾನುವಾರ ಬೆಳಗ್ಗೆ ನಸುಕಿನ ಜಾವ ದೇವಿಯ ದಿವ್ಯ ರೂಪ ದರ್ಶನ, ಶ್ರೀರಾಮ ನಾಮ ಜಪ ನಡೆಯಲಿದೆ. ಸಂಜೆ ೭ ಗಂಟೆಗೆ ಶ್ರೀಗಳನ್ನು ಮೂಡಭಟ್ಕಳ ಬೈಪಾಸ್‌ನಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಅಲಂಕೃತ ವಾಹನದಲ್ಲಿ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಗುತ್ತದೆ.ಅಮಾವಾಸ್ಯೆ ಪ್ರಯುಕ್ತ ಅಷ್ಠಾವಧಾನ ಸೇವೆಯೊಂದಿಗೆ ದೇವರ ಪಲ್ಲಕ್ಕಿ ಉತ್ಸವ, ದೇವರನ್ನು ದೋಣಿಯಲ್ಲಿ ಇರಿಸಿ ವಿಶೇಷ ದೀಪೋತ್ಸವ, ಪೂಜೆ ಬಳಿಕ ಪ್ರಸಾದ ಭೋಜನ ನಡೆಯಲಿದೆ. ಡಿ. ೨ರಂದು ದಿನೇಶ ಪೈ ದಂಪತಿಗಳ ಷಷ್ಠಬ್ದಿ ಪೂರ್ತಿ ಉಗ್ರರಥ ಶಾಂತಿ, ಸಂಜೆ ಶ್ರೀಗಳಿಂದ ಆಶೀರ್ವಚನ, ಸಭಾ ಕಾರ್ಯಕ್ರಮ, ಬಳಿಕ ಗೀತರಾಮಾಯಣ ಕಾರ್ಯಕ್ರಮ ನಡೆಯಲಿದೆ. ಡಿ. ೩ರಂದು ಧಾರ್ಮಿಕ ಅನುಷ್ಟಾನಗಳೊಂದಿಗೆ ಸಂಜೆ ನರಸಿಂಹ ನೃತ್ಯ ರೂಪಕ, ಡಿ. ೪ರಂದು ಭಕ್ತಿ ಸಂಗೀತ ಹಾಗೂ ಮರಾಠಿ ಅಭಂಗ, ಡಿ. ೫ರಂದು ಹಿಂದೂಸ್ಥಾನಿ ಗಾಯನ ಹಾಗೂ ಕೊಳಲು ಜುಗಲ್ಬಂದಿ ಜಯತೀರ್ಥ ಮೇವಂಡಿ ಹುಬ್ಬಳ್ಳಿ ಮತ್ತು ಪ್ರವೀಣ ಗೊಡ್ಕಂಡಿ ಬೆಂಗಳೂರು ಇವರಿಂದ ನಡೆಯಲಿದೆ.
ಡಿ. ೬ರಂದು ಲಕ್ಷ ಕುಂಕುಮಾರ್ಚನೆ, ದೇವರಿಗೆ ತೊಟ್ಟಿಲು ಸೇವೆ, ಬಸ್ತಿ ಕವಿತಾ ಶೇಣೈ ವೃಂದದವರಿಂದ ಭಜನ ಸಂಧ್ಯಾ, ಡಿ. ೭ರಂದು ೫.೩೦ಕ್ಕೆ ಶ್ರೀಗಳನ್ನು ಮುಂದಿನ ಮೊಕ್ಕಾಂಗೆ ಬೀಳ್ಕೊಡಲಾಗುವುದು. ಬಳಿಕ ಚಂಪಾ ಸೃಷ್ಟಿಯ ಪ್ರಯುಕ್ತ ಪಲ್ಲಕ್ಕಿ ಉತ್ಸವ ನಡೆಯಲಿದೆ.